Ujjain mahakal corridor: ನೋಡ ಬನ್ನಿ ‘ಮಹಾಕಾಲನ ಮಹಾಲೋಕ’
ಉಜ್ಜಯನಿ ‘ಮಹಾಕಾಲ ಲೋಕ’ ವೈಭವಕ್ಕೆ ಇಂದು ಮೋದಿ ಚಾಲನೆ
ಕಾಶಿ ಕಾರಿಡಾರ್ ರೀತಿ ಮಹಾಕಾಲನ ಸನ್ನಿಧಿ ಅಭಿವೃದ್ಧಿ
ದೇಶದ ಅತಿ ಉದ್ದದ ಕಾರಿಡಾರ್
ಉಜ್ಜಯನಿ ಮಹಾಕಾಲನ ವೈಭವ ನೋಡಬನ್ನಿ..
12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯವನ್ನು ಕಾಶಿ ಕಾರಿಡಾರ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದ್ದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಅ.11ರಂದು ‘ಮಹಾಕಾಲ ಲೋಕ’ವನ್ನು ಉದ್ಘಾಟಿಸಲಿದ್ದಾರೆ. 2017ರಲ್ಲಿ ಆರಂಭಗೊಂಡ ಈ ಯೋಜನೆಯ ಮೊದಲ ಹಂತ 856 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.
ಮೊದಲು ಹೇಗಿತ್ತು?
ಈ ಕಾರಿಡಾರ್ ನಿರ್ಮಾಣಕ್ಕೂ ಮೊದಲು ದೇವಾಲಯದ ಸುತ್ತಲಿನ ಜಾಗ ಅತ್ಯಂತ ಇಕ್ಕಟ್ಟಿನ ಪ್ರದೇಶದಿಂದ ಕೂಡಿತ್ತು. ಇಡೀ ದೇವಾಲಯದ ವಿಸ್ತೀರ್ಣ ಕೇವಲ 2.87 ಹೆಕ್ಟೇರ್‌ನಷ್ಟಿತ್ತು. ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದಾಗ ಓಡಾಡುವುದು ಕಷ್ಟವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ದೇವಾಸ್ಥಾನವನ್ನು ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಯೋಜನೆ ಪೂರ್ಣಗೊಂಡ ಬಳಿಕ ಇಡೀ ದೇವಾಲಯದ ವಿಸ್ತೀರ್ಣ 47 ಹೆಕ್ಟೇರ್‌ಗೆ ಏರಿಕೆಯಾಗಲಿದೆ. ಭಕ್ತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಸುಮಾರು 856 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕೈಗೊಳ್ಳಲಾಗಿದೆ.
ದೇಶದ ಅತಿ ಉದ್ದದ ಕಾರಿಡಾರ್
ದೇವಾಲಯದ ಸುತ್ತಲಿನ ಕಿರಿದಾದ ಜಾಗ ವಿಶಾಲಗೊಳಿಸಿ ಈ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಇದು 900 ಮೀ. ಉದ್ದವಿದ್ದು, ದೇಶದ ಅತಿ ಉದ್ದದ ಕಾರಿಡಾರ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಈ ಕಾರಿಡಾರ್‌ಗೆ ‘ಮಹಾಕಾಲ ಲೋಕ’ ಎಂದು ಹೆಸರಿಡಲಾಗಿದೆ. ಹಳೆಯ ರುದ್ರಸಾಗರ ಸರೋವರದ ಸುತ್ತಲೂ ಈ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಕಾರಿಡಾರ್‌ನಲ್ಲಿ 12 ಮೀ. ಅಗಲದ ಪ್ರದೇಶವನ್ನು ಪಾದಚಾರಿಗಳ ಓಡಾಟಕ್ಕೆ ಮೀಸಲಿಡಲಾಗಿದೆ. ಆ್ಯಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳು ಚಲಿಸುವುದಕ್ಕೂ ವ್ಯವಸ್ಥೆ ಇದೆ.
ನಂದಿ ದ್ವಾರ ಮತ್ತು ಪಿನಾಕಿ ದ್ವಾರ
ಶಿವ ಪುರಾಣ ಆಧಾರವಾಗಿಟ್ಟುಕೊಂಡು 2 ಬೃಹತ್ ಗೇಟ್‌ವೇ ನಿರ್ಮಿಸಲಾಗಿದೆ. ಈ ಎರಡು ದ್ವಾರಗಳು ಕಾರಿಡಾರ್‌ನ ಆರಂಭದಲ್ಲಿದ್ದು, ಪ್ರಾಚೀನ ದೇವಾಲಯದ ಪ್ರವೇಶ ದ್ವಾರಕ್ಕೆ ದಾರಿ ಮಾಡಿಕೊಡುತ್ತವೆ. ಈ ದ್ವಾರಗಳಿಂದ ಪ್ರವೇಶ ಪಡೆದ ಬಳಿಕ ದಾರಿಯುದ್ದಕ್ಕೂ ಕಾರಿಡಾರ್ ಸೌಂದರ್ಯದ ನೋಟವನ್ನು ನೀಡುತ್ತದೆ. ಈ ದ್ವಾರಗಳ ಮೇಲ್ಭಾಗದಲ್ಲಿ ತ್ರಿಶೂಲ ಶೈಲಿಯ ವಿನ್ಯಾಸ ಹಾಗೂ ಶಿವನ ಮುದ್ರೆಗಳನ್ನು ಕೆತ್ತಲಾಗಿದೆ. ಇಡೀ ಕಾರಿಡಾರ್‌ನಲ್ಲಿ 53 ಭಿತ್ತಿಚಿತ್ರಗಳನ್ನು ಅಳವಡಿಸಲಾಗಿದೆ. ಅಲ್ಲದೇ ನಂದಿದ್ವಾರದ ಬಳಿಕ ತುರ್ತು ನಿರ್ಗಮನ ದ್ವಾರವಿದೆ. ಇದರಲ್ಲಿ ಭಾರಿ ವಾಹನಗಳು ಕೂಡಾ ಚಲಿಸಬಹುದಾಗಿದೆ.
ರಾಜಸ್ಥಾನದ ಮರಳುಗಲ್ಲು ಬಳಕೆ
ಮಹಾಕಾಲ ಕಾರಿಡಾರ್ ನಿರ್ಮಾಣಕ್ಕೆ ರಾಜಸ್ಥಾನದ ಬನ್ಸಿ ಪಹಾರ್‌ಪುರದಿಂದ ಆಮದು ಮಾಡಿಕೊಳ್ಳಲಾದ ಮರಳುಕಲ್ಲುಗಳನ್ನು ಬಳಕೆ ಮಾಡಲಾಗಿದೆ. ರಾಜಸ್ಥಾನ, ಗುಜರಾತ್ ಮತ್ತು ಒಡಿಶಾದ ಕಲಾವಿದರು, ಕುಶಲಕರ್ಮಿಗಳು ಇವುಗಳ ಮೇಲೆ ಸೌಂದರ್ಯದ ಕೆತ್ತನೆ ಮಾಡಿದ್ದಾರೆ. ಐತಿಹಾಸಿಕ ನಗರಗಳ ಪ್ರಾಚೀನತೆಯನ್ನು ಸಂಪೂರ್ಣವಾಗಿ ಬಿಂಬಿಸಲು ಸಾಧ್ಯವಾಗದಿದ್ದರೂ, ಪುರಾತನ ಶೈಲಿಯನ್ನು ನೋಡುಗರಿಗೆ ಒದಗಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ಇವುಗಳನ್ನು ಕೆತ್ತನೆ ಮಾಡಲಾಗಿದೆ. ನೆಲಹಾಸಿಗೂ ಕಲ್ಲುಗಳನ್ನು ಅಳವಡಿಸಲಾಗಿದೆ.
ಒಟ್ಟು 108 ಕಂಬಗಳ ಸೌಂದರ್ಯ
ಕಾರಿಡಾರ್‌ನ ಉದ್ದಕ್ಕೂ ಸಮಾನ ಅಂತರದಲ್ಲಿ 108 ಕಂಬಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಇವುಗಳ ಮೇಲೆಯೇ ಸೌಂದರ್ಯಕ್ಕೆ ಹಾನಿಯಾಗದಂತೆ ಸಿಸಿಟೀವಿ ಕ್ಯಾಮರಾಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸಿರುವುದು ವಿಶೇಷ. ಜನಸಂದಣಿ ನಿರ್ವಹಣೆಗೆ ಪ್ರಕಟಣೆ ಹೊರಡಿಸಲು ಮತ್ತು ಕಾರಿಡಾರ್ ಸಾರ್ವಜನಿಕ ಬಳಕೆಗೆ ಮುಕ್ತವಾದ ಬಳಿಕ ಭಕ್ತಿಗೀತೆಗಳನ್ನು ಪ್ರಸಾರ ಮಾಡಲು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.
ಕಾರಿಡಾರ್‌ನ 24 ಮೀ. ವಿಸ್ತೀರ್ಣವನ್ನು 108 ಕಂಬಗಳಿಂದ ಬೇರ್ಪಡಿಸಲಾಗಿದೆ. ಇವುಗಳ ಮೇಲ್ಭಾಗದಲ್ಲಿ ದೀಪಸ್ತಂಭಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ನಡುವೆಯೇ ಭದ್ರತಾ ವ್ಯವಸ್ಥೆಯನ್ನು ಮೇಲ್ವಿಚಾರಣೆ ನಡೆಸಲು ಸಮಗ್ರ ನಿಯಂತ್ರಣ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ.
ಕಾಳಿದಾಸನ ಕಾವ್ಯದಲ್ಲಿದ್ದ ಸಸ್ಯಗಳು
ದೇವಾಲಯದ ಪ್ರಾಚೀನತೆ ಮತ್ತು ವಾಸ್ತು ವೈಭವವನ್ನು ಇಂದಿನ ಜನರಿಗೆ ತೋರಿಸಲು ಅಗತ್ಯವಾಗುವ ರೀತಿಯಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಪ್ರಾಚೀನತೆಯನ್ನು, ಆ ವೈಭವವನ್ನು ಮತ್ತೊಮ್ಮೆ ತೋರಿಸಲು ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿ ಹೆಸರಿಸಲಾಗಿರುವ ಗಿಡಗಳನ್ನು ಕಾರಿಡಾರ್‌ನಲ್ಲಿ ನೆಡಲಾಗುತ್ತಿದೆ. ಈ ಮೂಲಕ ಪ್ರಾಚೀನ ಸಸ್ಯವೈಭವವೂ ಮಹಾಕಾಲ ಕಾರಿಡಾರ್‌ಗೆ ಭೇಟಿ ನೀಡುವವರಿಗೆ ನೋಡಲು ಸಿಗಲಿದೆ. ರುದ್ರಾಕ್ಷ, ಬಕುಳ, ಕದಮ್, ಬಿಲ್ವಪತ್ರೆ, ಶತಪರ್ಣಿ ಸೇರಿದಂತೆ ಶಿವನಿಗೆ ಪ್ರಿಯವಾದ 40ರಿಂದ 45 ಸಸ್ಯಪ್ರಭೇಧಗಳನ್ನು ಈ ಕಾರಿಡಾರ್‌ನಲ್ಲಿ ನೆಡಲಾಗಿದೆ.
ಶಿವಪುರಾಣದ ಕತೆಗಳು
ಸುಮಾರು 900 ಮೀ. ಉದ್ದದ ಕಾರಿಡಾರ್‌ನಲ್ಲಿ ನಿರ್ಮಾಣ ಮಾಡಲಾಗಿರುವ ಗೋಡೆಗಳ ಮೇಲೆ ಶಿವಪುರಾಣದ ಕಥೆಗಳನ್ನು ಬಿಂಬಿಸುವ ಕತೆಗಳನ್ನು ಕೆತ್ತಲಾಗಿದೆ. ಇವು ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ಅನನ್ಯ ಭಕ್ತಿಯ ಭಾವವನ್ನು ತುಂಬಲಿದೆ. ಇವುಗಳೊಂದಿಗೆ ಅಲಂಕೃತವಾದ ಅಂಕಣಗಳು ಮತ್ತು ನೀರಿನ ಕಾರಂಜಿ ನಿರ್ಮಿಸಲಾಗಿದೆ.
ಕಾರಿಡಾರ್‌ನಲ್ಲಿ ಬೃಹತ್ ಶಿವನ ಮಂಟಪ, ತ್ರಿವೇಣಿ ಮಂಟಪಗಳನ್ನು ನಿರ್ಮಾಣ ಮಾಡಲಾಗಿದ್ದು, ಇವುಗಳ ಮಧ್ಯದಲ್ಲಿರುವ ಶಿವನ ಮೂರ್ತಿಗಳ ಪಕ್ಕದಲ್ಲಿ ಕಾರಂಜಿಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಸರೋವರದ ಮುಂಭಾಗದಲ್ಲಿ ಶಿವನ ವಿವಿಧ ರೂಪಗಳು ಮತ್ತು ಇತರ ದೇವತೆಗಳನ್ನು ತೋರಿಸುವ 190 ಶಿಲ್ಪಗಳನ್ನು ನಿರ್ಮಾಣ ಮಾಡಲಾಗಿದೆ.
ಬೃಹತ್ ಪಾರ್ಕಿಂಗ್ ವ್ಯವಸ್ಥೆ
ಮಹಾಕಾಲ ಲೋಕದಲ್ಲಿ ಬೃಹತ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮಿಡ್‌ವೇ ಜೋನ್, ಉದ್ಯಾನವನಗಳು ಮತ್ತು ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಲ್ಲಿ ಬಸ್ಸು, ಕಾರು ನಿಲ್ಲಿಸಬಹುದಾಗಿದೆ. ಅಲ್ಲದೇ ಹೂವಿನ ಅಂಗಡಿ ಮತ್ತು ಇತರ ಅಂಗಡಿಗಳು, ಭಕ್ತಾಧಿಗಳಿಗಾಗಿ ವಿಶೇಷ ವ್ಯವಸ್ಥೆಗಳು, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಲೈಟ್ ಅಂಡ್ ಸೌಂಡ್ ಸಿಸ್ಟಮ್‌ಸಹ ಅಳವಡಿಸಲಾಗಿದೆ.