ಆರ್ಟ್ ಆಫ್ ಲಿವಿಂಗ್‌ನ ಆಶ್ರಮದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಿ ಕಾರ್ತಿಕ ದೀಪೋತ್ಸವ ಆಚರಣೆ!
ಭಗವಾನ್ ಶಿವ ಮತ್ತು ಭಗವಾನ್ ಮುರುಗನ ಪೌರಾಣಿಕ ಕಥಗಳ ಆಧಾರವನ್ನು ಹೊಂದಿರುವ ಈ ಹಬ್ಬವನ್ನು, ಆಂತರ್ಯದ ಜಾಗೃತಿಯ ಸೂಚಕವಾದ ದೀಪಗಳನ್ನು ಬೆಳಗಿಸಿ ಆಚರಿಸಲಾಗುತ್ತದೆ.
ಬೆಂಗಳೂರು (ನ.17): ಆರ್ಟ್ ಆಫ್ ಲಿವಿಂಗ್‌ನ ಆಶ್ರಮದಲ್ಲಿ ದೀಪೋತ್ಸವದೊಡನೆ ಕೂಡಿದ ಭಕ್ತಿಯ ಮೆರಗಿನಿಂದ ವೈಭವಯುತವಾಗಿ ಕಾರ್ತಿಕ ದೀಪೋತ್ಸವವನ್ನು ಆಚರಿಸಲಾಯಿತು. ಕಾರ್ತಿಕ ದೀಪವು ತಮಿಳುನಾಡಿನ ಅತೀ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದ್ದು, ಕತ್ತಲಿನ ಮೇಲೆ ದೀಪದ ವಿಜಯವನ್ನು ಮತ್ತು ದೈವೀಶಕ್ತಿಯ ಅನಂತ ಅಸ್ತಿತ್ವವನ್ನು ಸಂಭ್ರಮಿಸುವ ಹಬ್ಬವಾಗಿದೆ. ಭಗವಾನ್ ಶಿವ ಮತ್ತು ಭಗವಾನ್ ಮುರುಗನ ಪೌರಾಣಿಕ ಕಥಗಳ ಆಧಾರವನ್ನು ಹೊಂದಿರುವ ಈ ಹಬ್ಬವನ್ನು, ಆಂತರ್ಯದ ಜಾಗೃತಿಯ ಸೂಚಕವಾದ ದೀಪಗಳನ್ನು ಬೆಳಗಿಸಿ ಆಚರಿಸಲಾಗುತ್ತದೆ.
ಜಗನ್ಮಾತೆ ಪಾರ್ವತಿಯ ಪುತ್ರನಾದ ಮುರುಗನ ದೈವೀ ಬೆಳಕನ್ನು, ಬೆಳಗಿಸಲಾಗುವ ದೀಪಗಳು ಸೂಚಿಸುತ್ತವೆ. ಈ ದೈವೀ ಬೆಳಕು ಭಕ್ತರನ್ನು ಜ್ಞಾನ, ಸಾಮರಸ್ಯ ಮತ್ತು ಆಧ್ಯಾತ್ಮಿಕ ಜಾಗೃತಿಯತ್ತ ಕರೆದೊಯ್ಯುತ್ತದೆ. ಈ ಶುಭ ಸಂದರ್ಭದಲ್ಲಿ ತಮಿಳುನಾಡಿನ ಭಕ್ತರು ಎಲ್ಲಾ ಮುರುಗನ ದೇವಸ್ಥಾನಗಳಲ್ಲೂ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಈ ಎಲ್ಲಾ ದೇವಸ್ಥಾನಗಳಿಂದಲೂ ಗುರುದೇವರಿಗೆ ಪ್ರಸಾದವನ್ನು ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗುರುದೇವ್ ಶ್ರೀ ಶ್ರೀ ರವಿಶಂಕರರು ಮುರುಗನನ್ನು ವರ್ಣಿಸುತ್ತಾ, " ಉರುವೈ ಅರುವಾಯ್ ಉಳಧಯೈ ಇಳಧಾಯ್--ಓ ಮುರುಗ, ನೀನು ರೂಪವನ್ನುಳ್ಳವನು ಮತ್ತು ಅರೂಪನೂ ಹೌದು. ಎಲ್ಲವನ್ನೂ ನಿನ್ನಲ್ಲಿ ಹೊಂದಿರುವವನು, ಅದೇ ಸಮಯದಲ್ಲಿ ನೀನು ಪೂರ್ಣವಾಗಿ ಖಾಲಿಯಾಗಿರುವವನು. ಅತೀ ಸಣ್ಣದ್ದರಲ್ಲೂ ಇರುವವನು ನೀನು. ಮರುವೈ ಮಲರಾಯ್ ಮಣಿಯೈ ಒಲಿಯಾಯ್--- ಹೂವಿನಲ್ಲಿ, ಗಂಟೆಯ ನಾದದಲ್ಲಿ, ಬೆಳಕಾಗಿ ಇರುವೆ.
ಕರುವೈ ಉಯಿರಾಯ್ ಗತಿಯಾಯ್ ವಿಧಿಯಾಯ್-- ಗರ್ಭದಲ್ಲಿರುವವನೂ ನೀನೇ, ಜೀವವೂ ನೀನೇ. ಜೀವನದ ಗತಿಯೂ ನೀನೇ, ಅದಕ್ಕೆ ವಿಧಿಯನ್ನು ಕೊಡುವವನೂ ನೀನೇ. ಗುರುವಾಯ್ ವರುವಾಯ್ ಅರಳ್ ವಾಯ್ ಗುಹನೆ--ಗುರುವಾಗಿ ಬಂದು ನಿನ್ನ ಆಶೀರ್ವಾದವನ್ನು ನಮಗೆಲ್ಲರಿಗೂ ನೀಡು" ಎಂದು ಒಂದು ಪ್ರಾಚೀನ ತಮಿಳಿನ ಬರಹವನ್ನು ವಿವರಿಸಿದರು. ಕಾರ್ತೀಕೇಯನನ್ನು ಮತ್ತಷ್ಟು ವಿವರಿಸುತ್ತಾ ಗುರುದೇವರು, " ಭಗವಾನ್ ಕಾರ್ತಿಕೇಯನು ಅಂತಿಮ ಸೌಂದರ್ಯ.
ಅವನಲ್ಲಿ ಎಷ್ಟು ಸೌಂದರ್ಯವಿದೆಯೆಂದರೆ, ಅದನ್ನು ಯಾರಿಂದಲೂ ತಳ್ಳಿ ಹಾಕಲು ಸಾಧ್ಯವಿಲ್ಲ. ಅವನು ಶೂರನೂ ಹೌದು, ಅಪ್ರತಿಮನಾದ ಜ್ಞಾನವೂ ಅವನು. ಆದ್ದರಿಂದಲೇ ತನ್ನ ತಂದೆಯಾದ ಭಗವಾನ್ ಶಿವನಿಗೇ ಗುರುವಾದ ಮತ್ತು ಅವನು ತುಂಟನೂ ಹೌದು" ಎಂದರು. ಕಾರ್ತಿಕ ದೀಪೋತ್ಸವದ ಸಂಜೆಯು, ಕಾಲಾತೀತವಾದ ಕಾರ್ತಿಕ ದೀಪೋತ್ಸವದ ಸಂದೇಶವನ್ನು ಹೊತ್ತ ಭಕ್ತಿಯ, ಸಾಂಸ್ಕೃತಿಕ ವೈಭವದ ಬೆಸುಗೆಯಾಗಿತ್ತು.