- Home
- Astrology
- Festivals
- 40ಕಿಮೀ ದೂರ ಕಾಲ್ನಡಿಗೆಯಲ್ಲೇ ಪವಿತ್ರ ಕಪಿಲಾ ಜಲ ಹೊತ್ತು ತಂದು ಆಚರಿಸುತ್ತಾರೆ ಮಹಾಶಿವರಾತ್ರಿ!
40ಕಿಮೀ ದೂರ ಕಾಲ್ನಡಿಗೆಯಲ್ಲೇ ಪವಿತ್ರ ಕಪಿಲಾ ಜಲ ಹೊತ್ತು ತಂದು ಆಚರಿಸುತ್ತಾರೆ ಮಹಾಶಿವರಾತ್ರಿ!
ಕಪಿಲಾ ಜಲದಿಂದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿದ ನೀರನ್ನು ಗ್ರಾಮದ ಪ್ರತಿ ಮನೆಗೂ ಕೊಂಡೊಯ್ದು ಅಭಿಷೇಕದ ನೀರಿಗೆ ಪೂಜೆ ಸಲ್ಲಿಸಿ ಶಿವರಾತ್ರಿ ಆಚರಿಸುತ್ತಾರೆ. ನೂರಾರು ವರ್ಷಗಳಿಂದ ಹಿಂದಿನ ಪೀಳಿಗೆಯವರು ಅನುಸರಿಸಿಕೊಂಡು ಬಂದಿರುವ ಕ್ರಮವನ್ನೆ ಈಗಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಾ ಶಿವರಾತ್ರಿಯನ್ನು ನಿಷ್ಠೆಯಿಂದ ಆಚರಿಸಿಕೊಂಡು ಹೋಗುತ್ತಿದ್ದಾರೆ..

ಇಂದು ಶಿವರಾತ್ರಿ. ಎಲ್ಲೆಡೆ ಶಿವನಿಗೆ ನಾನಾ ರೀತಿಯ ಪೂಜೆ ಪುನಸ್ಕಾರಗಳು ಜಾಗರಣೆ ನಡೆಯುತ್ತವೆ. ಹಲವೆಡೆ ವಿಶಿಷ್ಟ ರೀತಿಯಲ್ಲಿ ಶಿವರಾತ್ರಿ ಆಚರಿಸಲಾಗುತ್ತದೆ. ಅದೇ ರೀತಿ 40 ಕಿಲೋ ಮೀಟರ್ ದೂರದಿಂದ ಬರಿಗಾಲಲ್ಲಿ ಕಪಿಲಾ ಜಲವನ್ನು ಹೊತ್ತು ತಂದು ಶಿವನಿಗೆ ಅಭಿಷೇಕ ಮಾಡಿ ವಿಭಿನ್ನ ರೀತಿಯಲ್ಲಿ ಮಹಾಶಿವರಾತ್ರಿ ಆಚರಿಸುವ ಪದ್ದತಿ ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ ತಲೆತಲಾಂತರಗಳಿಂದ ನಡೆದಕೊಂಡು ಬಂದಿದೆ. ಹೀಗೆ ಪ್ರತಿ ವರ್ಷ ಮಾಡಿದರೆ ಗ್ರಾಮಕ್ಕೆ ಶ್ರೇಯಸ್ಸು ಎಂಬ ನಂಬಿಕೆ ಗ್ರಾಮಸ್ಥರಲ್ಲಿ ಮನೆ ಮಾಡಿದೆ.
ಹೀಗೆ ತಲೆ ಮೇಲೆ ಬಿಂದಿಗೆಗಳನ್ನು ಹೊತ್ತು ಬರುತ್ತಿರುವ ಇವರು 40 ಕಿಲೋ ಮೀಟರ್ ದೂರದ ಕಪಿಲಾ ನದಿಯಿಂದ ಬರಿಗಾಲಲ್ಲಿ ಪವಿತ್ರ ಜಲ ತರುತ್ತಿದ್ದಾರೆ. ಹೀಗೆ ತಂದ ಜಲದಿಂದಲೇ ಶಿವಲಿಂಗಕ್ಕೆ ಅಭಿಷೇಕ ಮಾಡಿ ಗ್ರಾಮಸ್ಥರು ಮಹಾ ಶಿವರಾತ್ರಿ ಆಚರಣೆ ಮಾಡುತ್ತಾರೆ.
ಸುಮಾರು ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಈ ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮೇಶ್ವರ ದೇವಾಲಯಕ್ಕೆ ಹೆಗ್ಗೋಠಾರ ಗ್ರಾಮದ ಐದು ಕುಟುಂಬಗಳು ತಲೆತಲಾಂತರಗಳಿಂದ ಮಹಾ ಶಿವರಾತ್ರಿಯ ದಿನದಂದು ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಕಪಿಲಾಜಲ ಹೊತ್ತು ತಂದು ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬವನ್ನು ವಿಶಿಷ್ಠವಾಗಿ ಆಚರಿಸುವ ಕಾಯಕ ಮಾಡಿಕೊಂಡು ಬರುತ್ತಿವೆ.
ಹೌದು ಚಾಮರಾಜನಗರ ಜಿಲ್ಲೆ ಹೆಗ್ಗೋಠಾರ ಗ್ರಾಮದಲ್ಲಿ ಪ್ರತಿವರ್ಷ ಮಹಾ ಶಿವರಾತ್ರಿಯ ದಿನ ಸೂರ್ಯೋದಯದ ವೇಳೆಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೋಕು ಆಲಂಬಳ್ಳಿ ಬಳಿ ಹರಿಯುವ ಕಪಿಲಾ ನದಿಗೆ ತೆರಳುತ್ತಾರೆ. ಕಪಿಲೆಗೆ ಪೂಜೆ ಸಲ್ಲಿಸಿ ತಾವು ತಂದಿರುವ ಬಿಂದಿಗೆಗಳಲ್ಲಿ ಕಪಿಲಾ ನದಿಯ ನೀರನ್ನು ತುಂಬಿ ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಕಪಿಲಾ ಜಲ ಹೊತ್ತು ತರುತ್ತಾರೆ . ಹೀಗೆ ತರುವ ಕಪಿಲಾ ಜಲದಿಂದಲೇ ಗ್ರಾಮದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡುತ್ತಾರೆ. ಸಿದ್ದರಾಮೇಶ್ವರನಿಗೆ ಐದು ಬಾರಿ ಕಪಿಲಾ ಜಲದಿಂದ ಅಭಿಷೇಕ ಮಾಡುವ ಮೂಲಕ ಶಿವರಾತ್ರಿಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.
ಕಪಿಲಾ ಜಲದಿಂದ ಸಿದ್ದರಾಮೇಶ್ವರನಿಗೆ ಅಭಿಷೇಕ ಮಾಡಿದ ನೀರನ್ನು ಗ್ರಾಮದ ಪ್ರತಿ ಮನೆಗೂ ಕೊಂಡೊಯ್ದು ಅಭಿಷೇಕದ ನೀರಿಗೆ ಪೂಜೆ ಸಲ್ಲಿಸಿ ಶಿವರಾತ್ರಿ ಆಚರಿಸುತ್ತಾರೆ.
ನೂರಾರು ವರ್ಷಗಳಿಂದ ಹಿಂದಿನ ಪೀಳಿಗೆಯವರು ಅನುಸರಿಸಿಕೊಂಡು ಬಂದಿರುವ ಕ್ರಮವನ್ನೆ ಈಗಿನ ಪೀಳಿಗೆಯವರು ಮುಂದುವರಿಸಿಕೊಂಡು ಹೋಗುತ್ತಾ ಶಿವರಾತ್ರಿಯನ್ನು ನಿಷ್ಠೆಯಿಂದ ಆಚರಿಸಿಕೊಂಡು ಹೋಗುತ್ತಿದ್ದಾರೆ