ಕೇಳ್ರಪ್ಪಾ… ಈ ಸ್ಟ್ರೀಟ್ ಫುಡ್ ಆರೋಗ್ಯಕ್ಕೆ ತುಂಬಾನೆ ಒಳ್ಳೆದಂತೆ! ವೈದ್ಯರೇ ಹೇಳಿದ್ದಾರೆ
Healthy Street Food: ಸ್ಟ್ರೀಟ್ ಫುಡ್ ಸೇವನೆ ಯಾವಾಗಲೂ ಆರೋಗ್ಯಕ್ಕೆ ಹಾನಿಕಾರಕವಾಗಿರಬೇಕೆಂದಿಲ್ಲ. ಕೆಲವು ಬೀದಿ ಬದಿಯ ಆಹಾರಗಳನ್ನು ಸರಿಯಾದ ರೀತಿಯಲ್ಲಿ ತಯಾರಿಸಿ ಸೇವಿಸಿದರೆ ಅವು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಬಹುದು. ಹಾಗಾದರೆ ಯಾವೆಲ್ಲ ಸ್ಟ್ರೀಟ್ ಫುಡ್ಗಳನ್ನು ಧೈರ್ಯವಾಗಿ ತಿನ್ನಬಹುದು? ನೋಡೋಣ.

ಆರೋಗ್ಯಕ್ಕೆ ಉತ್ತಮವಾದ ಸ್ಟ್ರೀಟ್ ಫುಡ್’ಗಳು
ಸ್ಟ್ರೀಟ್ ಫುಡ್ ಎಂದ ತಕ್ಷಣ ಬಹುತೇಕ ಜನರಿಗೆ ಅದು ಆರೋಗ್ಯಕ್ಕೆ ಹಾನಿಕಾರಕ ಎಂಬ ಭಾವನೆ ಮೂಡುತ್ತದೆ. ಆದರೆ ಎಲ್ಲಾ ಸ್ಟ್ರೀಟ್ ಫುಡ್ಗಳು ಹಾನಿಕಾರಕವಲ್ಲ. ಕೆಲವು ಆಹಾರಗಳನ್ನು ಸ್ವಚ್ಛವಾಗಿ ಮತ್ತು ಸರಿಯಾದ ವಿಧಾನದಲ್ಲಿ ತಯಾರಿಸಿ ಸೇವಿಸಿದರೆ ಅವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬಹುದು. ಅಂತಹ ಸ್ಟ್ರೀಟ್ ಫುಡ್ ಗಳು ಯಾವುವು ಅನ್ನೋದನ್ನು ವೈದ್ಯರೇ ತಿಳಿಸಿದ್ದಾರೆ ನೋಡಿ.
ಭೇಲ್ಪುರಿ (Bhel Puri):
ಭೇಲ್ಪುರಿಯನ್ನು ಮಂಡಕ್ಕಿ, ಈರುಳ್ಳಿ, ಟೊಮೆಟೊ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ ತಯಾರಿಸಲಾಗುತ್ತದೆ. ವೈದ್ಯರಾದ ಶುಭಂ ವತ್ಸ್ ಅವರ ಪ್ರಕಾರ, ಮಂಡಕ್ಕಿಯಲ್ಲಿ ಕಾರ್ಬೋಹೈಡ್ರೇಟ್ಗಳಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಇದನ್ನು ಇನ್ನಷ್ಟು ಆರೋಗ್ಯಕರವಾಗಿಸಲು ಸೇವ್ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡಬೇಕು.
ಇಡ್ಲಿ-ಸಾಂಬಾರ್ (Idli Sambar):
ಇಡ್ಲಿಯನ್ನು ಹಬೆಯಲ್ಲಿ ಬೇಯಿಸುವುದರಿಂದ ಎಣ್ಣೆಯಲ್ಲಿ ಕರಿಯುವ ಅಗತ್ಯವಿರುವುದಿಲ್ಲ. ಇನ್ನು ಸಾಂಬಾರ್ನಲ್ಲಿರುವ ಬೇಳೆಯಿಂದ ಪ್ರೋಟೀನ್ ಮತ್ತು ತರಕಾರಿಗಳಿಂದ ಫೈಬರ್ ದೊರೆಯುತ್ತದೆ. ಇಡ್ಲಿ ತಿನ್ನುವಾಗ ಸಾಕಷ್ಟು ಪ್ರಮಾಣದಲ್ಲಿ ಸಾಂಬಾರ್ ಸೇವಿಸುವುದು ಉತ್ತಮ. ಇದರಿಂದ ಹೆಚ್ಚಿನ ಪೋಷಕಾಂಶಗಳು ದೇಹಕ್ಕೆ ದೊರೆಯುತ್ತವೆ.
ಮೊಳಕೆಕಾಳು ಮತ್ತು ಕಡಲೆ ಚಾಟ್ (Sprouts and Chana Chaat):
ಕಡಲೆ ಮತ್ತು ಮೊಳಕೆಕಾಳುಗಳಲ್ಲಿ ಪ್ರೋಟೀನ್, ಫೈಬರ್ ಹಾಗೂ ಹಲವು ಅಗತ್ಯ ಪೋಷಕಾಂಶಗಳು ಹೇರಳವಾಗಿವೆ. ಇದಕ್ಕೆ ಈರುಳ್ಳಿ, ಟೊಮೆಟೊ, ಸೌತೆಕಾಯಿ, ನಿಂಬೆಹಣ್ಣಿನ ರಸ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ರುಚಿಯ ಜೊತೆಗೆ ಪೌಷ್ಟಿಕಾಂಶವೂ ಹೆಚ್ಚುತ್ತದೆ.
ಸುಟ್ಟ ಜೋಳ (Roasted Corn):
ಜೋಳದ ಕಾಳುಗಳನ್ನು ಸುಟ್ಟು ತಿನ್ನುವುದು ಕೂಡ ಆರೋಗ್ಯಕರ ಆಯ್ಕೆ. ಜೋಳದಲ್ಲಿ ಕಾರ್ಬೋಹೈಡ್ರೇಟ್, ಫೈಬರ್ ಹಾಗೂ ಕೆಲವು ವಿಟಮಿನ್ಗಳು ಮತ್ತು ಖನಿಜಾಂಶಗಳು ಕಂಡುಬರುತ್ತವೆ. ಇದನ್ನು ನಿಂಬೆಹಣ್ಣಿನ ರಸ ಮತ್ತು ಕಡಿಮೆ ಪ್ರಮಾಣದ ಮಸಾಲೆಗಳನ್ನು ಸೇರಿಸಿ ಸೇವಿಸಬಹುದು.
ಫ್ರುಟ್ ಚಾಟ್ (Fruit Chaat):
ಸೀಸನ್ಗೆ ಅನುಗುಣವಾಗಿ ಸಿಗುವ ತಾಜಾ ಹಣ್ಣುಗಳಾದ ಸೀಬೆಹಣ್ಣು, ದಾಳಿಂಬೆ, ಸೇಬು ಮತ್ತು ಬಾಳೆಹಣ್ಣನ್ನು ಸೇರಿಸಿ ಹಣ್ಣಿನ ಚಾಟ್ ತಯಾರಿಸಬಹುದು. ಇದಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ ಸೇವಿಸಬಹುದು. ಹಣ್ಣುಗಳಲ್ಲಿರುವ ನೈಸರ್ಗಿಕ ವಿಟಮಿನ್ಗಳು ಮತ್ತು ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.
ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ (Boiled Eggs / Omelettes):
ಬೀದಿ ಬದಿಯಲ್ಲಿ ಸುಲಭವಾಗಿ ಸಿಗುವ ಬೇಯಿಸಿದ ಮೊಟ್ಟೆ ಮತ್ತು ಆಮ್ಲೆಟ್ ಉತ್ತಮ ಪ್ರೋಟೀನ್ ಮೂಲಗಳಾಗಿವೆ. ಇವು ಹೊಟ್ಟೆ ತುಂಬಿದ ಅನುಭವ ನೀಡುವುದರ ಜೊತೆಗೆ ಸ್ನಾಯುಗಳ ಬೆಳವಣಿಗೆ ಮತ್ತು ಚೇತರಿಕೆಗೆ ಸಹಾಯ ಮಾಡುತ್ತವೆ. ಸಾಧ್ಯವಾದಷ್ಟು ಕಡಿಮೆ ಎಣ್ಣೆ ಬಳಸಿ ತಯಾರಿಸಿದ ಮೊಟ್ಟೆಗಳನ್ನು ಆಯ್ಕೆ ಮಾಡಿಕೊಳ್ಳಿ.
ಸೂಚನೆ: ಸ್ಟ್ರೀಟ್ ಫುಡ್ ಸೇವಿಸುವಾಗ ಸ್ವಚ್ಛತೆ, ತಾಜಾತನ ಮತ್ತು ಆಹಾರ ತಯಾರಿಸುವ ವಿಧಾನಕ್ಕೆ ಆದ್ಯತೆ ನೀಡಿ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.





