ಬಕ್ರೀದ್ ದಿನ ಗಂಡು ಮೇಕೆಯ ಬಲಿ ಕೊಡೋದು ಯಾಕೆ?
ಮುಸ್ಲಿಂ ಧರ್ಮದಲ್ಲಿ ಬಕ್ರೀದ್ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಈದ್-ಉಲ್-ಅಝಾ ಎಂದೂ ಸಹ ಕರೆಯಲಾಗುತ್ತದೆ ಅಥವಾ ಇದನ್ನು ಕುರ್ಬಾನಿಯ ಹಬ್ಬ ಎಂದೂ ಕರೆಯಲಾಗುತ್ತದೆ. ಪವಿತ್ರ ರಂಜಾನ್ ತಿಂಗಳ ನಂತರ ಬಕ್ರೀದ್ ಅನ್ನು ಸರಿಯಾಗಿ 70 ದಿನಗಳ ನಂತರ ಆಚರಿಸಲಾಗುತ್ತೆ. ಇಂದು ನಾವು ಈ ಹಬ್ಬದ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತೇವೆ ತಿಳಿಯಿರಿ.
ಬಕ್ರೀದ್ ಹಬ್ಬವನ್ನು ಚಂದ್ರನ ದರ್ಶನದ ಮೇಲೆ ನಿಗದಿಪಡಿಸಲಾಗುತ್ತೆ, ಈ ವರ್ಷ ಜುಲೈ 10 ರಂದು ಭಾರತದಾದ್ಯಂತ ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ.ಬಕ್ರೀದ್ ಹಬ್ಬಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳನ್ನು ನಾವು ಇಲ್ಲಿ ನಿಮಗೆ ತಿಳಿಸುತ್ತೇವೆ. ಹಾಗಾದರೆ ಬಕ್ರೀದ್ ನ ಇತಿಹಾಸ (history of bakrid) ಏನು ಮತ್ತು ಈ ವಿಶೇಷ ದಿನವನ್ನು ಹೇಗೆ ಆಚರಿಸಬೇಕು ಎಂದು ತಿಳಿಯೋಣ.
ಯಾಕೆ ಬಕ್ರೀದ್ ಆಚರಿಸಲಾಗುತ್ತೆ?
ಈ ದಿನದಂದು, ಮುಸ್ಲಿಂ ಸಮುದಾಯದ ಜನರು ಈದ್ಗಾಗಳು ಮತ್ತು ಮಸೀದಿಗಳಲ್ಲಿ ಜಮಾತ್ ನೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಹಬ್ಬವು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಪ್ರಾರಂಭವಾಗುತ್ತೆ. ಜನರು ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿ, ಪರಸ್ಪರ ಶುಭಾಶಯ ಕೋರುತ್ತಾರೆ. ಇದಲ್ಲದೆ, ಈ ದಿನ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರುಚಿಕರ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಪ್ರವಾದಿ ಹಜರತ್ ಇಬ್ರಾಹಿಂ ಅವರು ಮೊದಲು ಬಲಿ ನೀಡಲು ಪ್ರಾರಂಭಿಸಿದರು ಎಂದು ಹೇಳಲಾಗುತ್ತದೆ. ಇತಿಹಾಸದ ಪ್ರಕಾರ ಒಮ್ಮೆ ಅಲ್ಲಾಹನು ಪ್ರವಾದಿ ಇಬ್ರಾಹಿಂ ಬಳಿ ತಮ್ಮ ಅತ್ಯಂತ ಪ್ರೀತಿಯ ವಸ್ತುವನ್ನು ತ್ಯಾಗ ಮಾಡಲು ಕೇಳಿದನು ಎಂದು ಹೇಳಲಾಗುತ್ತದೆ. ಆಗ ಪ್ರವಾದಿ ಹಜರತ್ ಇಬ್ರಾಹಿಮ್ ತನ್ನ ಮಗನನ್ನು ಬಲಿಕೊಡಲು ನಿರ್ಧರಿಸಿದ್ದನು, ಏಕೆಂದರೆ ಅವನ ಮಗ ಅವನಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದನು.
ಪ್ರವಾದಿಯವರ ಈ ನಿರ್ಧಾರದಿಂದ ಅಲ್ಲಾಹನು ತುಂಬಾ ಸಂತೋಷಪಟ್ಟನು. ಅವರು ತಮ್ಮ 10 ವರ್ಷದ ಮಗನನ್ನು ಬಲಿಕೊಡಲು ಹೊರಟ ಕೂಡಲೇ, ಅಲ್ಲಾಹನು ತಮ್ಮ ಮಗನ ಬದಲಿಗೆ ಒಂದು ಮೇಕೆಯನ್ನು ಅಲ್ಲಿಗೆ ಕಳುಹಿಸಿದನು. ಅಂದಿನಿಂದ, ಬಕ್ರೀದ್ (bakrid) ದಿನದಂದು ಮೇಕೆಗಳನ್ನು ಬಲಿಕೊಡುವ ಸಂಪ್ರದಾಯ ಪ್ರಾರಂಭವಾಗಿದೆ. ಈ ದಿನದಂದು, ಗಂಡು ಮೇಕೆಗಳಲ್ಲದೆ, ಒಂಟೆಗಳು ಮತ್ತು ಕುರಿಗಳನ್ನು ಸಹ ಬಲಿಕೊಡಬಹುದು.
ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತೆ
ಬಲಿದಾನದ ನಂತರ, ಮಾಂಸವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವನ್ನು ಸಂಬಂಧಿಕರು, ಸ್ನೇಹಿತರು ಮತ್ತು ನೆರೆಹೊರೆಯವರಿಗೆ ನೀಡಿದರೆ, ಎರಡನೇ ಭಾಗವನ್ನು ಬಡವರು ಮತ್ತು ನಿರ್ಗತಿಕರಿಗೆ ವಿತರಿಸಲಾಗುತ್ತದೆ. ಮೂರನೇ ಮತ್ತು ಕೊನೆಯ ಭಾಗವನ್ನು ಕುಟುಂಬಕ್ಕಾಗಿ ಇಡಲಾಗುತ್ತದೆ.
ಕುರ್ಬಾನಿಯ ನಿಯಮಗಳು
ಬಕ್ರೀದ್ ದಿನದಂದು ಕುರ್ಬಾನಿ ನೀಡಲು ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಈ ದಿನ, ಆರೋಗ್ಯವಂತ ಪ್ರಾಣಿಗಳನ್ನು ಮಾತ್ರ ಬಲಿಕೊಡಲಾಗುತ್ತದೆ. ಇದಲ್ಲದೆ, ಖುರ್ಬಾನಿಯ ಹಣವನ್ನು ಪ್ರಾಮಾಣಿಕವಾಗಿ ಗಳಿಸಬೇಕು. ತಪ್ಪು ಮಾರ್ಗಗಳಿಂದ ಗಳಿಸಿದ ಹಣವನ್ನು ಬಲಿ ನೀಡುವುದು ಸರಿಯಲ್ಲ.
ಬಕ್ರೀದ್ ಮಹತ್ವ
ಕುರ್ಬಾನಿಯ ಈ ಹಬ್ಬವು ಜನರಿಗೆ ನಿಜವಾದ ಮತ್ತು ನೀತಿಯ ಮಾರ್ಗದಲ್ಲಿ ನಡೆಯಲು ಕಲಿಸುತ್ತೆ. ಈ ದಿನದಂದು ಒಬ್ಬ ನಿರ್ಗತಿಕ ವ್ಯಕ್ತಿಗೆ ಉತ್ತಮ ಮನಸ್ಸಿನಿಂದ ದಾನ ನೀಡಿದರೆ, ಅದರಿಂದ ಅಲ್ಲನಿಗೆ ಹೆಚ್ಚು ಪ್ರೀತಿ ಉಂಟಾಗುತ್ತೆ ಎಂದು ತಿಳಿದು ಬಂದಿದೆ.
ಇದಲ್ಲದೆ, ಯಾವುದೇ ವ್ಯಕ್ತಿಯು ತನ್ನ ಕರ್ತವ್ಯವನ್ನು ಮರೆಯಬಾರದು ಮತ್ತು ಅವನು ತನ್ನ ಕುಟುಂಬದೊಂದಿಗೆ ತನ್ನ ದೇಶವನ್ನು ರಕ್ಷಿಸಬೇಕು. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಬೇಕೆಂದು ತಿಳಿಸುತ್ತದೆ. ಪ್ರತಿಯೊಬ್ಬ, ಮುಸ್ಲಿಂ ಇದನ್ನು ಪಾಲಿಸಬೇಕೆಂದು ಧರ್ಮವು ತಿಳಿಸುತ್ತೆ.