Janmashtami 2022: ಸಂಪತ್ತು, ಸಮೃದ್ಧಿಗಾಗಿ ಈ ದಿನ ಮನೆಗೆ ತರಲೇಬೇಕಾದ ವಸ್ತುಗಳಿವು..
ಕೃಷ್ಣ ಜನ್ಮಾಷ್ಟಮಿ, ಗೋಕುಲಾಷ್ಟಮಿ ಅಥವಾ ಕೃಷ್ಣಾಷ್ಟಮಿ ಎಂಬೆಲ್ಲ ಹೆಸರುಗಳಿಂದ ಕರೆವ ಹಬ್ಬವೊಂದು ಹೊಸ್ತಿಲಲ್ಲಿದೆ. ಇದು ವಿಷ್ಣುವಿನ ಎಂಟನೇ ಅವತಾರವಾದ ಕೃಷ್ಣನ ಜನ್ಮದಿನದ ಸಂಭ್ರಮದ ಆಚರಣೆಯಾಗಿದೆ. ಶ್ರೀ ಕೃಷ್ಣನು ತನ್ನ ಭಕ್ತರ ಪ್ರತಿಯೊಂದು ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಾನೆ. ಜನ್ಮಾಷ್ಟಮಿಯ ಅತಿ ದೊಡ್ಡ ಆಚರಣೆಯು ಮಥುರಾ ಮತ್ತು ವೃಂದಾವನದಲ್ಲಿ ನಡೆಯುತ್ತದೆ. ಅದು ಭಗವಾನ್ ಕೃಷ್ಣ ಹುಟ್ಟಿ ಬೆಳೆದ ಸ್ಥಳ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಭಗವಾನ್ ಕೃಷ್ಣ ಜನಿಸಿದನು. ಈ ವರ್ಷ, ಜನ್ಮಾಷ್ಟಮಿಯನ್ನು ಆಗಸ್ಟ್ 18 ಮತ್ತು 19ರಂದು ಎರಡು ದಿನಗಳ ಕಾಲ ಆಚರಿಸಲಾಗುತ್ತದೆ.
ಈ ಹಬ್ಬದಂದು ನೀವು ಈ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ ಅದು ಶ್ರೀಕೃಷ್ಣನನ್ನು ಸಂತೋಷಪಡಿಸುತ್ತದೆ. ಮತ್ತು ಆತನ ಅನುಗ್ರಹದಿಂದ ನೀವು ಬಯಸಿದ ಭಾಗ್ಯ ಪಡೆಯಬಹುದಾಗಿದೆ.
ಬೆಣ್ಣೆ(butter)
ಬೆಣ್ಣೆ ಕಳ್ಳ ಎಂದೇ ಮುದ್ದಿನಿಂದ ಕರೆಯಲ್ಪಡುವ ಶ್ರೀಕೃಷ್ಣನಿಗೆ ಬೆಣ್ಣೆ ಎಂದರೆ ಇನ್ನಿಲ್ಲದಷ್ಟು ಅಚ್ಚುಮೆಚ್ಚು. ಗೋಪಿಯರಿಂದ ಬೆಣ್ಣೆ ಕದಿಯುತ್ತಿದ್ದುದರಿಂದ ತುಂಟ ಕೃಷ್ಣನಿಗೆ ಅದೇ ಹೆಸರು ಬಂದಿದೆ. ಅದಕ್ಕೇ ಜನ್ಮಾಷ್ಟಮಿ ಆಚರಣೆಗೆ ಬೆಣ್ಣೆ ಇರಲೇಬೇಕು. ಬೆಣ್ಣೆಯನ್ನು ಮನೆಯಲ್ಲೇ ತಯಾರಿಸಿ ಇಲ್ಲವೇ ಖರೀದಿಸಿ ಶ್ರೀಕೃಷ್ಣನಿಗೆ ಅರ್ಪಿಸಬೇಕು.
ಕೊಳಲು(Flute)
ಕೃಷ್ಣ ಎಂದು ನೆನೆದರೆ ಸಾಕು, ಕೊಳಲಿನ ಸುಮಧುರ ರಾಗ ನಮ್ಮ ಮನದಲ್ಲಿ ಮೂಡುತ್ತದೆ. ಕೊಳಲಿಲ್ಲದೆ ಶ್ರೀ ಕೃಷ್ಣನನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಆತನ ಕೊಳಲು ಪ್ರೀತಿಯಿಂದಲೇ ಅವನನ್ನು ಮುರಳೀಧರ, ಬನ್ಸಿವಾಲೆ, ಬನ್ಶಿಧರ್, ಬಸುರಿ ವಾಲೆ ಮತ್ತು ಬನ್ಸಿ ಬಾಜಯ್ಯ ಎಂದೆಲ್ಲ ಕರೆಯಲಾಗುತ್ತದೆ. ಆದುದರಿಂದ ಜನ್ಮಾಷ್ಟಮಿಯ ದಿನ ಖಂಡಿತವಾಗಿ ಕೊಳಲನ್ನು ಮನೆಗೆ ತರಬೇಕು. ದೇವರಿಗೆ ಸಣ್ಣ ಮರದ ಅಥವಾ ಬೆಳ್ಳಿಯ ಕೊಳಲನ್ನು ಅರ್ಪಿಸಿ, ನಂತರ ಅದನ್ನು ನಿಮ್ಮ ಸುರಕ್ಷಿತ ಅಥವಾ ಪೂಜಾ ಸ್ಥಳದಲ್ಲಿ ಬೀರುಗಳಲ್ಲಿ ಇರಿಸಿ.
ನವಿಲು ಗರಿ(Peacock feather)
ಶ್ರೀಕೃಷ್ಣನನ್ನು ಧ್ಯಾನಿಸಿದಾಗಲೆಲ್ಲಾ ಮನಸ್ಸಿನಲ್ಲಿ ನವಿಲು ಗರಿಗಳ ಚಿತ್ರವು ಖಂಡಿತವಾಗಿಯೂ ಹೊರಹೊಮ್ಮುತ್ತದೆ. ಶ್ರೀಕೃಷ್ಣನು ನವಿಲು ಗರಿಯನ್ನು ತುಂಬಾ ಪ್ರೀತಿಸುತ್ತಿದ್ದನು, ಅವನು ಅದನ್ನು ಯಾವಾಗಲೂ ತನ್ನ ಕಿರೀಟದ ಮೇಲೆ ಹಾಕಿಟ್ಟುಕೊಂಡು ಅಲಂಕರಿಸಿಕೊಳ್ಳುತ್ತಿದ್ದನು. ಅದೇ ಸಮಯದಲ್ಲಿ, ವಾಸ್ತು ಶಾಸ್ತ್ರದಲ್ಲಿ, ನವಿಲು ಧನಾತ್ಮಕ ಶಕ್ತಿಯನ್ನು ತರುವುದೆಂದು ಹೇಳಲಾಗಿದೆ. ಜನ್ಮಾಷ್ಟಮಿಯ ದಿನದಂದು ಮನೆಯಲ್ಲಿ ನವಿಲು ಗರಿಗಳನ್ನು ತಂದಿಟ್ಟುಕೊಂಡರೆ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ಕಾಳ ಸರ್ಪ ದೋಷದಿಂದ ಮುಕ್ತಿ ಸಿಗುತ್ತದೆ.
ವೈಜಯಂತಿ ಮಾಲೆ(Vaijayanti Garland)
ಹಿಂದೂ ಧರ್ಮದಲ್ಲಿ, ವಿವಿಧ ದೇವರುಗಳನ್ನು ಪೂಜಿಸಲು ವಿವಿಧ ಹೂಮಾಲೆಗಳನ್ನು ಉಲ್ಲೇಖಿಸಲಾಗಿದೆ. ರುದ್ರಾಕ್ಷದ ಜಪಮಾಲೆಯಿಂದ ಶಿವನನ್ನು ಪೂಜಿಸುವುದರಿಂದ ಬಯಸಿದ ಫಲಿತಾಂಶವನ್ನು ನೀಡುವಂತೆ, ಶ್ರೀಕೃಷ್ಣನನ್ನು ವೈಜಯಂತಿ ಜಪಮಾಲೆಯಿಂದ ಪೂಜಿಸಲಾಗುತ್ತದೆ. ಆದುದರಿಂದ ಜನ್ಮಾಷ್ಟಮಿಯ ದಿನದಂದು ವೈಜಯಂತಿ ಮಾಲೆಯನ್ನು ಖಂಡಿತವಾಗಿ ಖರೀದಿಸಬೇಕು. ಈ ಮಾಲಾವನ್ನು ಕಮಲದ ಬೀಜಗಳಿಂದ ತಯಾರಿಸಲಾಗುತ್ತದೆ ಮತ್ತು ಲಕ್ಷ್ಮಿ ದೇವಿಯು ಅದರಲ್ಲಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ. ಈ ಮಾಲೆಯನ್ನು ದೇವರ ಕೋಣೆಯಲ್ಲಿ ಇಟ್ಟುಕೊಂಡರೆ ಹಣದ ಕೊರತೆ ಎಂದಿಗೂ ಬರುವುದಿಲ್ಲ.
ಕರುವಿನ ಜೊತೆ ಹಸು(Cow with Calf)
ಶ್ರೀಕೃಷ್ಣನ ಭಕ್ತರಿಗೆ ಅವನ ಗೋಪ್ರೇಮ ಗೊತ್ತೇ ಇದೆ. ಗೋವಿಂದ ಎಂದೇ ಹೆಸರಾದ ಶ್ರೀಕೃಷ್ಣ ಬಾಲ್ಯದಲ್ಲಿ ಹಸುಗಳನ್ನು ಮೇಯಿಸಲು ಹೋಗುತ್ತಿದ್ದರು. ಇದರೊಂದಿಗೆ ಹಸುವಿನ ಹಾಲಿನಿಂದ ಮಾಡಿದ ಬೆಣ್ಣೆಯೂ ಶ್ರೀಕೃಷ್ಣನಿಗೆ ತುಂಬಾ ಇಷ್ಟ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಹಸುಗಳಲ್ಲಿ ನೆಲೆಸಿದೆ. ಆದ್ದರಿಂದ, ಜನ್ಮಾಷ್ಟಮಿ ಹಬ್ಬದಂದು, ನೀವು ಹಸು ಮತ್ತು ಕರುವಿನ ಸಣ್ಣ ಪ್ರತಿಮೆಯನ್ನು ಖರೀದಿಸಬೇಕು. ಇದನ್ನು ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಇದರೊಂದಿಗೆ ವಾಸ್ತು ದೋಷಗಳು ನಿವಾರಣೆಯಾಗಿ ಅದೃಷ್ಟ ಮತ್ತು ಸಮೃದ್ಧಿ ದೊರೆಯುತ್ತದೆ.