ಈರುಳ್ಳಿ ದೀರ್ಘಕಾಲ ಹಾಳಾಗದಂತೆ ಸಂಗ್ರಹಿಸಲು ಸಿಂಪಲ್ ಟಿಪ್ಸ್: ಈ ತರಕಾರಿ ಜೊತೆಗೆ ಇಡಬೇಡಿ!
ಯಾವುದೇ ತರಕಾರಿಗಳನ್ನು ಬಳಸಿ ಅಡುಗೆ ಮಾಡಿದರೂ ಅದಕ್ಕೆ ಈರುಳ್ಳಿ ಇಲ್ಲವೆಂದರೆ ರುಚಿಯೇ ಇರುವುದಿಲ್ಲ. ಹೀಗಾಗಿ, ಈರುಳ್ಳಿ ಸರ್ವಕಾಲಿಕವಾಗಿಯೂ ತನ್ನ ಬೇಡಿಕೆಯನ್ನು ಉಳಿಸಿಕೊಂಡು ಬಂದಿದೆ. ಆದರೆ, ಈ ಈರುಳ್ಳಿಯನ್ನು ಬಹಳ ದಿನಗಳವರೆಗೆ ಕೆಡದಂತೆ ಸಂರಕ್ಷಣೆ ಮಾಡಿ ಇರುವುದು ಹೇಗೆ ಎಂಬ ಸಲಹೆಗಳು ಇಲ್ಲಿವೆ ನೋಡಿ..

ಪ್ರತಿ ಮನೆಯಲ್ಲೂ ವಾರಕ್ಕೊಮ್ಮೆ ಸಂತೆಗೆ ಹೋಗಿ ಈರುಳ್ಳಿ ತರುತ್ತಾರೆ. ಈ ಈರುಳ್ಳಿಯನ್ನು ಕೆಲವರು ಉತ್ತಮವಾಗಿ ಸಂರಕ್ಷಿಸಿ ಇಡುವುದಕ್ಕೆ ಬರದೇ ಬೇಗನೇ ಹಾಳಾಗಿ ಹೋಗುತ್ತವೆ. ಕೆಲವೊಮ್ಮೆ ನಾವು ಸಂಗ್ರಹಿಸಿದ ಈರುಳ್ಳಿ ಕೆಡಬಹುದು ಅಥವಾ ಮೊಳಕೆ ಬರಬಹುದು. ಹೀಗಾಗಿ, ಮನೆಯಲ್ಲಿ ಈರುಳ್ಳಿ ಸಂಗ್ರಹಿಸಿ ಇಡಬೇಕಾದ ಕೆಲವು ಸಿಂಪಲ್ ಟಿಪ್ಸ್‌ಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ನೀವು ಈರುಳ್ಳಿ ನಷ್ಟದ ಜೊತೆಗೆ ನಿಮ್ಮ ಜೇಬಿಗೂ ಕತ್ತರಿ ಹಾಕಿಕೊಳ್ಳಬೇಕಾಗುತ್ತದೆ.

ಒಣಗಿದ ಮತ್ತು ಗಾಳಿಯಾಡುವ ಸ್ಥಳದಲ್ಲಿ ಸಂಗ್ರಹಿಸಿ: ನಾವು ಮಾರುಕಟ್ಟೆಯಿಂದ ತಂದ ಈರುಳ್ಳಿಯನ್ನು ಯಾವಾಗಲೂ ಒಣಗಿರುವ ಹಾಗೂ ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ಈರುಳ್ಳಿಗೆ ಗಾಳಿ ಬೀಳದಿದ್ದರೆ ಬೇಗನೇ ಮೊಳಕೆ ಒಡೆಯುತ್ತವೆ. ಅಥವಾ ಈರುಳ್ಳಿ ಗೆಡ್ಡೆ ಒಳಗಿನಂದಲೇ ಕೊಳೆಯಲು ಆರಂಭವಾಗುತ್ತದೆ. ಹೆಚ್ಚು ಒತ್ತಡ ಬಿದ್ದಾಗಲೂ ಈರುಳ್ಳಿ ಬಹು ಬೇಗನೇ ಹಾಳಾಗುತ್ತದೆ. ಆದ್ದರಿಂದ ನಾವು ಒಂದು ವಾರಕ್ಕಿಂತ ಹೆಚ್ಚು ದಿನಗಳವರೆಗೆ ಈರುಳ್ಳಿಯನ್ನು ಸಂಗ್ರಹಿಸಿ ಇಡಬೇಕೆಂದರೆ ಒಂದಕ್ಕೊಂದು ಒತ್ತೆ ಬೀಳದಂತೆ ನೋಡಿಕೊಳ್ಳಬೇಕು. ಆದರೆ, ಸೂರ್ಯನ ಬೆಳಕು ಬೀಳದಂತಹ ಸ್ಥಳದಲ್ಲಿ ಸಂಗ್ರಹಿಸಿ ಇಡಬೇಕು.
ONION
ಒಣಗಿದ ಈರುಳ್ಳಿ ಖರೀದಿ:
ನಾವು ಮಾರುಕಟ್ಟೆಯಿಂದ ಈರುಳ್ಳಿಯನ್ನು ತೆಗೆದುಕೊಂಡು ಬರುವಾಗ ಯಾವಾಗಲೂ ನೀವು ಒಣಗಿದ ಈರುಳ್ಳಿಗಳನ್ನೇ ಆರಿಸಿ ಖರೀದಿ ಮಾಡಬೇಕು. ಒಣಗಿರುವ ಈರುಳ್ಳಿಗಳು ತುಂಬಾ ದಿನಗಳವರೆಗೆ ಬಾಳಿಕೆ ಬರುತ್ತವೆ. ಕೆಲವೊಮ್ಮೆ ವ್ಯಾಪಾರಿಗಳು ತಾವೇ ಹಸಿಯಾಗಿರುವ ಈರುಳ್ಳಿಯನ್ನು ತೂಕಕ್ಕೆ ಹಾಕಿ ಕೊಟ್ಟುಬಿಡುತ್ತಾರೆ. ಒಂದು ವೇಳೆ ಹಸಿ ಈರುಳ್ಳಿಯನ್ನು ಖರೀದಿಸಿ ತಂದರೆ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಾ, ಬಳಸದೇ ಹಾಗೆ ಬಿಟ್ಟರೆ ಬೇಗನೇ ಕೊಳೆತು ಹಾಳಾಗಿ ಹೋಗುತ್ತವೆ.
ಹಸಿ ಈರುಳ್ಳಿ ತಂದರೆ ಎರಡು ದಿನ ಒಣಗಿಸಿ: ಒಂದು ವೇಳೆ ನೀವು ಮಾರುಕಟ್ಟೆಯಿಂದ ಕಡಿಮೆ ಬೆಲೆಗೆ ಹಸಿ ಈರುಳ್ಳಿಯನ್ನು ತೆಗೆದುಕೊಂಡು ಬಂದತೆ ಅವುಗಳನ್ನು ನೀವು ಮೊದಲು 2 ದಿನ ಚೆನ್ನಾಗಿ ಗಾಳಿಯಾಡುವ ಸ್ಥಳದಲ್ಲಿ ಒಣಗಿಸಬೇಕು. ಕೆಲವೊಮ್ಮೆ ಬಿಸಿಲಿನಲ್ಲಿ ಒಣಗೊಸದರೂ ಒಳಿತು. ಒಂದು ವೇಳೆ ಈರುಳ್ಳಿ ಒದ್ದೆಯಾಗಿದ್ದರೆ ಅವುಗಳನ್ನು ಮೊದಲಿಗೆ ಹತ್ತಿ ಬಟ್ಟೆಯಿಂದ ಒರೆಸಿದ ನಂತರವೇ ಒಣಗಲು ಹಾಕಿ, ನಂತರ ಸಂರಕ್ಷಿಸಿ ಇಡಬೇಕು.
ಆಲೂಗಡ್ಡೆ ಸೇರಿ ಯಾವುದೇ ತರಕಾರಿಗಳ ಜೊತೆಗೆ ಈರುಳ್ಳಿ ಇಡಬಾರದು:
ನಾವು ಮಾರುಕಟ್ಟೆಗೆ ಹೋಗಿ ಈರುಳ್ಳಿ ಸೇರಿದಂತೆ ಎಲ್ಲ ತರಕಾರಿಗಳನ್ನು ಒಟ್ಟಿಗೆ ತರುತ್ತೇವೆ. ಆದರೆ, ಎಲ್ಲ ತರಕಾರಿಗಳ ಜೊತೆಗೆ ಈರುಳ್ಳಿ ಶೇಖರಿಸಿಡಬಾರದು. ಈರುಳ್ಳಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇಡಬೇಕು. ಕೆಲವು ಹಣ್ಣು, ತರಕಾರಿಗಳು ತೇವಾಂಶ ಮತ್ತು ಅನಿಲವನ್ನು ಬಿಡುಗಡೆ ಮಾಡುವುದರಿಂದ ಇದರ ಪಕ್ಕದಲ್ಲಿ ಇಡುವ ಈರುಳ್ಳಿ ಕೂಡ ಬೇಗ ಹಾಳಾಗಬಹುದು. ಮುಖ್ಯವಾಗಿ ಅಂಗಡಿಗಳಲ್ಲಿ ಮಾರಾಟ ಮಾಡಲು ಇಟ್ಟಿರುವಂತೆ ಆಲೂಗಡ್ಡೆಯಿಂದ ಈರುಳ್ಳಿಯನ್ನು ದೂರ ಇಡಬೇಕು.
ಪ್ಲಾಸ್ಟಿಕ್ ಕವರ್‌ನಲ್ಲಿ ಈರುಳ್ಳಿ ಇಡಬೇಡಿ:
ನಾವು ಮಾರುಕಟ್ಟೆಯಿಂದ ಈರುಳ್ಳಿ ತರುವಾಗ ಅವರು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿಕೊಡುತ್ತಾರೆ. ಆದರೆ, ನಾವು ಮನೆಗೆ ಬಂದ ಕೂಡಲೇ ಈರುಳ್ಳಿಯನ್ನು ಪ್ಲಾಸ್ಟಿಕ್ ಚೀಲದಿಂದ ಹೊರಗೆ ಸುರಿದು ಬೇರೆಡೆ ಹಾಕಬೇಕು. ಇದಕ್ಕಾಗಿ ಜರಡಿಯಂತಿರುವ ತರಕಾರಿ ಬುಟ್ಟಿಗಳು, ಬೆಳಕು ಬಾರದ ಶುಷ್ಕವಾಗಿರುವ ಮನೆಯ ಸ್ಥಳ, ಮೆಷ್ ಅಥವಾ ಬುಟ್ಟಿಗಳಲ್ಲಿ ಸಂಗ್ರಹಿಸಬಹುದು. ಇನ್ನು ತೆರೆದ ರಟ್ಟಿನ ಪೆಟ್ಟಿಗೆಗಳಲ್ಲಿಯೂ ಈರುಳ್ಳಿ ಸಂಗ್ರಹಿಸಬಹುದು.
ಹಾಳಾದ ಈರುಳ್ಳಿ ಆರಿಸಿ ಎಸೆಯಿರಿ:
ಇನ್ನು ಮುಖ್ಯವಾಗಿ ನೀವು ತೆಗೆದುಕೊಂಡು ಬಂದ ಈರುಳ್ಳಿಯಲ್ಲಿ ಅಥವಾ ನೀವು ಹಲವು ದಿನಗಳವರೆಗೆ ಸಂಗ್ರಹಿಸಿದ ಈರುಳ್ಳಿಯನ್ನು ಪ್ರತಿನಿತ್ಯ ಬಳಸಲು ಈರುಳ್ಳಿ ತೆಗೆದುಕೊಳ್ಳುವಾಗ ಎಲ್ಲವನ್ನೂ ಗಮನಿಸಬೇಕು. ಆಗ ನೀವು ಸಂಗ್ರಹಿಸಿದ ಈರುಳ್ಳಿಗಳಲ್ಲಿ ಕೆಟ್ಟಿರುವ ಈರುಳ್ಳಿ ಕಂಡುಬಂದರೆ ಕೂಡಲೇ ಅದನ್ನು ಆರಿಸಿ ಎಸೆಯಬೇಕು. ಇಲ್ಲವಾದಲ್ಲಿ ಒಂದು ಈರುಳ್ಳಿಯ ಜೊತೆಗೆ, ಅದರ ಅಕ್ಕ-ಪಕ್ಕದಲ್ಲಿರುವ ಎಲ್ಲ ಈರುಳ್ಳಿಗಳು ಕೂಡ ಹಾಳಾಗಿ ಹೋಗುತ್ತವೆ.