ಉತ್ತರಕನ್ನಡ: ಇಡಗುಂಜಿಯಲ್ಲಿ ಚೌತಿಯ ಸಂಭ್ರಮ, ವಿಘ್ನ ನಿವಾರಕನ ದರ್ಶನಕ್ಕೆ ಜನಸಾಗರ
ಉತ್ತರಕನ್ನಡ(ಆ.31): ಇಂದು ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ. ರಾಜ್ಯದ ಮೂಲೆ ಮೂಲೆಯಲ್ಲೂ ಗಣೇಶನ ಮೂರ್ತಿಯನ್ನಿರಿಸಿ ಪೂಜೆ ಸಲ್ಲಿಸಲಾಗುತ್ತಿದ್ರೆ, ಗಣಪತಿ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜೆ, ಪುನಸ್ಕಾರಗಳನ್ನು ನಡೆಸಲಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಕ್ಷೇತ್ರದಲ್ಲಂತೂ ಬೆಳಗ್ಗೆಯಿಂದಲೂ ಜನಸಾಗರ ದೇವರ ದರ್ಶನಕ್ಕೆ ಹರಿಬರುತ್ತಿದ್ದು, ರಾಜ್ಯ, ಹೊರ ರಾಜ್ಯಗಳಿಂದ ಬರುವಂತಹ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಸುಮಾರು 3 ಕಿ.ಮೀ. ದೂರದಿಂದ ದೇವರ ದರ್ಶನಕ್ಕಾಗಿ ನಡೆದುಕೊಂಡು ಬರುತ್ತಿರುವ ಭಕ್ತಾಧಿಗಳು, ದೇವಳದ ಆವರಣದಲ್ಲಿ ಸಾಲಾಗಿ ಸಾಗಿ ಗಣೇಶನ ದರ್ಶನ ಪಡೆಯುತ್ತಿದ್ದಾರೆ.
ಬೆಳಗ್ಗೆ ಸುಮಾರು 4 ಗಂಟೆಯಿಂದಲೇ ದೇವಳಕ್ಕೆ ಸಾವಿರಾರು ಭಕ್ತಾಧಿಗಳ ಆಗಮನವಾಗುತ್ತಿದ್ದು, ಭಕ್ತಾಧಿಗಳ ಭಾರೀ ಸಂಖ್ಯೆಯ ಹಿನ್ನೆಲೆ ಕ್ವಿಂಟಾಲ್‌ಗಟ್ಟಲೇ ಪಂಚಕಜ್ಜಾಯ ತಯಾರಿ ಮಾಡಲಾಗಿದೆ. ಅಲ್ಲದೇ, ಬೆಳಗ್ಗೆಯಿಂದ ಸಂಜೆಯವರೆಗೆ ಇಡಗುಂಜಿ ಕ್ಷೇತ್ರದಲ್ಲಿ 200 ಗಣಹೋಮ ನಡೆಯಲಿದ್ದು, ಸುಮಾರು 30ರಿಂದ 40,000 ತೆಂಗಿನಕಾಯಿ ವಿನಾಯಕನಿಗೆ ಅರ್ಪಣೆ ಮಾಡಲಾಗುತ್ತಿದೆ.
ಹೊನ್ನಾವರದ ಇಡಗುಂಜಿ ಕ್ಷೇತ್ರ ದೇಶದಲ್ಲೇ ಅತೀ ವಿಶಿಷ್ಠವಾಗಿದ್ದು, ದ್ವಿದಂತ ಹಾಗೂ ದ್ವಿಭುಜವಿರುವ ಅತೀ ವಿಶೇಷ ಗಣಪತಿ ಇಲ್ಲಿ ಕಾಣಬಹುದಾಗಿದೆ. ಇನ್ನು ಕಿಲೋಮೀಟರ್‌ಗಟ್ಟಲೇ ಸಾಲಿನಿಂದ ಬರುವ ಭಕ್ತಾಧಿಗಳಿಗಾಗಿ ದೇವಳದ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ, ಪಾನೀಯದ ವ್ಯವಸ್ಥೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೃದ್ಧರು, ಸಣ್ಣ ಮಕ್ಕಳು 2-3 ಕಿ.ಮೀ ನಡೆದುಕೊಂಡೇ ಬರಬೇಕಾದ್ದರಿಂದ ಯಾವುದೇ ಸೌಲಭ್ಯವಿಲ್ಲವೆಂದು ಅಸಮಾಧಾನ ತೋರ್ಪಡಿಸಿದ್ದಾರೆ.