ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಭಾಸವಾಗುತ್ತೆ ಸುಪ್ರಸಿದ್ಧ ಕಲಾವಿದ ಜಿ. ಡಿ. ಭಟ್ ಕೈಚಳಕ
ರಾಘವೇಂದ್ರ ಅಗ್ನಿಹೋತ್ರಿ
ಉತ್ತರ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಕಲಾವಿದ ಕೆಕ್ಕಾರು ಜಿ. ಡಿ. ಭಟ್ ಅವರಿಗೆ ಸರಿಸಾಟಿಯೇ ಇಲ್ಲವೆಂದರೆ ಅದು ಅತಿಶಯೋಕ್ತಿಯಲ್ಲ. ಅವರ ಮನೆಯಲ್ಲಿನ ಮಣ್ಣಿನ ಗೌರಿ ಗಣೇಶನನ್ನ ನೋಡಿದರೆ ಯಾರೂ ಇದು ಮಣ್ಣಿನ ಮೂರ್ತಿ ಎನ್ನುವುದಿಲ್ಲ, ಸಾಕ್ಷಾತ್ ಗೌರಿ ಗಣೇಶ ಕೈಲಾಸದಿಂದ ಧರೆಗಿಳಿದಂತೇ ಇದೆ ಅವರ ಕೈಚಳಕ.ಕಳೆದ ಐವತ್ತು ವರ್ಷಗಳಿಂದ ಮಣ್ಣಿನ ಮೂರ್ತಿ ಮೆತ್ತುವ ಕಲಾಸಿದ್ಧಿ ಅವರಿಗೆ ಸಿದ್ಧಿಸಿದೆ.ಮಣ್ಣಿಗೆ ಜೀವ ತುಂಬಿ ಭಾವಸೃಜಿಸುವ ಅವರ ಕಲೆಗೆ ಎಲ್ಲರೂ ತಲೆದೂಗುತ್ತಾರೆ. ಗಣೇಶ ಚತುರ್ಥಿ ಬಂತೆಂದರೆ ಜಿ.ಡಿ. ಭಟ್ಟರು ಮಾಡಿದ ಗಣಪತಿ ವಿಗ್ರಹಗಳನ್ನು ಕಣ್ತುಂಬಿಕೊಳ್ಳಲು ಕಾತರಿಸುವಂತೇ ಮಾಡುವುದು ಸುಳ್ಳಲ್ಲ. ನೀವೂ ಅವರು ತಯಾರಿಸಿದ ಗಣಪತಿಯ ಹಾಗೂ ಗೌರಿಯ ವಿಗ್ರಹಗಳನ್ನು ಕಣ್ತುಂಬಿಸಿಕೊಳ್ಳಿ.
ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ಆ ಕೈಚಳಕ ಜಿಡಿ ಭಟ್ಟರು ತಯಾರಿಸುವ ಮಣ್ಣಿನ ಮೂರ್ತಿಯಲ್ಲಡಗಿರುತ್ತದೆ. ಅಂತಹುದೇ ಸೃಷ್ಟಿ ಈ ಬಾರಿಯ ಗೌರಿ ಗಣೇಶ.
ಕಳೆದ ಬಾರಿಯೂ ಅವರು ಗಣಪತಿಗೆ ಉಡಿಸಿದ ಪಂಚೆ ಸಾಕಷ್ಟು ಜಿಜ್ಞಾಸೆಗೆ ಕಾರಣವಾಗಿತ್ತು. ಈ ಬಾರಿ ಮತ್ತೆ ಗೌರಿ ಗಣೇಶ ಮೂರ್ತಿ ಆಕರ್ಷಣೆಯ ಕೇಂದ್ರವಾಗಿ, ಹಲವು ಪ್ರಶ್ನೆಗಳನ್ನು ಮೂಡಿಸಿವೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಕ್ಕಾರು ಜಿಡಿ ಭಟ್ಟರು ಸರಳ ಸಜ್ಜನರು. ಅವರಿಗೆ ಕೆಕ್ಕಾರಿನಿಂದ ಕರುನಾಡಿನಾದ್ಯಂತ ಸಹಸ್ರಾರು ಅಭಿಮಾನಿಗಳಿದ್ದಾರೆ, ಹಲವು ಸಂಘ ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ.
ಯಾವ ಹಿನ್ನೆಲೆಯೂ ಇಲ್ಲದೇ ಕಲೆಯ ಸೆಳೆತ ಆರಂಭವಾಗಿ ಪ್ರತಿ ಬಾರಿಯೂ ಪ್ರಯೋಗ ಮಾಡಿ ಯಶಸ್ಸು ಕಂಡವರು ಜಿ.ಡಿ. ಭಟ್ಟರು. ಹೊನ್ನಾವರ, ಕುಮಟಾ ಅಷ್ಟೇ ಅಲ್ಲ, ಚಿತ್ರದುರ್ಗ, ಕಡೂರು, ಗೋವಾ ಮೊದಲಾದೆಡೆ ಇವರು ಮಾಡಿದ ಗಣಪತಿ ಹಾಗೂ ಶಾರದೆಯ ವಿಗ್ರಹಗಳು ಪೂಜಿಸಲ್ಪಡುತ್ತಿವೆ.
ಇವರ ಕಲಾ ನೈಪುಣ್ಯತೆಗೆ ಬೆರಗಾಗಿ ಮೂರ್ತಿಗಳಿಗೆ ಉಡಿಸಿದ ಸೀರೆ, ಪಂಚೆ ಮಣ್ಣಿನದೋ ಅಥವಾ ಒರಿಜಿನಲ್ಲೊ ಎಂದು ಬೆಟ್ ಹಾಕಿದವರೂ ಇದ್ದಾರೆ. ಅಷ್ಟು ನೈಜವಾಗಿ ಅವರ ಕುಸುರಿ ಕಲೆ ಪ್ರಸಿದ್ದಿ ಪಡೆದಿದೆ