ತೊನ್ನು ಸಮಸ್ಯೆ ನಡುವೆಯೂ ಮಿಸ್ ಯೂನಿವರ್ಸ್ ಫಿನಾಲೆಯಲ್ಲಿ ಇತಿಹಾಸ ಬರೆದ ಲೊಗಿನಾ!
ಇದೇ ಮೊದಲ ಬಾರಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗುವ ಮೂಲಕ ಚರ್ಮ ಸಮಸ್ಯೆಯ ಸ್ಪರ್ಧಿಯೊಬ್ಬರು ಕಾಣಿಸಿಕೊಂಡು ಇತಿಹಾಸ ಬರೆದಿದ್ದಾರೆ. ಕೋಟ್ಯಾಂತರ ಮಂದಿಗೆ ಸ್ಪೂರ್ತಿಯಾದ ಈ ಚೆಲುವೆ ಯಾರು?
ಮಿಸ್ ಯೂನಿವರ್ಸ್, ಮಿಸ್ ವರ್ಲ್ಡ್ ಸೇರಿದಂತೆ ಸೌಂದರ್ಯ ಸ್ಪರ್ಧೆಗಳಲ್ಲಿ ಸೌಂದರ್ಯಕ್ಕೆ ಪ್ರಮುಖ ಪ್ರಾಧಾನ್ಯತೆ. ಮುಖ, ದೇಹ ಸೌಂದರ್ಯ ಸೇರಿದಂತೆ ಎಲ್ಲವನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ಆದರೆ ಇದೇ ಮೊದಲ ಬಾರಿಗೆ ತೊನ್ನು ಸಮಸ್ಯೆಯಿರುವ ಈಜಿಪ್ಟ್ ಮಾಡೆಲ್ ಲೊಗಿನಾ ಸಲಹಾ ಮಿಸ್ ಯೂನಿವರ್ಸ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆಗೆ ಎಂಟ್ರಿಕೊಟ್ಟು ಇತಿಹಾಸ ರಚಿಸಿದ್ದಾರೆ.
ತೊನ್ನು ಸಮಸ್ಯೆ ಸೌಂದರ್ಯವನ್ನೇ ಹಾಳುಮಾಡುತ್ತದೆ. ಹಲವರು ತೊನ್ನು ಸಮಸ್ಯೆ ಇದ್ದವರನ್ನು ಕಂಡರೆ ಮಾರುದ್ದ ದೂರ ಹೋಗುತ್ತಾರೆ. ಇಂತವರ ನಡುವೆ ಲೊಗಿನಾ ಸಲಹಾ ಕೋಟ್ಯಾಂತರ ಮಂದಿಗೆ ಸ್ಪೂರ್ತಿಯಾಗಿದ್ದಾರೆ. ನ್ಯೂನತೆಯಿಂದ ತಾವೇ ಖುದ್ದು ವೇದಿಕೆಗಳಿಂದ ದೂರ ಸರಿಯುವ, ಆತ್ಮಿವಿಶ್ವಾದ ಕೊರತೆ ಎದುರಿಸುವ ಹಲವರಿಗೆ ಲೊಗಿನಾ ಸಲಹಾ ಇದೀಗ ಮಾದರಿಯಾಗಿದ್ದಾರೆ.
ಈಜಿಪ್ಟ್‌ನ 34 ವರ್ಷದ ಮಾಡೆಲ್, ಮೇಕ್ ಅಪ್ ಆರ್ಟಿಸ್ಟ್, ಟಿವಿ ನಿರೂಪಕಿಯಾಗಿರುವ ಲೊಗಿನಾ ತನನಗೆ ತೊನ್ನು ಚರ್ಮ ಸಮಸ್ಯೆ ಇದ್ದರೂ ಜಗ್ಗದೆ ಕುಗ್ಗದೇ ಆತ್ಮವಿಶ್ವಾಸದಿಂದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಗ್ರ್ಯಾಂಡ್ ಫಿನಾಲೆಯ ಟಾಪ್ 30ರ ಘಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಂಚಲನ ಮೂಡಿಸಿದ್ದಾರೆ.
ಮೆಕ್ಸಿಕೋ ಸಿಟಿಯಲ್ಲಿ ನಡೆದ ಮಿಸ್ ಯೂನಿವರ್ಸ್ 2024ರ ಗ್ರ್ಯಾಂಡ್ ಫಿನಾಲೆ ಟಾಪ್ 30ಯಲ್ಲಿ ಕಾಣಿಸಿಕೊಳ್ಳುವ ಮೂಲಕ ಲೊಗಿನಾ ಈಜಿಪ್ಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 73 ವರ್ಷಗಳ ಇತಿಹಾಸವಿರುವ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಗ್ರ್ಯಾಂಡ್ ಫಿನಾಲೆಯಲ್ಲಿ ಕಾಣಿಸಿಕೊಂಡ ಈಜಿಪ್ಟ್ ಸ್ಪರ್ಧಿ ಅನ್ನೋ ಹೆಗ್ಗಳಿಕೆಗೆ ಲೊಗಿನಾ ಪಾತ್ರರಾಗಿದ್ದಾರೆ.
ಸಮಸ್ಯೆ, ಅಡೆತಡೆ, ಪರಿಮಿತಿಗಳನ್ನು ಮೀರಿದ ಲೊಗಿನಾ ಪ್ರತಿಭಟನೆ, ಸಾಮರ್ಥ್ಯದ ಮೂಲಕ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಲೊಗಿನಾ ದಾರಿ ಹಲವರಿಗೆ ಸ್ಪೂರ್ತಿಯಾಗಿದೆ. ಹಲವು ಸವಾಲುಗಳನ್ನು ಗೆದ್ದು ಬಂದಿರುವ ಲೊಗಿನಾ ತಾಯಿ ಅನ್ನೋದು ವಿಶೇಷ. ಈಜಿಪ್ಟ್‌ನಿಂದ ತನ್ನ ಕನಸಿನ ದಾರಿ ಹಿಡಿದು ದುಬೈಗೆ ಸ್ಥಳಾಂತರಗೊಂಡಿರುವ ಲೊಗಿನಾ ಇದೀಗ ಮಿಸ್ ಯೂನಿವರ್ಸ್ ಮೂಲಕ ವಿಶ್ವ ವಿಖ್ಯಾತಿ ಪಡೆದಿದ್ದಾರೆ.
ಲೊಗಿನಾ ಹುಟ್ಟಿದ್ದು ಈಜಿಪ್ಟ್‌ನಲ್ಲಿ. 1990ರಲ್ಲಿ ಹುಟ್ಟಿದ ಲೊಗಿನಾ ತನ್ನ ಬಾಲ್ಯ, ಶಿಕ್ಷಣ ಎಲ್ಲವನ್ನೂ ಈಜಿಪ್ಟ್ ನಗರ ಅಲೆಕ್ಸಾಂಡ್ರಿಯಾದಲ್ಲಿ ಕಳೆದಿದ್ದಾರೆ. ಆದರೆ ತೊನ್ನು ಸಮಸ್ಯೆಯಿಂದ ತೀವ್ರ ನೋವು, ಅಪಮಾನ ಅನುಭವಿಸಿದ ಲೊಗಿನಾ ಮದುವೆ ಬಳಿಕವೂ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು.
ಮೂರು ವರ್ಷದ ಹಿಂದೆ ತನ್ನ 10 ವರ್ಷದ ಮಗಳ ಜೊತೆ ಈಜಿಪ್ಟ್‌ನಿಂದ ದುಬೈಗೆ ಬಂದಿಳಿದ ಲೊಗಿನಾ, ಮೇಕ್ ಅಪ್ ಆರ್ಟಿಸ್ಟ್ ಆಗಿ, ಟಿವಿ ನಿರೂಪಕಿಯಾಗಿ, ಮಾಡೆಲ್ ಆಗಿ ಗಮನಸೆಳೆದಿದ್ದಾಳೆ. ಲೊಗಿನಾ ಇದೀಗ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿ ಹೊರಹೊಮ್ಮಿದ್ದಾರೆ.