- Home
- Astrology
- Festivals
- ಗೆಜ್ಜೆ ಸದ್ದು, ಶಂಖನಾದ, ಮಳೆ ಮಾಯ! ಮಂತ್ರಾಲಯದಲ್ಲಿ ಮಾಸ್ಟರ್ ಆನಂದ್‌ಗೆ ಆದ ದೈವೀ ಅನುಭವ ಏನು?
ಗೆಜ್ಜೆ ಸದ್ದು, ಶಂಖನಾದ, ಮಳೆ ಮಾಯ! ಮಂತ್ರಾಲಯದಲ್ಲಿ ಮಾಸ್ಟರ್ ಆನಂದ್‌ಗೆ ಆದ ದೈವೀ ಅನುಭವ ಏನು?
Master Anand spiritual experience ಮಂತ್ರಾಲಯದ ಬಿಚ್ಚಾಲೆ ಗ್ರಾಮದಲ್ಲಿ ಮಧ್ಯರಾತ್ರಿ ಕೇಳಿಬಂದ ಗೆಜ್ಜೆ, ಗಂಟೆ ಮತ್ತು ಶಂಖನಾದದ ದೈವೀ ಅನುಭವಗಳ ಬಗ್ಗೆ ಮಾಸ್ಟರ್ ಆನಂದ್ ಹೇಳಿದ್ದಾರೆ.

ನಿರೂಪಕ ಮಾಸ್ಟರ್ ಆನಂದ್ ಆಧ್ಯಾತ್ಮಿಕ ಅನುಭವ
ಕನ್ನಡದ ಖ್ಯಾತ ನಟ ಹಾಗೂ ನಿರೂಪಕ ಮಾಸ್ಟರ್ ಆನಂದ್ ತಮ್ಮ ಜೀವನದಲ್ಲಿ ನಡೆದ ಅಪರೂಪದ ಆಧ್ಯಾತ್ಮಿಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಮಂತ್ರಾಲಯದ ಸಮೀಪದ ಬಿಚ್ಚಾಲೆ ಗ್ರಾಮದಲ್ಲಿ ನಡೆದ ಈ ಘಟನೆಗಳು ಅವರ ಭಕ್ತಿ ಮತ್ತು ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿವೆ.
ಹಲವು ಪ್ರಶ್ನೆಗಳಿಗೆ ಉತ್ತರ
2011ರಲ್ಲಿ ವೀರಬ್ರಹ್ಮಯ್ಯ ಗುರುಗಳ ಪರಿಚಯವಾದ ನಂತರ ದೇವರ ಬಗ್ಗೆ ಇದ್ದ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು ಎಂದು ಖಾಸಗಿ ಚೆನಲ್‌ನಲ್ಲಿ ನಡೆಸಿದ ಸಂದರ್ಶನದಲ್ಲಿ ಆನಂದ್ ಹೇಳಿದ್ದಾರೆ. ಬಳಿಕ 2017ರಲ್ಲಿ ಅವಧೂತ ಶ್ರೀ ವಿನಯ್ ಗುರೂಜಿ ಅವರ ಸಂಪರ್ಕಕ್ಕೆ ಬಂದ ಅವರು, ಪ್ರಸ್ತುತ ಅವರನ್ನು ತಮ್ಮ ಪ್ರತ್ಯಕ್ಷ ಗುರು ಹಾಗೂ ದೈವವೆಂದು ಭಾವಿಸುತ್ತಾರೆ.
ಮಂತ್ರಾಲಯದ ಬಳಿ ಪವಾಡ
ಒಮ್ಮೆ ತಮ್ಮ ತಾಯಿ ಹಾಗೂ ಶೂಟಿಂಗ್ ತಂಡದೊಂದಿಗೆ ಮಂತ್ರಾಲಯದ ಬಳಿಯ ಬಿಚ್ಚಾಲೆ ಗ್ರಾಮಕ್ಕೆ ತೆರಳಿದ್ದ ಆನಂದ್, ಅಲ್ಲಿನ ಪವಿತ್ರ ಮಣ್ಣಿನ ಮೇಲೆ ಮರದ ಕೆಳಗೆ ಮಲಗುವ ಸಂಕಲ್ಪ ಮಾಡಿದ್ದರು. ಆ ರಾತ್ರಿ ಭಾರೀ ಮಳೆ ಬರುವ ಸೂಚನೆ ಇದ್ದರೂ, ಪ್ರಾರ್ಥನೆಯ ಬಳಿಕ ಕಾರ್ಮೋಡಗಳು ಸರಿದು ಆಕಾಶ ಸ್ವಚ್ಛವಾಗಿತ್ತೆಂದು ಅವರು ನೆನಪಿಸಿಕೊಂಡಿದ್ದಾರೆ.
ಮಧ್ಯರಾತ್ರಿ ಆಶ್ಚರ್ಯಕಾರಿ ಅನುಭವ ನಡೆದದ್ದು
ಆದರೆ ನಿಜವಾದ ಆಶ್ಚರ್ಯಕಾರಿ ಅನುಭವ ನಡೆದದ್ದು ಮಧ್ಯರಾತ್ರಿ. ಬೆಳಿಗ್ಗೆ ಎದ್ದ ಬಳಿಕ ಆನಂದ್ ಅವರ ತಾಯಿ, ರಾತ್ರಿ 3 ಗಂಟೆ ಸುಮಾರಿಗೆ ಯಾರೋ ನಡೆದುಹೋದಂತೆ ಸ್ಪಷ್ಟವಾದ ಗೆಜ್ಜೆಯ ಶಬ್ದ ಕೇಳಿಸಿತೆಂದು ತಿಳಿಸಿದ್ದಾರೆ. ಅದೇ ಸಮಯದಲ್ಲಿ ತಂಡದ ಒಬ್ಬ ಸಹಾಯಕನಿಗೆ ಗಂಟೆ, ಜಾಗಟೆ ಮತ್ತು ಶಂಖನಾದಗಳು ಕೇಳಿಸಿಕೊಂಡಿದ್ದವಂತೆ.
ದೈವಿಕ ಪೂಜೆಯ ಸಂಕೇತ
ಈ ಬಗ್ಗೆ ಅಲ್ಲಿನ ಹಿರಿಯರನ್ನು ಪ್ರಶ್ನಿಸಿದಾಗ, ಗೆಜ್ಜೆಯ ಶಬ್ದವು ಗ್ರಾಮದೇವತೆ ಮಂಚಾಲಮ್ಮನ ಸಂಚಾರದ ಸಂಕೇತವಾಗಿದ್ದು, ಗಂಟೆ ಹಾಗೂ ಶಂಖನಾದವು ಅಪಣ್ಣಾಚಾರ್ಯರು ರಾಯರ ಬೃಂದಾವನದಲ್ಲಿ ನಡೆಸುವ ದೈವಿಕ ಪೂಜೆಯ ಸಂಕೇತ ಎಂದು ವಿವರಿಸಿದ್ದಾರೆ.
ಆಧ್ಯಾತ್ಮಿಕ ಪಯಣಕ್ಕೆ ಹೊಸ ಅರ್ಥ
ಈ ಅನುಭವಗಳು ತಮ್ಮ ಆಧ್ಯಾತ್ಮಿಕ ಪಯಣಕ್ಕೆ ಹೊಸ ಅರ್ಥ ನೀಡಿವೆ ಎಂದು ಮಾಸ್ಟರ್ ಆನಂದ್ ತಿಳಿಸಿದ್ದಾರೆ. ಭಕ್ತಿ, ನಂಬಿಕೆ ಮತ್ತು ದೈವಾನುಭವಗಳ ಈ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.