ಒಂದು ವಾರವಿಟ್ರೂ ಕೆಡದ ರೀತಿಯಲ್ಲಿ ತಯಾರಿಸಿ ಪ್ರಿ ಮಿಕ್ಸ್ ಟೊಮೆಟೋ ರೈಸ್ ರೆಸಿಪಿ
Tomato Gojju Recipe: ಬಿಸಿಯಾದ ಅನ್ನಕ್ಕೆ ರುಚಿಕರವಾದ ಟೊಮೆಟೋ ಗೊಜ್ಜು ಮಾಡುವ ಸುಲಭ ವಿಧಾನ ಇಲ್ಲಿದೆ. ಒಂದು ವಾರಕ್ಕೂ ಹೆಚ್ಚು ಕಾಲ ತಾಜಾ ಆಗಿ ಉಳಿಯುವ ಈ ಗೊಜ್ಜನ್ನು ಮನೆಯಲ್ಲಿಯೇ ತಯಾರಿಸಿ.
ಬೆಳಗ್ಗೆ ಎದ್ದ ಕೂಡಲೇ ತಿಂಡಿಗೆ ಏನು ಯೋಚನೆ ಎಂಬ ಪ್ರಶ್ನೆಗೆ ಪ್ರತಿದಿನ ಗೃಹಿಣಿಯರು ಉತ್ತರ ಹುಡುಕುತ್ತಿರುತ್ತಾರೆ. ಅದರಲ್ಲಿ ಗಂಡ-ಹೆಂಡತಿ ಇಬ್ಬರು ಕೆಲಸ ಮಾಡುತ್ತಿದ್ದು, ಒಂದೇ ಸಮಯಕ್ಕೆ ಹೋಗುತ್ತಿದ್ದರೆ ಅಡುಗೆ ಕೆಲಸ ಅನ್ನೋದು ಕೆಲವೊಮ್ಮೆ ಅಗ್ನಿಪರೀಕ್ಷೆ ಆಗುತ್ತದೆ.
ಇಂದು ನಾವು ನಿಮಗೆ ಒಂದು ವಾರವಿಟ್ಟರೂ ಕೆಡದಂಥಹ ಪ್ರಿ ಮಿಕ್ಸ್ ಟೊಮೆಟೋ/ಟೊಮೆಟೋ ಗೊಜ್ಜಿನ ರೆಸಿಪಿ ಹೇಳುತ್ತಿದ್ದೇವೆ. ಬಿಸಿಯಾದ ಅನ್ನಕ್ಕೆ ಈ ಗೊಜ್ಜು ಸೇರಿಸಿದ್ರೆ ರುಚಿಯಾದ ಟೊಮೆಟೋ ರೈಸ್ ಸವಿಯಲು ಸಿದ್ಧವಾಗುತ್ತದೆ.
ಟೊಮೆಟೋ ಗೊಜ್ಜು ಮಾಡಲು ಬೇಕಾಗುವ ಸಾಮಾಗ್ರಿಗಳು
ಟೊಮೆಟೋ ಹಣ್ಣು: 1 ಕೆಜಿ, ಮಧ್ಯಮ ಗಾತ್ರದ 2 ಈರುಳ್ಳಿ, ಹಸಿಶುಂಠಿ: ಮೂರರಿಂದ ನಾಲ್ಕು ಇಂಚು, ಬೆಳ್ಳುಳ್ಳಿ: 10 ರಿಂದ 15 ಎಸಳು, ಬ್ಯಾಡಗಿ ಮೆಣಸಿನಕಾಯಿ: 5, ಅಡುಗೆ ಎಣ್ಣೆ: 8 ಟೀ ಸ್ಪೂನ್, ಧನಿಯಾ ಪುಡಿ: 1 ಟೀ ಸ್ಪೂನ್, ಕಾಶ್ಮೀರಿ ಚಿಲ್ಲಿ ಪೌಡರ್: 2 ಟೀ ಸ್ಪೂನ್, ಅಚ್ಚ ಖಾರದ ಪುಡಿ: 1 ಟೀ ಸ್ಪೂನ್, ಅರಿಶಿನ ಪುಡಿ:1/2 ಟೀ ಸ್ಪೂನ್, ಕರೀಬೇವು: 15 ರಿಂದ 20 ಎಲೆ, ಉಪ್ಪು: ರುಚಿಗೆ ತಕ್ಕಷ್ಟು, ಸಾಸವೆ: 2 ಟೀ ಸ್ಪೂನ್, ಜೀರಿಗೆ: 1 ಟೀ ಸ್ಪೂನ್, ಜೀರಿಗೆ ಪೌಡರ್: 1 ಟೀ ಸ್ಪೂನ್
ಟೊಮೆಟೋ ಗೊಜ್ಜು ಮಾಡುವ ವಿಧಾನ
ಮೊದಲಿಗೆ 1 ಕೆಜಿ ಟೊಮೆಟೋದಲ್ಲಿ ಎರಡು ಹಣ್ಣು ಎತ್ತಿಟ್ಟುಕೊಂಡು ಎಲ್ಲವನ್ನು ಕತ್ತರಿಸಿಕೊಂಡು ಮಿಕ್ಸಿಗೆ ಹಾಕಿ ಸಣ್ಣದಾಗಿ ರುಬ್ಬಿಕೊಳ್ಳಿ. ಎತ್ತಿಟ್ಟುಕೊಂಡಿರುವ 2 ಟೊಮೆಟೋವನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಒಲೆ ಆನ್ ಮಾಡ್ಕೊಂಡು 4 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ನಂತರ ಇದಕ್ಕೆ ಕಾಶ್ಮೀರಿ ಚಿಲ್ಲಿ ಪೌಡರ್, ಅಚ್ಚ ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ತದನಂತರ ರುಬ್ಬಿಕೊಂಡಿರುವ ಟೊಮೆಟೋ ಪೇಸ್ಟ್ ಸೇರಿಸಿ, ಸ್ವಲ್ಪ ಉಪ್ಪು ಹಾಕಿ ಕಡಿಮೆ ಉರಿಯಲ್ಲಿ ತಳ ಹಿಡಿಯದಂತೆ 5 ರಿಂದ 6 ನಿಮಿಷ ಬೇಯಿಸಿಕೊಳ್ಳಬೇಕು. ನೀರಿನಂಶವೆಲ್ಲಾ ಹೋಗಿ ಪೇಸ್ಟ್ ಗಟ್ಟಿಯಾಗೋವರೆಗೂ ಬೇಯಿಸಿಕೊಳ್ಳಬೇಕು.
ಬಳಿಕ ಮತ್ತೊಂದು ಪಾತ್ರೆಯನ್ನು ಒಲೆ ಮೇಲೆ ಇರಿಸಿಕೊಳ್ಳಿ. ಇದಕ್ಕೆ 4 ಟೀ ಸ್ಪೂನ್ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾತ್ತಿದ್ದಂತೆ ಸಾಸವೆ, ಜೀರಿಗೆ, ಕರೀಬೇವು ಸೇರಿಸಿ. ಆ ಬಳಿಕ ತರಿತರಿಯಾಗಿ ಜಜ್ಜಿಕೊಂಡಿರುವ ಶುಂಠಿ ಮತ್ತು ಬೆಳ್ಳುಳ್ಳಿ, ಬ್ಯಾಡಗಿ ಮೆಣಸಿನಕಾಯಿ ಸೇರಿಸಿ ಫ್ರೈ ಮಾಡಿಕೊಳ್ಳಬೇಕು. ತದನಂತರ ಸಣ್ಣದಾಗಿ ಕತ್ತರಿಸಿಕೊಂಡಿರುವ ಟೊಮೆಟೋ ಮತ್ತು ಈರುಳ್ಳಿ ಸೇರಿಸಿ ಎರಡೂ ಸಾಫ್ಟ್ ಆಗೋವರೆಗೂ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ. ಈ ವೇಳೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಟೊಮೆಟೋ ಮತ್ತು ಈರುಳ್ಳಿ ಸಾಫ್ಟ್ ಆಗುತ್ತಿದ್ದಂತೆ, ಈ ಮೊದಲೇ ಎಲ್ಲಾ ಮಸಾಲೆಗಳೊಂದಿಗೆ ಬೇಯಿಸಿಕೊಂಡಿರುವ ಟೊಮೆಟೋ ಮಿಶ್ರಣ ಸೇರಿಸಿ ತಳ ಹಿಡಿಯದಂತೆ ಕಡಿಮೆ ಉರಿಯಲ್ಲಿ ನಾಲ್ಕರಿಂದ ಐದು ನಿಮಿಷ ಬೇಯಿಸಿಕೊಳ್ಳಿ. ಕೊನೆಗೆ ಕೋತಂಬರಿ ಸೊಪ್ಪು ಸೇರಿಸಿದ್ರೆ ಟೊಮೆಟೋ ಗೊಜ್ಜು ಸಿದ್ಧವಾಗುತ್ತದೆ. ಗೊಜ್ಜು ತಣ್ಣಗಾದ ನಂತರ ಗಾಳಿಯಾಡದ ಜಾರ್‌ಗೆ ತುಂಬಿಸಿಕೊಂಡು ಇಟ್ಟುಕೊಳ್ಳಿ.