ಹತ್ತು ನಿಮಿಷಗಳಲ್ಲಿ ತಯಾರಾಗುವ ಈಸಿ ಎಗ್ ಬ್ರೇಕ್‌ಫಾಸ್ಟ್ ರೆಸೆಪಿ!
ಬೆಳಿಗ್ಗಿನ ತಿಂಡಿ ಹೊಂದಿಸಿ ಕೊಳ್ಳುವುದು ತುಂಬಾ ತಲೆ ನೋವಿನ ಕೆಲಸ. ದಿನನಿತ್ಯದ ಗಡಿಬಿಡಿ ಜೀವನದಲ್ಲಿ ಕೆಲವೊಮ್ಮೆ ಗಂಟೆಗಟ್ಟಲೆ ತಿಂಡಿ ತಯಾರಿಸಲು ಅಡುಗೆ ಮನೆಯಲ್ಲಿ ಕಾಲ ಕಳೆಯುವುದು ಅಸಾಧ್ಯ. ಅಂತಹ ಸಮಯದಲ್ಲಿ ಈಸಿ ಸಿಂಪಲ್ ರೆಸೆಪಿಗಳಿಂದ ತುಂಬಾ ಸಹಾಯವಾಗುತ್ತದೆ. ಇಲ್ಲಿವೆ ನೋಡಿ ಕಡಿಮೆ ಸಮಯದಲ್ಲ್ಲಿ ಮೊಟ್ಟೆಯಿಂದ ಮಾಡಬಹುದಾದ ಬ್ರೇಕ್‌ಫಾಸ್ಟ್‌ಗಳು. ಹತ್ತು ನಿಮಿಷ ಸಾಕು ಇವುಗಳನ್ನು ಪ್ರಿಪೇರ್ ಮಾಡಲು.
ಬೆಳಿಗ್ಗೆ ಬ್ರೇಕ್‌ಫಾಸ್ಟ್ ತಯಾರಿಸುವುದರಲ್ಲಿ ತುಂಬಾ ಸಮಯ ವೇಸ್ಟ್ ಆಗುತ್ತಿದ್ದು, ಕೆಲಸಕ್ಕೆ ಹೋಗುವ ಗಡಿಬಿಡಿಯಲ್ಲಿ ನಿಮ್ಮ ಕುಟುಂಬಕ್ಕಾಗಿ ಬೆಳಗ್ಗಿನ ತಿಂಡಿ ತಯಾರಿಸಲು ಹೆಣಗಾಡುತ್ತಿರುವವರಲ್ಲಿ ನೀವು ಒಬ್ಬರಾಗಿದ್ದರೆ, ಮೊಟ್ಟೆ ನಿಮ್ಮ ಸಹಾಯಕ್ಕೆ ಬರುವುದು ಗ್ಯಾರಂಟಿ.
ಸಮಯವನ್ನು ಉಳಿಸುವ ಮತ್ತು ಫಿಟ್ ಹಾಗೂ ಆರೋಗ್ಯವಾಗಿಡಲು ಸಹಾಯ ಮಾಡುವ ಹತ್ತು ನಿಮಿಷಗಳಲ್ಲಿ ತಯಾರಿಸಬಹುದಾದ ಮೊಟ್ಟೆಯ ಬ್ರೇಕ್‌ಫಾಸ್ಟ್‌ಗಳು ಇಲ್ಲಿವೆ. ಈಸಿ ಎಗ್ ರೆಸೆಪಿಗಳನ್ನು ಟ್ರೈಮಾಡಿ.
ಎಗ್ ಟೋಸ್ಟ್ : 4 ಮೊಟ್ಟೆಗಳು, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 4-6 ಹಸಿರು ಮೆಣಸಿನಕಾಯಿ, ಕತ್ತರಿಸಿದ ಚೆಡ್ಡಾರ್ ಅಥವಾ ಮೊಜೊರೆಲ್ಲಾ ಚೀಸ್, ಉಪ್ಪು, 6 ತುಂಡು ಬ್ರೆಡ್, ಎಣ್ಣೆ ಅಥವಾ ಬೆಣ್ಣೆ .
ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಒಡೆದು ಬೀಟ್ ಮಾಡಿ. ಕತ್ತರಿಸಿದ ಈರುಳ್ಳಿ, ಹಸಿ ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ. ನಾನ್-ಸ್ಟಿಕ್ ಪ್ಯಾನ್ ಅನ್ನು ಬಿಸಿ ಮಾಡಿ, ಗ್ರೀಸ್ ಮಾಡಿ. ಬ್ರೆಡ್‌ಗಳನ್ನು ಇಟ್ಟು ಮೊಟ್ಟೆ ಮಿಶ್ರಣವನ್ನು ಮೇಲೆ ಸುರಿಯಿರಿ. ಮೊಟ್ಟೆಯ ಮಿಶ್ರಣ ಸೆಟ್ ಆಗುವವರೆಗೆ, ಎರಡು ನಿಮಿಷಗಳ ಕಾಲ ಬೇಯಿಸಿ. ಬ್ರೆಡ್‌ನ ಇನ್ನೊಂದು ಬದಿಯನ್ನು ಒಂದೆರಡು ನಿಮಿಷ ಬೇಯಿಸಿ. ಬ್ರೆಡ್ ಚೂರುಗಳನ್ನು ಮತ್ತೆ ತಿರುಗಿಸಿ, ಕತ್ತರಿಸಿದ ಚೆಡ್ಡಾರ್ ಅಥವಾ ತುರಿದ ಮೊಜೊರೆಲ್ಲಾ ಚೀಸ್‌ನಿಂದ ಗಾರ್ನಿಶ್ ಮಾಡಿ.ಚೀಸ್ ಸ್ವಲ್ಪ ಕರಗುವವರೆಗೆ ಕೆಲವು ಸೆಕೆಂಡುಗಳ ಕಾಲ ಬಿಟ್ಟು ಸವಿಯಿರಿ.
ಮೊಟ್ಟೆ ದೋಸೆ: 2 ಮೊಟ್ಟೆ, 1 ಸಣ್ಣಗೆ ಕತ್ತರಿಸಿದ ಈರುಳ್ಳಿ, 4 ಹಸಿರು ಮೆಣಸಿನಕಾಯಿಗಳು, ಕತ್ತರಿಸಿದ ಸೊಪ್ಪುಗಳು, ದೋಸೆ ಹಿಟ್ಟು, ಉಪ್ಪು, ಎಣ್ಣೆ / ಬೆಣ್ಣೆ, ಚೀಸ್.
ಒಂದು ಬಟ್ಟಲಿನಲ್ಲಿ ಮೊಟ್ಟೆಗಳನ್ನು ಬೀಟ್ ಮಾಡಿ, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಸೊಪ್ಪುಗಳು ಮತ್ತು ಉಪ್ಪು ಸೇರಿಸಿ. ಗ್ರೀಸ್ ಮಾಡಿದ ಪ್ಯಾನ್ ಮೇಲೆ ದೋಸೆ ಮಾಡಿ. ಒಂದು ನಿಮಿಷದ ನಂತರ ಮೊಟ್ಟೆಯ ಮಿಶ್ರಣ ದೋಸೆ ಮೇಲೆ ಸ್ಪ್ರೇಡ್ ಮಾಡಿ ಸೆಟ್ ಆಗುವವರೆಗೆ ಕಾಯಿರಿ. ಇದಕ್ಕೆ ಬೇಕಾದರೆ ಚೀಸ್ ಸೇರಿಸಬಹುದು. ಸಾಸ್ ಅಥವಾ ಚಟ್ನಿ ಜೊತೆ ಸವಿಯಿರಿ.
ಸ್ಕ್ರಂಬಲ್ಡ್ ಎಗ್ ವಿಥ್ ಮಶ್ರೂಮ್: 2 ಮೊಟ್ಟೆಗಳು, 1 ಪ್ಯಾಕ್ ಅಣಬೆಗಳು, 1 ಚೌಕ ಆಕಾರದಲ್ಲಿ ಹೆಚ್ಚಿದ ಕ್ಯಾಪ್ಸಿಕಂ, 1 ಕತ್ತರಿಸಿದ ಈರುಳ್ಳಿ, ಉಪ್ಪು, ಕಾಳುಮೆಣಸು, ಚಿಲ್ಲಿ ಫ್ಲೇಕ್ಸ್, ಕೊತ್ತಂಬರಿ ಸೊಪ್ಪು, ತುಪ್ಪ / ಬೆಣ್ಣೆ
ಪ್ಯಾನ್‌ನಲ್ಲಿ ಎಣ್ಣೆ / ತುಪ್ಪ / ಬೆಣ್ಣೆಯನ್ನು ಬಿಸಿ ಮಾಡಿ. ಈರುಳ್ಳಿ, ನಂತರ ಕ್ಯಾಪ್ಸಿಕಂ ಸೇರಿಸಿ ರೋಸ್ಟ್ ಆಗುವವರೆಗೆ ಫ್ರೈ ಮಾಡಿ. ಸ್ಲೈಸ್ ಮಾಡಿದ ಅಣಬೆ ಬೆರೆಸಿ. ಉಪ್ಪು, ಕಾಳುಮೆಣಸು ಮತ್ತು ಚಿಲ್ಲಿ ಫ್ಲೇಕ್ಸ್ ಉದುರಿಸಿ ಮತ್ತು ಅಣಬೆ ಐದು ನಿಮಿಷ ಬೇಯಿಸಿ. ಅದೇ ಸಮಯದಲ್ಲಿ, ಮತ್ತೊಂದು ಬಾಣಲೆಯಲ್ಲಿ ಮೊಟ್ಟೆಗಳನ್ನು ಸ್ಕ್ರಾಂಬಲ್ ಮಾಡಿ. ಅದನ್ನು ಮಶ್ರೂಮ್ ಮತ್ತು ಕ್ಯಾಪ್ಸಿಕಂ ಮಿಶ್ರಣದೊಂದಿಗೆ ಬೆರೆಸಿ. ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
ಎಗ್ ಫ್ರಿಟಾಟಾ: 4 ಮೊಟ್ಟೆಗಳು, ನಿಮ್ಮ ಆಯ್ಕೆಯ ಕತ್ತರಿಸಿದ ತರಕಾರಿಗಳು, ಉಪ್ಪು, ಕಾಳುಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಎಣ್ಣೆ / ಬೆಣ್ಣೆ.
ಒಂದು ಪಾತ್ರೆಯಲ್ಲಿ ಮೊಟ್ಟೆಗಳಿಗೆ ಒಂದು ಚಿಟಿಕೆ ಉಪ್ಪು ಸೇರಿಸಿ ಬೀಟ್ ಮಾಡಿ. ನಾನ್-ಸ್ಟಿಕ್ ಪ್ಯಾನ್‌ಗೆ ಎಣ್ಣೆ ಅಥವಾ ಬೆಣ್ಣೆ ಗ್ರೀಸ್ ಮಾಡಿ. ತರಕಾರಿ, ಉಪ್ಪು, ಕಾಳುಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ, ಮತ್ತು ಅರಿಶಿನ ಪುಡಿಯೊಂದಿಗೆ ಫ್ರೈ ಮಾಡಿ. ತರಾಕರಿಗಳನ್ನು ಬೇಯಿಸಿದ ನಂತರ, ಪ್ಯಾನ್ ಮೇಲೆ ಸಮವಾಗಿ ಸ್ಪ್ರೇಡ್ ಮಾಡಿ. ಬೀಟ್ ಮಾಡಿದ ಮೊಟ್ಟೆ ಮಿಶ್ರಣವನ್ನು ಮೇಲೆ ಸುರಿಯಿರಿ. ಕೆಲವು ನಿಮಿಷಗಳ ಕಾಲ ಬೇಯಿಸಿ. ಸ್ಟೌವ್ ಆಫ್ ಮಾಡಿ. ಒಂದೆರಡು ನಿಮಿಷಗಳ ಕಾಲ ಸೆಟ್ ಆದ ನಂತರ ಕಟ್ ಮಾಡಿ ಸರ್ವ್ ಮಾಡಿ.
ಎಗ್ ರೋಲ್: 2 ಮೊಟ್ಟೆ, 2 ಕತ್ತರಿಸಿದ ಈರುಳ್ಳಿ, ನಿಮ್ಮ ಆಯ್ಕೆಯ ಕತ್ತರಿಸಿದ ತರಕಾರಿಗಳು, ಉಪ್ಪು, ಕಾಳುಮೆಣಸು, ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ಗರಂ ಮಸಾಲ ಪುಡಿ, ಎಣ್ಣೆ / ಬೆಣ್ಣೆ, ಉಳಿದ ಚಪಾತಿಗಳು / ಪರೋಟಾ
ಉಳಿದ ತರಕಾರಿಗಳು / ಮಾಂಸವನ್ನು ಮತ್ತೆ ಬಿಸಿ ಮಾಡಿ ಮತ್ತು ಬೇಯಿಸಿದ ಮೊಟ್ಟೆಗಳಲ್ಲಿ ಮಿಶ್ರಣ ಮಾಡಿ. ಇಲ್ಲದಿದ್ದರೆ ಬಾಣಲೆಯಲ್ಲಿ, ಮಸಾಲಾ ಮತ್ತು ಉಪ್ಪಿನೊಂದಿಗೆ ನಿಮ್ಮ ಆಯ್ಕೆಯ ತರಕಾರಿ ಅಥವಾ ಮಾಂಸವನ್ನು ಫ್ರೈ ಮಾಡಿ. ಅದಕ್ಕೆ ಮೊಟ್ಟೆ ಒಡೆದು ಹಾಕಿ ಮಿಕ್ಸ್ ಮಾಡಿ. ಗ್ರೀಸ್ ಮಾಡಿದ ತವಾದಲ್ಲಿ ಉಳಿದಿರುವ ಚಪಾತಿ / ಪರೋಟಾವನ್ನು ಬಿಸಿ ಮಾಡಿ. ತಯಾರಿಸಿದ ಮೊಟ್ಟೆ ತರಾಕರಿ ಅಥವಾ ಮಾಂಸದ ಮಿಶ್ರಣವನ್ನು ಚಪಾತಿ ಮಧ್ಯ ಇಟ್ಟು ಬದಿಗಳನ್ನು ಫೋಲ್ಡ್ ಮಾಡಿ. ಕೆಚಪ್, ಚೀಸ್ ಅಥವಾ ನಿಮ್ಮ ಇಷ್ಷದ ಸಾಸ್ ಜೊತೆ ಎಂಜಾಯ್ ಮಾಡಿ.