ಕಂಬಳ ಭೂಮಿಯಲ್ಲಿ ನಡೆಯಿತು ನಾಗ ಪವಾಡ.. ಹಳೇ ಜಾಗದಲ್ಲೇ ಹೊಕ್ಕಾಡಿಗೋಳಿ ಕಂಬಳ ನಡೆಸಲು ಗ್ರೀನ್ ಸಿಗ್ನಲ್ !
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಐತಿಹಾಸಿಕ ಕಂಬಳ. ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಎಂಬ ಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ಈ ಕಂಬಳಕ್ಕೆ ನೂರೈವತ್ತು ವರ್ಷಗಳ ಇತಿಹಾಸವಿದೆ.
ಹೊಕ್ಕಾಡಿಗೋಳಿ : ತುಳುನಾಡಿನ ಜಾನಪದ ಕ್ರೀಡೆ ಕಂಬಳ ಬರೀ ಮನೋರಂಜನೆಗೆ ಮಾತ್ರ ನಡೆಯೋದಲ್ಲ. ಇದಕ್ಕೆ ಹೊಂದಿಕೊಂಡು ದೈವಾರಾಧನೆ ಮತ್ತು ನಾಗಾರಾಧನೆಗಳಿವೆ. ಇಂತಹ ನಂಬಿಕೆಗಳ ಪ್ರತೀಕವಾಗಿದ್ದ ಸುಮಾರು 150 ವರ್ಷಗಳ ಇತಿಹಾಸವಿರುವ ಹೊಕ್ಕಾಡಿಗೋಳಿ ಕಂಬಳಕ್ಕೆ ಈ ವರ್ಷಾರಂಭದಲ್ಲೇ ಹಲವು ತೊಡಕುಗಳು ಎದುರಾಗಿದ್ದವು. ಇದೀಗ ದೈವ ಕಾರ್ಣಿಕ ಎಂಬಂತೆ ಮತ್ತೆ ಅದೇ ಜಾಗದಲ್ಲಿ ಕಂಬಳ ನಡೆಯಲು ಪವಾಡವೇ ಸೃಷ್ಟಿಯಾಯ್ತು. ಅಷ್ಟಕ್ಕೂ ಆಗಿದ್ದೇನು ಗೊತ್ತಾ?
ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳ ಐತಿಹಾಸಿಕ ಕಂಬಳ. ಬಂಟ್ವಾಳ ತಾಲೂಕು ಎಲಿಯನಡುಗೋಡು ಮತ್ತು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದ ಗಡಿ ಭಾಗದಲ್ಲಿರುವ ಹೊಕ್ಕಾಡಿಗೋಳಿ ಎಂಬ ಸ್ಥಳದಲ್ಲಿ ವರ್ಷಂಪ್ರತಿ ನಡೆಯುವ ಈ ಕಂಬಳಕ್ಕೆ ನೂರೈವತ್ತು ವರ್ಷಗಳ ಇತಿಹಾಸವಿದೆ. ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಸ್ಥಾನ ಹಾಗೂ ಮೂಜಿಳ್ನಾಳ ದೈವಗಳಿಗೆ ಸಂಬಂಧಿಸಿದ ಕಂಬಳ ಇದಾಗಿದ್ದು ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರಲಾಗುತ್ತಿದೆ.
ಆದರೆ ಈ ಬಾರಿ ಕಾರಣಾಂತರಗಳಿಂದ ಹೊಕ್ಕಾಡಿಗೋಳಿ ಕಂಬಳ ಗೊಂದಲಮಯವಾಗಿತ್ತು. ಕಂಬಳ ನಡೆಯುವ ಜಾಗಕ್ಕೆ ಸಂಬಂಧಿಸಿದ ಒಳಜಗಳಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಜಾಗವನ್ನು ಬದಲಿಸಬೇಕಾದ ಪರಿಸ್ಥಿತಿ ಬಂದಿತ್ತು. ಪ್ರತೀ ವರ್ಷ ಡಿಸೆಂಬರ್ ಆರಂಭದಲ್ಲಿ ನಡೆಯುತ್ತಿದ್ದ ಕಂಬಳ ಮಾರ್ಚ್ ತಿಂಗಳಲ್ಲಿ ಹೊಸ ಕರೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು. ಹೊಸ ಕರೆ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದ್ದರೂ ಆರಂಭದಿಂದಲೂ ಹಲವು ಅಡೆತಡೆಗಳು ಎದುರಾಗಲು ಶುರುವಾದವು.
ಇದೇ ಹೊತ್ತಿಗೆ ಸಾಂಪ್ರದಾಯಿಕ ಕಂಬಳ ನಡೆಯುವ ಜಾಗದಲ್ಲಿ ನಾಗಗಳ ಓಡಾಟ ಜಾಸ್ತಿಯಾಗಿದೆ. ಸುಧೀರ್ ಶೆಟ್ಟಿ, ದಿ. ಗುಮ್ಮಣ್ಣ ಶೆಟ್ಟಿ, ಪ್ರವೀಣ್ ಕುಲಾಲ್ ಮತ್ತು ಕೊಲ್ಯ ಬಾಬು ಶೆಟ್ಟಿ ಎಂಬುವವರಿಗೆ ಈ ಜಾಗ ಸಂಬಂಧಪಟ್ಟಿದ್ದು ಹಲವು ರೀತಿಯ ಘಟನೆಗಳಿಗೆ ಕಳೆದ ಕೆಲ ದಿನಗಳಿಂದ ಕಂಬಳ ಗದ್ದೆ ಸಾಕ್ಷಿಯಾಗಿದೆ. ಇದರಿಂದ ಭಯಗೊಂಡ ಜಾಗದ ಮಾಲಿಕರು ಕಂಬಳ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ.ಸಾಂಪ್ರದಾಯಿಕ ಕಂಬಳ ನಡೆಯದೆ ಭಯದಲ್ಲಿ ಇದ್ದ ಊರವರೂ ಇದರಿಂದ ನಿಟ್ಟುಸಿರು ಬಿಟ್ಟಿದ್ದು ಸದ್ಯ ಕಂಬಳದ ಕರೆ ಪೂಜೆಯನ್ನೂ ನೆರವೇರಿಸಿದ್ದಾರೆ. ಪೂಂಜ ಪಂಚ ದುರ್ಗಾಪರಮೇಶ್ವರಿ ದೇವಸ್ಥಾನದ ಅಸ್ರಣ್ಣ ಕೃಷ್ಣಪ್ರಸಾದ್ ಭೂಮಿ ಪೂಜೆ ನೆರವೇರಿಸಿದ್ದಾರೆ. ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿಯವರ ನೇತೃತ್ವದಲ್ಲಿ ಗುಂಡ್ಯಾರು ಸಂಜೀವಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹೊಕ್ಕಾಡಿಗೋಳಿ ಕಂಬಳ ನಡೆಯಲಿದೆ.
ಈಗಾಗಲೇ ಹೊಕ್ಕಾಡಿಗೋಳಿ ಕಂಬಳಕ್ಕೆ ದಿನಾಂಕ ನಿಗದಿಯಾಗಿರುವಂತೆ ಮಾರ್ಚ್ 16, 17 ರಂದು ಮೊದಲು ನಡೆಯುತ್ತಿದ್ದ ಜಾಗದಲ್ಲೇ ಕಂಬಳ ನಡೆಸುತ್ತೇವೆಂದು ಸಂಘಟಕರು ತಿಳಿಸಿದ್ದಾರೆ. ಇನ್ನು ಇದೇ ವೇಳೆ ಹೊಸ ಜಾಗದಲ್ಲಿ ಹೊಸ ಕರೆ ಮಾಡಿ ಹೊಕ್ಕಾಡಿಗೋಳಿ ಕಂಬಳ ನಡೆಸಲೂ ತಯಾರಿ ನಡೆದಿದ್ದು ಒಂದು ವೇಳೆ ಅದೂ ಸಾಧ್ಯವಾದರೆ ಹೊಸ ದಿನಾಂಕ ಘೋಷಣೆ ಮಾಡಬೇಕಾಗಬಹುದು. ಸಾಧ್ಯವಾದರೆ ಮತ್ತೊಂದು ಹೊಸ ಕಂಬಳಕ್ಕೆ ಈ ಬಾರಿಯ ಕಂಬಳ ಸೀಸನ್ ಸಾಕ್ಷಿಯಾಗಲಿದೆ. ಸದ್ಯ ಈ ಬೆಳವಣಿಗೆಯಿಂದ ಕಂಬಳಾಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.