ನಾಗರ ಪಂಚಮಿಯಂದು ಹಾವುಗಳಿಗೆ ಹಾಲೆರೆಯೋದ್ಯಾಕೆ ಗೊತ್ತಾ ನಿಮಗೆ?
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಾನ್ಯತೆ ಇದೆ ಮತ್ತು ಇಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಪಂಚಮಿಯಂದು ಬರುತ್ತೆ. ಈ ದಿನ, ನಾಗ ದೇವತೆಯನ್ನು ಪೂಜಿಸಲಾಗುತ್ತದೆ ಮತ್ತು ನಾಗನಿಗೆ ಹಾಲನ್ನು ಅರ್ಪಿಸಲಾಗುತ್ತದೆ. ಯಾಕೆ ನಾಗನಿಗೆ ಹಾಲು ಅರ್ಪಿಸೋದು ಗೊತ್ತಾ?
ಶ್ರಾವಣ ಮಾಸದ ಪಂಚಮಿ ತಿಥಿಯಂದು ನಾಗರ ಪಂಚಮಿಯನ್ನು (Nagara Panchami) ಆಚರಿಸಲಾಗುತ್ತದೆ. ದೇಶದ ವಿವಿಧೆಡೆ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತೆ. ಕರ್ನಾಟಕಾದಲ್ಲಿ ಅದರಲ್ಲೂ ದಕ್ಷಿಣ ಕನ್ನಡದಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಈ ದಿನ, ನಾಗ ದೇವರಿಗೆ ಹಾಲನ್ನು ಅರ್ಪಿಸೋದು ವಾಡಿಕೆ. ನಮ್ಮ ರಾಜ್ಯದಲ್ಲಿ ನಾಗರ ಕಲ್ಲಿಗೆ ಹಾಲೆರೆದರೆ, ಬೇರೆ ರಾಜ್ಯಗಳಲ್ಲಿ ಜೀವಂತ ಹಾವಿಗೆ ಹಾಲೆರೆಯುತ್ತಾರೆ.
ಇತರ ರಾಜ್ಯಗಳಲ್ಲಿ ನಾಗರಪಂಚಮಿ ದಿನ, ಹಾವಾಡಿಗರು ಸರ್ಪಗಳನ್ನು ಬುಟ್ಟಿಗಳಲ್ಲಿ ಹಿಡಿದು ಸ್ಥಳದಿಂದ ಸ್ಥಳಕ್ಕೆ ಅಲೆದಾಡುತ್ತಾರೆ ಮತ್ತು ಮನೆ ಮನೆಗೆ ಹೋಗುತ್ತಾರೆ. ಜನರು ನಾಗನಿಗೆ ಪೂಜ್ಯ ಭಾವದಿಂದ ಹಾಲನ್ನು ಅರ್ಪಿಸುತ್ತಾರೆ. ಆದರೆ ಅಂತಹ ಅಪಾಯಕಾರಿ ಜೀವಿಗೆ ನಾಗರ ಪಂಚಮಿಯ ದಿನದಂದು ಹಾಲು ಏಕೆ ನೀಡಲಾಗುತ್ತದೆ ಅನ್ನೋದು ನಿಮಗೆ ತಿಳಿದಿದೆಯೇ? ಇದರ ಹಿಂದೆ ಒಂದು ದಂತಕಥೆ ಮತ್ತು ಅನೇಕ ನಂಬಿಕೆಗಳಿವೆ. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಹಾವಿಗೆ ಹಾಲು ನೀಡಲು ಕಾರಣ ಏನು ಗೊತ್ತಾ?
ನಾಗರ ಪಂಚಮಿಯ ದಿನದಂದು ಹಾವಿಗೆ ಹಾಲು ಕುಡಿಸುವುದರಿಂದ ಹಾವು ಕಡಿತದ ಭಯ ನಿವಾರಣೆಯಾಗುತ್ತದೆ ಮತ್ತು ನಾಗ ದೇವರ ಆಶೀರ್ವಾದ ಸದಾ ನಮ್ಮ ಮೇಲಿರುತ್ತೆ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾದ ಕಥೆಗಳಲ್ಲಿ ಹೇಳಲಾಗಿದೆ. ಹಾಗಾಗಿ ಈ ದಿನ ಜನರು ಭಕ್ತಿಯಿಂದ ಹಾವಿಗೆ ಹಾಲುಣಿಸುತ್ತಾರೆ.
ಪುರಾಣದ ಕಥೆಯ ಪ್ರಕಾರ ಒಮ್ಮೆ ಪಾಂಡವರ ವಂಶಸ್ಥನಾದ ರಾಜ ಜನ್ಮೇಜಯನು ನಾಗ ಯಜ್ಞವನ್ನು ಮಾಡಿದನು, ಇದರಲ್ಲಿ ಅನೇಕ ಜಾತಿಯ ಸರ್ಪಗಳು ಭಸ್ಮವಾಯಿತು ಎಂದು ಭವಿಷ್ಯ ಪುರಾಣದ ಕಥೆಯಲ್ಲಿ ಹೇಳಲಾಗಿದೆ. ಆದರೆ ತಕ್ಷಕ್ ನಾಗ ದೇವರಾಜ ಇಂದ್ರನ ಆಸನಕ್ಕೆ ಸುತ್ತಿದ್ದರಿಂದ, ಇಂದ್ರನ ಸಮೇತ, ಆಸನ ಮತ್ತು ತಕ್ಷಕ್ ನಾಗ (Takshaka Naga) ಅಗ್ನಿಗೆ ಆಹುತಿಯಾಗುವವರಿದ್ದರು, ಆದರೆ ಅಷ್ಟರಲ್ಲೇ ಯಜ್ಞವನ್ನು ನಿಲ್ಲಿಸಲಾಯಿತು. ಇದರಿಂದ ನಾಗ ವಂಶ ಸಂಪೂರ್ಣವಾಗಿ ನಾಶವಾಗೋದು ತಪ್ಪಿತು.
ಅದರ ನಂತರ, ಉಳಿದ ಸರ್ಪಗಳ ಸುಟ್ಟ ಗಾಯಗಳನ್ನು ಗುಣಪಡಿಸಲು ಹಾಲನ್ನು ಅರ್ಪಿಸಲಾಗುತ್ತಿತ್ತು, ಹಾಲಿನಿಂದ ಮಾತ್ರ ಹಾವುಗಳು ಬದುಕಬಹುದು ಮತ್ತು ಅವುಗಳ ಮೇಲಿನ ಗಾಯ ಹೆಚ್ಚು ನೋವಾಗದೇ ತಂಪಾಗಿರುವಂತೆ ನೋಡಿಕೊಳ್ಳಬಹುದಾಗಿತ್ತು. ಹಾಗಾಗಿ ನಾಗರ ಪಂಚಮಿಯ ದಿನದಂದು ಹಾವುಗಳಿಗೆ ಹಾಲನ್ನ ಎರೆಯುತ್ತಾರೆ. ಇನ್ನು ಹಾವುಗಳಿಗೆ ಹಾಲು ನೀಡುವವರು ಎಂದಿಗೂ ಹಾವು ಕಡಿತಕ್ಕೆ ಒಳಗಾಗೋದಿಲ್ಲ ಎನ್ನುವ ನಂಬಿಕೆ ಕೂಡ ಇದೆ. ಅದು ಕೂಡ ವರ್ಷಕೊಮ್ಮೆ ನಾಗನಿಗೆ ಹಾಲು ನೀಡೋದಕ್ಕೆ ಕಾರಣ.
ಹಾವುಗಳಿಗೆ ಹಾಲು ನೀಡೋದು ತಪ್ಪು ಎನ್ನುತ್ತೆ ವಿಜ್ಞಾನ
ನಾಗರ ಪಂಚಮಿಯಂದು ಹಾವುಗಳಿಗೆ ಹಾಲು ನೀಡುವ ನಂಬಿಕೆಯ ಬಗ್ಗೆ ವಿಜ್ಞಾನವು ವಿಭಿನ್ನ ಅಭಿಪ್ರಾಯವನ್ನು ಹೊಂದಿದೆ. ಹಾವುಗಳು ಹಾಲು ಕುಡಿಯುವಷ್ಟು ಗ್ರಂಥಿಗಳನ್ನು ಹೊಂದಿಲ್ಲ ಎಂದು ವಿಜ್ಞಾನ ಹೇಳುತ್ತದೆ. ಹಾವಿನ ಆಹಾರವು ಹಾಲು ಅಲ್ಲ ಅವು ಕೀಟಗಳನ್ನ ಸೇವಿಸುತ್ತವೆ. ಹಾವುಗಳ ಮೇಲೆ ಹಾಲು ಎರೆಯೋದ್ರಿಂದ ಅಥವಾ ಹಾವುಗಳಿಗೆ ಹಾಲು ನೀಡೋದ್ರಿಂದ ಅವು ಸಾವನ್ನಪ್ಪುತ್ತವೆ ಎಂದು ಹೇಳುತ್ತಾರೆ ವಿಜ್ಞಾನಿಗಳು.