ರಾತ್ರಿ ಊಟಕ್ಕೆ ಪ್ಲಾನ್ ಮಾಡಿ ಈ 5 ಬೆಸ್ಟ್ ಆಹಾರ; ಲೈಟಾಗಿಯೂ ಇರುತ್ತೆ, ಟೇಸ್ಟಿಯಾಗಿಯೂ ಇರುತ್ತೆ!
ದಿನವಿಡೀ ಕೆಲಸ ಮಾಡಿ ಬಂದು ಮನೆಗೆ ಬಂದು ರಾತ್ರಿ ಊಟಕ್ಕೆ ಏನು ಮಾಡಬೇಕೆಂದು ಗೊತ್ತೇ ಆಗಲ್ಲ. ಕೆಲವೊಮ್ಮೆ ಸಂಜೆ ಸ್ನ್ಯಾಕ್ಸ್ ತಿಂದರಂತೂ ರಾತ್ರಿ ಏನಾದ್ರೂ ತಿನ್ನೋಣ ಅಂದ್ರೆ ಹಸಿವು ಆಗಲ್ಲ. ಹಾಗೆ ಮಲಗೋಣ ಅಂದ್ರೂ ಮನಸ್ಸು ಕೇಳಲ್ಲ.
ರಾತ್ರಿಯ ಊಟ ಹಗುರವಾಗಿರಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇಂದು ನಾವು ನಿಮಗೆ ರಾತ್ರಿ ಊಟಕ್ಕೆ ಸೇವಿಸಬೇಕಾದ ಲಘುವಾದ ಆಹಾರಗಳ ಬಗ್ಗೆ ಹೇಳುತ್ತಿದ್ದೇವೆ. ಇದು ಲೈಟಾಗಿಯೂ ಮತ್ತು ಹೆಲ್ದಿಯಾಗಿರುತ್ತದೆ. ಇದರ ಜೊತೆಯಲ್ಲಿ ರುಚಿಕರವಾಗಿರುತ್ತದೆ. ಈ ಅಡುಗೆ ಮಾಡಲು ಹೆಚ್ಚು ಸಮಯ ಸಹ ಬೇಕಾಗಲ್ಲ.
1.ಅನ್ನ-ರಸಂ
ರಾತ್ರಿ ಊಟಕ್ಕೆ ಅನ್ನ-ರಸಂ ಒಳ್ಳೆಯ ಆಹಾರ. ಎರಡು ವಿಷಲ್ ಕೂಗಿಸಿದ್ರೆ ಅನ್ನ ರೆಡಿಯಾಗುತ್ತದೆ. ಜೀರಿಗೆ, ಕಾಳುಮೆಣಸು, ಒಂದು ಟೊಮೆಟೋ, ಒಂದು ಟೀ ಸ್ಪೂನ್ ಅಚ್ಚ ಖಾರದ ಪುಡಿ, ಸ್ವಲ್ಪ ಕೋತಂಬರಿ ಸೊಪ್ಪು ಇದ್ರೆ ರುಚಿಕರವಾದ ರಸಂ ಸಿದ್ಧವಾಗುತ್ತದೆ. ಅನ್ನ-ರಸಂ ಜೊತೆ ಉಪ್ಪಿನಕಾಯಿ ಇದ್ರೆ ರಾತ್ರಿಯ ಊಟ ಮುಗಿಯುತ್ತದೆ. ಕೆಲವರು ಅನ್ನ-ರಸಂ ಜೊತೆಯಲ್ಲಿ ಹಪ್ಪಳ ಇದ್ದರೆ ಊಟದಲ್ಲಿ ಸಂತೃಪ್ತಿ ಕಾಣುತ್ತಾರೆ.
2.ಉಪ್ಪಿಟ್ಟು
ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಉಪ್ಪಿಟ್ಟು ಯಾವಾಗಲೂ ಇರುತ್ತದೆ. ರವೆ, ಈರುಳ್ಳಿ, ಟೊಮೆಟೋ, ಹಸಿಮೆಣಸಿನಕಾಯಿ, ಒಂಚೂರು ಎಣ್ಣೆ ಇದ್ರೆ ಸರಳವಾಗಿ ಉಪ್ಪಿಟ್ಟು ತಯಾರಿಸಬಹುದು. ಇದಕ್ಕೆ ಹೆಚ್ಚು ಸಮಯ ಬೇಕಾಗಲ್ಲ. ನಿಮ್ಮ ಬಳಿ ಬೀನ್ಸ್, ಬಟಾಣಿ, ಅವರೆಕಾಳು ಅಥವಾ ಯಾವುದೇ ತರಕಾರಿ ಇದ್ರೂ ಉಪ್ಪಿಟ್ಟಿಗೆ ಸೇರಿಸಿಕೊಳ್ಳಬಹುದು. ರಾತ್ರಿ ಊಟಕ್ಕೆ ಉಪ್ಪಿಟ್ಟು ಸಹ ಒಳ್ಳೆಯ ಆಹಾರವಾಗಿದೆ.
3.ಇಡ್ಲಿ ಅಥವಾ ದೋಸೆ
ರಾತ್ರಿ ಅಡುಗೆ ಮಾಡಲು ಯಾವುದೇ ತರಕಾರಿ ಇಲ್ಲದಿದ್ದಾಗ ಇಡ್ಲಿ ಮಾಡಿಕೊಳ್ಳಬಹುದು. ಮನೆಯಲ್ಲಿ ಇಡ್ಲಿ ಹಿಟ್ಟು ಇದ್ರೆ ಫಟಾಫಟ್ ಅಂತ ಮಾಡಿಕೊಳ್ಳಬಹುದು. ರಾತ್ರಿ ಊಟಕ್ಕೆ ಸ್ಟೀಮ್ ಆಹಾರ ಒಳ್ಳೆಯದು. ಇಡ್ಲಿಗೆ ಚಟ್ನಿಪುಡಿ ಹಾಕೊಂಡು ರಾತ್ರಿಯ ಊಟ ಮುಗಿಸಬಹುದು. ದೋಸೆ ಬ್ಯಾಟರ್ ಇದ್ರೆ ಆಯಿಲ್ ಫ್ರೀ ದೋಸೆಯನ್ನು ರಾತ್ರಿ ಊಟಕ್ಕೆ ಮಾಡಿಕೊಳ್ಳಬಹುದು. ಉಪ್ಪಿನಕಾಯಿ ಜೊತೆಯಲ್ಲಿ ದೋಸೆ ತಿನ್ನಬಹುದು. ಚಟ್ನಿ ಅಥವಾ ಪಲ್ಯ ಮಾಡುವ ಅಗತ್ಯವಿರಲ್ಲ.
4.ಚಿತ್ರನ್ನಾ
ಬೆಳಗ್ಗೆ ಅಥವಾ ಮಧ್ಯಾಹ್ನ ಮಾಡಿರುವ ಅನ್ನ ಉಳಿದಿದ್ದರೆ ಅದಕ್ಕೆ ಒಗ್ಗರಣೆ ಹಾಕಿದ್ರೆ ಚಿತ್ರನ್ನಾ ಸಿದ್ಧವಾಗುತ್ತದೆ. ಒಂದೆರಡು ಹಸಿಮೆಣಸಿನಕಾಯಿ, ಈರುಳ್ಳಿ, ಸಾಸವೆ-ಜೀರಿಗೆ, ನಿಂಬೆಹಣ್ಣು ಇದ್ರೆ ಐದರಿಂದ ಆರು ನಿಮಿಷದಲ್ಲಿ ರುಚಿಯಾದ ಚಿತ್ರನ್ನಾ (ಲೆಮನ್ ರೈಸ್) ರೆಡಿಯಾಗುತ್ತದೆ. ಮನೆಯಲ್ಲಿ ಯಾವುದಾದ್ರೂ ಚಟ್ನಿ ಪುಡಿ ಇದ್ರೆ ಒಳ್ಳೆಯ ಕಾಂಬಿನೇಷನ್ ಆಗುತ್ತದೆ. ಇದೇ ರೀತಿ ಬೇಕಿದ್ದರೆ ಪುಳಿಯೋಗೆರೆ ಅಥವಾ ಟೊಮೆಟೋ ರೈಸ್ ಮಾಡಿಕೊಳ್ಳಬಹುದು.
5.ಮಜ್ಜಿಗೆ ಅನ್ನ
ಅನ್ನ ಇದ್ದರೆ ಅದಕ್ಕೆ ಮಜ್ಜಿಗೆ ಹಾಕಿಕೊಂಡು ಸಹ ರಾತ್ರಿಯ ಊಟವನ್ನು ಮುಗಿಸಬಹುದು. ಮೊಸರು ಇದ್ರೆ ಅದನ್ನು ಚೆನ್ನಾಗಿ ಕಡಿದುಕೊಂಡು ಅಥವಾ ಮಿಕ್ಸಿಗೆ ಹಾಕಿಕೊಂಡರೆ ಮಜ್ಜಿಗೆ ರೆಡಿಯಾಗುತ್ತದೆ. ಮಜ್ಜಿಗೆ ಅನ್ನದ ಜೊತೆಯಲ್ಲಿ ಉಪ್ಪಿನಕಾಯಿ ಅಥವಾ ಫ್ರೈ ಮಾಡಿಕೊಂಡಿರುವ ಮೆಣಸಿನಕಾಯಿ/ಮಜ್ಜಿಗೆ ಮೆಣಸಿನಕಾಯಿ ಒಳ್ಳೆಯ ಕಾಂಬಿನೇಷನ್ ಆಗುತ್ತದೆ.