ಶೃಂಗೇರಿ ರಸ್ತೆ ಬದಿಯಲ್ಲಿ ಪುರಾತನ ವಸ್ತುಗಳ ಮಾರಾಟ!
ಚಿಕ್ಕಮಗಳೂರಿನಲ್ಲಿ ಕಡೂರು-ಮಂಗಳೂರು ಹೆದ್ದಾರಿಯಲ್ಲಿ ಪುರಾತನ ವಸ್ತುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಶತಮಾನಗಳಷ್ಟು ಹಳೆಯ ಗ್ರಾಮೋಫೋನ್, ಟೆಲಿಫೋನ್ ಸೇರಿದಂತೆ ಅಪರೂಪದ ವಸ್ತುಗಳು ಇಲ್ಲಿ ಲಭ್ಯವಿದ್ದು, ಜನರನ್ನು ಆಕರ್ಷಿಸುತ್ತಿವೆ.

ಚಿಕ್ಕಮಗಳೂರು : ಓಲ್ಡ್ ಈಸ್ ಗೋಲ್ಡ್ ಎಂಬ ಮಾತಿನಂತೆ ಹಳತು ಎಂದು ಮೂಲೆಗಿಟ್ಟ ವಸ್ತುಗಳಿಗೆ ಇತ್ತೀಚಿನ ವರ್ಷಗಳಲ್ಲಿ ಭಾರಿ ಬೇಡಿಕೆ ಬಂದಿದೆ. ಅದರಲ್ಲೂ ಶತಮಾನಗಳಷ್ಟು ಹಳೆಯ ವಸ್ತುಗಳಿಗೆ ಕಿಮ್ಮತ್ತು ತುಸು ಜಾಸ್ತಿ. ಕಾಫಿನಾಡು ಚಿಕ್ಕಮಗಳೂರಿನ ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಶೃಂಗೇರಿ ರಸ್ತೆಯ ಆಲದಗುಡ್ಡೆ ಗ್ರಾಮದ ಬಳಿ ಪುರಾತನ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ.
ಶತಮಾನಗಳಷ್ಟು ಹಳೆಯ ಪುರಾತನ ವಸ್ತುಗಳು: ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಹೊರನಾಡು, ಶೃಂಗೇರಿ ಗೆ ತೆರಳುವ ಮಾರ್ಗ ಮಧ್ಯೆಯಲ್ಲಿ ಶತಮಾನಗಳಷ್ಟು ಹಳೆಯ ಪುರಾತನ ವಸ್ತುಗಳನ್ನು ರಸ್ತೆ ಬದಿಯಲ್ಲಿ ಇಟ್ಟು ವ್ಯಾಪಾರ ಮಾಡಲಾಗುತ್ತಿದೆ. ಗ್ರಾಮೋ ಫೋನ್, ಟೆಲಿಫೋನ್, ರೈಲ್ವೆ ರೆಗ್ಯುಲೇಟರ್, ವೀಲ್ ಕ್ಲಾಕ್, ಬೈನಾಕ್ಯುಲರ್ ಸೇರಿದಂತೆ ಪ್ರಾಚೀನ ವಸ್ತುಗಳು ಹಾಗೂ ನಾಣ್ಯಗಳನ್ನು ಮಾರಾಟಕ್ಕೆ ಇಡಲಾಗಿದೆ.
ಅತ್ಯಂತ ಅಪರೂಪದ ಪ್ರಾಚೀನ ವಸ್ತುಗಳನ್ನು ರೀ ಕಂಡೀಷನ್ ವರ್ಕ್ (ಪುನಃ ಅದು ಕಾರ್ಯನಿರ್ವಹಿಸುವಂತೆ ದುರಸ್ತಿ) ಮಾಡಿ ಮುಕ್ತಾರ್ ಎಂಬುವವರು ಕೇರಳದಿಂದ ತಂದು ಮಾರಾಟ ಮಾಡುತ್ತಿದ್ದಾರೆ. ಇಲ್ಲಿ ಮಾರಾಟಕ್ಕೆ ಇಟ್ಟಿರುವ ಪುರಾತನ ವಸ್ತುಗಳನ್ನು ನೋಡಿದರೆ ತಾತ, ಮುತ್ತಾತ ಹಾಗೂ ರಾಜಮಹಾರಾಜರ ಕಾಲದ ಟೆಕ್ನಾಲಜಿ ಆಶ್ಚರ್ಯ ಮೂಡಿಸುತ್ತದೆ.
ಪುರಾತನ ವಸ್ತುಗಳಿಗೆ ಭಾರೀ ಬೇಡಿಕೆ : ಮುಕ್ತಾರ್ ಅವರು ಮಾರಾಟ ಮಾಡುತ್ತಿರುವ 90 ರಿಂದ 100 ವರ್ಷ ಹಳೆಯ ಗ್ರಾಮೋ ಫೋನ್, ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ಟೆಲಿಫೋನ್ ಇನ್ನು ಕೂಡ ವರ್ಕಿಂಗ್ ಕಂಡೀಷನ್‌ನಲ್ಲಿ ಇವೆ. ಈ ವಸ್ತುಗಳನ್ನು ವ್ಯಾಪಾರ ಮಾಡಲು ದೇಶದ ವಿವಿಧ ರಾಜ್ಯಗಳಿಗೆ ಹೋಗಿ ಬಂದಿದ್ದಾರೆ.
ರಾಜ್ಯದಲ್ಲಿ ಕಾಫಿನಾಡು ಚಿಕ್ಕಮಗಳೂರು, ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಹಾಗೂ ಕೃಷ್ಣ ನಗರಿ ಉಡುಪಿ ಜಿಲ್ಲೆಯ ಜನರಿಗೆ ಇಂತಹ ಪ್ರಾಚೀನ ವಸ್ತುಗಳ ಮೇಲೆ ತುಂಬಾ ಆಸಕ್ತಿ ಇದೆಯಂತೆ. ಹೀಗಾಗಿ ತಮಗೆಷ್ಟವಾದ ವಸ್ತುಗಳನ್ನು ಕಾಫಿನಾಡಿಗರು ಖರೀದಿಸುತ್ತಿದ್ದಾರೆ ಎಂದ ಮುಕ್ತಾರ್ ಹೇಳಿದ್ದಾರೆ. ಒಟ್ಟಿನಲ್ಲಿ ಪ್ರಾಚೀನ ಕಾಲದ ವಸ್ತುಗಳನ್ನು ಮ್ಯೂಸಿಯಂಗಳಲ್ಲೇ ನೋಡಬೇಕಾದ ದಿನಮಾನಗಳಲ್ಲಿ ಖರೀದಿಗೆ ಅವಕಾಶ ಸಿಕ್ಕಿರುವುದಕ್ಕೆ ಕಾಫಿನಾಡಿಗರು ತಮಗಿಷ್ಟವಾದ ಪುರಾತನ ವಸ್ತುಗಳನ್ನು ಖರೀದಿಸುತ್ತಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್