ವಿಶ್ವ ಸುಂದರಿ 2023 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಉಡುಪಿಯ ಸಿನಿ ಶೆಟ್ಟಿ
2023ನೇ ಸಾಲಿನ 71ನೇ ಮಿಸ್ ವಲ್ಡ್ ಸ್ಪರ್ಧೆಯನ್ನು ಕಾಶ್ಮೀರದಲ್ಲಿ ಆಯೋಜನೆಯಾಗಿದ್ದು. ಡಿ.8ರಂದು ಕಾಶ್ಮೀರದಲ್ಲಿರುವ ಕಾಶ್ಮೀರ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂತಿಮ ಸುತ್ತಿನ ಸ್ಪರ್ಧೆ ನಡೆಯಲಿದೆ. 27 ವರ್ಷಗಳ ಬಳಿಕ ಭಾರತದಲ್ಲಿ ಈ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ನಡೆಯುತ್ತಿದ್ದು, ಭಾರತದಲ್ಲಿ ಎರಡನೇ ಬಾರಿಗೆ ಸ್ಪರ್ಧೆ ನಡೆಯುತ್ತಿದೆ. 130 ದೇಶಗಳ ರೂಪದರ್ಶಿಯರು ಇದರಲ್ಲಿ ಭಾಗಿಯಾಗಲಿದ್ದಾರೆ. ಕನ್ನಡತಿ ಸಿನಿ ಶೆಟ್ಟಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ. ಸಿನಿ ಶೆಟ್ಟಿ ಬಗೆಗಿನ ಕುತೂಹಲ ಸಂಗತಿ ಇಲ್ಲಿದೆ.
ಸಿನಿ ಶೆಟ್ಟಿ 2 ಆಗಸ್ಟ್ 2001 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ಆದರೂ ಈಕೆ ಕನ್ನಡತಿ, ಕರಾವಳಿ ಬೆಡಗಿ, ಉಡುಪಿಯ ಜಿಲ್ಲೆಯ ಇನ್ನಂಜೆಯವರು.
ಸಿನಿ ಮುಂಬೈನ ಘಾಟ್‌ಕೋಪರ್‌ನಲ್ಲಿರುವ ಸೇಂಟ್ ಡೊಮಿನಿಕ್ ಸವಿಯೋ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ ಮುಂಬೈನ ಎಸ್‌ಕೆ ಸೋಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್‌ನಲ್ಲಿ ಅವರು ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಪದವಿ ಪಡೆದರು. ಈಕೆ ಭರತನಾಟ್ಯ ನೃತ್ಯಗಾರ್ತಿಯೂ ಹೌದು.
ಸಿನಿ ಸದಾನಂದ ಶೆಟ್ಟಿ ಭಾರತೀಯ ಸೌಂದರ್ಯ ಸ್ಪರ್ಧೆಯ ಟೈಟಲ್ ಹೋಲ್ಡರ್, ಇವರು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟ ಗೆದ್ದಿದ್ದಾರೆ. 2022ರಲ್ಲಿ ಫೆಮಿನಾ ಮಿಸ್ ಕರ್ನಾಟಕ ಕೂಡ ಗೆದ್ದಿದ್ದಾರೆ.
ಹೋಟೆಲ್ ಉದ್ಯಮಿ ಸದಾನಂದ್ ಶೆಟ್ಟಿ ಮತ್ತು ಹೇಮಾ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಸಿನಿ ಶೆಟ್ಟಿ ನಟಿ, ಮಾಡೆಲ್ ಮತ್ತು ಕಂಟೆಂಟ್ ಕ್ರಿಯೇಟರ್ ಕೂಡ ಹೌದು.
ಈ ಹಿಂದೆ ಫೆಮಿನಾ ಮಿಸ್ ಇಂಡಿಯಾ ಗೆದ್ದಾಗ ತನ್ನ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ದರ್ಶ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಈ ವೇಳೆ ನಾನು ಮಿಸ್ ಇಂಡಿಯಾ ಪಟ್ಟವನ್ನು ಗೆಲ್ಲಲು ಇದೇ ಮಾರಿಯಮ್ಮ ದೇವಿಯ ಅನುಗ್ರಹವೇ ಕಾರಣ ಎಂದಿದ್ದರು.
71ನೇ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಲು ತಯಾರಿ ನಡೆಸುತ್ತಿರುವ ಸಿನಿ ಶೆಟ್ಟಿ ಸದ್ಯ ಕಾಶ್ಮೀರದಲ್ಲಿ ಪ್ರವಾಸದಲ್ಲಿದ್ದಾರೆ.
ಇನ್ನು ಮಿಸ್ ವರ್ಲ್ಡ್ 2000 ಕಿರೀಟವನ್ನು ಅಲಂಕರಿಸಿದ ಪ್ರಿಯಾಂಕಾ ಚೋಪ್ರಾ ಅವರು ತಮಗೆ ಸ್ಫೂರ್ತಿ ಎಂದು ಈ ಹಿಂದೆ ಹೇಳಿಕೊಂಡಿದ್ದರು.
ಕೆಲವು ವರ್ಷಗಳ ಹಿಂದೆಯಷ್ಟೇ ರೂಪದರ್ಶಿಯಾಗಿ ವೃತ್ತಿ ಬದುಕು ಆರಂಭಿಸಿರುವ ಸಿನಿಶೆಟ್ಟಿ ಈಗಾಗಲೇ ಪ್ರತಿಷ್ಠಿತ ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಮಿಂಚಿದ್ದಾರೆ. ಇದು ಕೂಡ ಅವ ಸೌಂದರ್ಯ ಸ್ಫರ್ಧೆಗೆ ಬೆನ್ನೆಲುಬಾಗಿದೆ.
ಸಿನಿ ಶೆಟ್ಟಿಗೆ ನೃತ್ಯ ಅಂದರೆ ತುಂಬಾ ಇಷ್ಟ. 4ನೇ ವಯಸ್ಸಿನಲ್ಲಿಯೇ ನೃತ್ಯ ಕಲಿಯಲು ಆರಂಭಿಸಿದ ಅವರು ಪ್ರತಿಭಾನ್ವಿತ ಭರತನಾಟ್ಯ ನೃತ್ಯಗಾರ್ತಿ, ಗುರು ಪದ್ಮಿನಿ ರಾಧಾಕೃಷ್ಣನ್ ಬಳಿ ಭರತನಾಟ್ಯ ಶಿಕ್ಷಣ ಪಡೆದಿದ್ದಾರೆ. 14ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದ ಸಿನಿ ಶೆಟ್ಟಿಗೆ ಈಗಲೂ ನೃತ್ಯ ಪ್ಯಾಷನ್ ಆಗಿದೆ.
ಹಿಪ್ ಹಾಪ್ ನೃತ್ಯವನ್ನೂ ಕಲಿತಿರುವ ಅವರಿಗೆ ಪ್ರವಾಸವೂ ಪ್ರಿಯವಾದ ಹವ್ಯಾಸ. ಬರೋಬ್ಬರಿ 5 ಅಡಿ 9 ಇಂಚು ಎತ್ತರವಿದ್ದಾರೆ. 22 ವರ್ಷದ ಸಿನಿ ಶೆಟ್ಟಿ ಖಾಸಗಿ ಕಂಪೆನಿಯೊಂದರಲ್ಲಿ ಪ್ರಾಡಕ್ಟ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ.
ಇನ್ನಂಜೆಯಲ್ಲಿಈಗ ಅವರ ಅಜ್ಜ (ತಂದೆಯ ಮಾವ) ರಾಮಣ್ಣ ಶೆಟ್ಟಿ ಕುಟುಂಬ ಹಾಗೂ ಬೆಳ್ಳಂಪಳ್ಳಿಯಲ್ಲಿ ತಾಯಿಯ ಸಹೋದರ ಹರೀಶ್ ಹೆಗ್ಡೆ ಕುಟುಂಬ ವಾಸವಿದೆ.
ಸಿನಿ ಶೆಟ್ಟಿ ಕುಟುಂಬ 1994ರಿಂದ ಮುಂಬೈನಲ್ಲಿ ನೆಲೆಸಿದ್ದು, ಅವರ ತಂದೆ ಸದಾನಂದ್ ಶೆಟ್ಟಿ 1989ರಿಂದ ಮುಂಬೈನಲ್ಲಿದ್ದರು. ತಂದೆ ಹೋಟೆಲ್ ಉದ್ಯಮಿ ಮತ್ತು ತಾಯಿ ಆರ್ಕಿಟೆಕ್ಟ್ ಆಗಿದ್ದಾರೆ.
1951ರಲ್ಲಿ ಆರಂಭವಾದ ಮಿಸ್ ವಲ್ಡ್ ಸ್ಪರ್ಧೆ ಜಗತ್ತಿನ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಎನಿಸಿಕೊಂಡಿದೆ. ರೂಪದರ್ಶಿಯರ ಪ್ರತಿಭೆ, ಜ್ಞಾನ ಮತ್ತು ಸೌಂದರ್ಯವನ್ನು ಮಾನದಂಡವಾಗಿಟ್ಟುಕೊಂಡು ವಿಜೇತರನ್ನು ಘೋಷಿಸಲಾಗುತ್ತದೆ. ಇದರಲ್ಲಿ ಜಯಗಳಿಸಿದವರನ್ನು 1 ವರ್ಷದ ಅವಧಿಗೆ ಸಂಸ್ಥೆಯ ಅಂತಾರಾಷ್ಟ್ರೀಯ ರಾಯಭಾರಿಯಾಗಿ ನೇಮಕ ಮಾಡಲಾಗುತ್ತದೆ.
1966ರಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳೆ ರಿಟಾ ಫರೀಯಾ ಮಿಸ್ ವಲ್ಡ್ ಕಿರೀಟ ಧರಿಸಿದರು. ಇದಾದ ಬಳಿಕ 1994ರಲ್ಲಿ ಐಶ್ವರ್ಯಾ ರೈ, 1997ರಲ್ಲಿ ಡಯಾನಾ ಹೇಡೆನ್, 1999ರಲ್ಲಿ ಯುಕ್ತಾ ಮೂಖಿ, 2000ದಲ್ಲಿ ಪ್ರಿಯಾಂಕಾ ಚೋಪ್ರಾ, 2017ರಲ್ಲಿ ಮಾನುಷಿ ಚಿಲ್ಲರ್ ಈ ಪಟ್ಟವನ್ನು ಗೆದ್ದುಕೊಂಡಿದ್ದರು.
PME ಎಂಟರ್ಟೈನ್ಮೆಂಟ್, ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆ ಸಹಭಾಗಿತ್ವದಲ್ಲಿ ಈ ಬಾರಿಯ ವಿಶ್ವಸುಂದರಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿ20 ವರ್ಕಿಂಗ್ ಗ್ರೂಪ್ ಟೊರಿಸಂ ಕಾರ್ಯಕ್ರಮ ನಡೆದ ತಿಂಗಳುಗಳ ಅಂತರದಲ್ಲಿ ಇದೀಗ ವಿಶ್ವ ಸುಂದರಿಗಳ ಕಾರ್ಯಕ್ರಮ ಕಾಶ್ಮೀರದಲ್ಲಿ ನಡೆಯುತ್ತಿದೆ. ಇದೀಗ ಬದಲಾದ ಕಾಶ್ಮೀರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ.