ಪ್ರವಾಸಿಗರ ಸ್ವರ್ಗ ಕಾಶ್ಮೀರಕ್ಕೆ ಮನಸೋತ ಪೋಲೆಂಡ್ ವಿಶ್ವಸುಂದರಿ: Bengaluru ಬಗ್ಗೆ ಕರೋಲಿನಾ ಹೇಳಿದ್ದೀಗೆ..
ಪೋಲೆಂಡ್‌ನ ಮಿಸ್ ವರ್ಲ್ಡ್ ಕರೋಲಿನಾ ಬಿಲಾವ್ಸ್ಕಾ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಕಣಿವೆ ನಾಡಿನ ಸಮ್ಮೋಹನಗೊಳಿಸುವ ದೃಶ್ಯ ವೈಭವಕ್ಕೆ ಮನಸೋತಿದ್ದಾರೆ. ಬೆಂಗಳೂರಿಗೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ಬದಲಾಗಿದೆ. ಎರಡು ತಿಂಗಳ ಹಿಂದೆ ಶ್ರೀನಗರದಲ್ಲಿ ನಡೆದ ಪ್ರವಾಸೋದ್ಯಮ ಕುರಿತ ಜಿ-20 ಸಭೆಯ ನಂತರ ಡಿಸೆಂಬರ್ 9 ರಂದು ವಿಶ್ವ ಸುಂದರಿ ಸ್ಪರ್ಧೆ ಆಯೋಜಿಸಲಾಗ್ತಿದೆ. ಇದಕ್ಕೂ ಮುನ್ನ ಪೋಲೆಂಡ್‌ನ ಮಿಸ್ ವರ್ಲ್ಡ್ ಕರೋಲಿನಾ ಬಿಲಾವ್ಸ್ಕಾ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಕಣಿವೆ ನಾಡಿನ ಸಮ್ಮೋಹನಗೊಳಿಸುವ ದೃಶ್ಯ ವೈಭವಕ್ಕೆ ಮನಸೋತಿದ್ದಾರೆ.
ಕರೋಲಿನಾ ಬಿಲಾವ್ಸ್ಕಾ ಸೋಮವಾರ ಶ್ರೀನಗರಕ್ಕೆ ಆಗಮಿಸಿದ್ದು, 71ನೇ ವಿಶ್ವ ಸುಂದರಿ 2023 ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಿಶ್ವ ಸುಂದರಿ, "ಭಾರತದ ಈ ಸುಂದರವಾದ ಸ್ಥಳವನ್ನು (ಕಾಶ್ಮೀರ) ನೋಡುವ ಅವಕಾಶಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ನಾನು ಅದನ್ನು ನಿರೀಕ್ಷಿಸಿರಲಿಲ್ಲ, ಆದರೆ ಅದು ಅದರ ಸೌಂದರ್ಯದಿಂದ ನನ್ನನ್ನು ಬೆರಗುಗೊಳಿಸುತ್ತದೆ’’ ಎಂದು ಹೇಳಿದರು.
ಕರೋಲಿನಾ ಅವರು ಮಿಸ್ ವರ್ಲ್ಡ್ ಇಂಡಿಯಾ ಸಿನಿ ಶೆಟ್ಟಿ ಮತ್ತು ಕೆರಿಬಿಯನ್ ವಿಶ್ವ ಸುಂದರಿ ಎಮ್ಮಿ ಪೆನಾ ಅವರೊಂದಿಗೆ ಕಾಶ್ಮೀರಿ ಕರಕುಶಲ ಮತ್ತು ಕಲೆಗೆ ಭೇಟಿ ನೀಡಿದರು ಹಾಗೂ ಅನ್ವೇಷಿಸಿದರು. ಕಾಶ್ಮೀರಿ ಕರಕುಶಲ ವಸ್ತುಗಳು, ತಮ್ಮ ಸೊಗಸಾದ ಕರಕುಶಲತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಬಹಳ ಹಿಂದಿನಿಂದಲೂ ಹೆಸರುವಾಸಿಯಗಿದೆ. ಕರೋಲಿನಾ, ಸಿನಿ ಶೆಟ್ಟಿ ಮತ್ತು ಕೆರಿಬಿಯನ್ ಎಮ್ಮಿ ಅವರು ಕರಕುಶಲ ವಸ್ತುಗಳನ್ನು ವೀಕ್ಷಿಸಲು ಶೇರ್-ಐ-ಕಾಶ್ಮೀರ್ ಅಂತಾರಾಷ್ಟ್ರೀಯ ಸಮ್ಮೇಳನ ಕೇಂದ್ರಕ್ಕೆ ಭೇಟಿ ನೀಡಿದರು.
ಅವರೆಲ್ಲರೂ ತಮ್ಮ ಕಿರೀಟಗಳೊಂದಿಗೆ ಕಾಶ್ಮೀರದ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ್ದರು. ಹಾಗೂ, ಝೀಲಂ ನದಿಯ ನೋಟವನ್ನೂ ಕಣ್ತುಂಬಿಕೊಂಡರು. ಅಲ್ಲದೆ, ಇಲ್ಲಿನ ಊಟವನ್ನು ಆನಂದಿಸಿದ ಕರೋಲಿನಾ ಇತರ ಗಣ್ಯರೊಂದಿಗೆ ಶಿಕಾರಾ ರೈಡ್‌ಗಾಗಿ ದಾಲ್ ಸರೋವರಕ್ಕೆ ಭೇಟಿ ನೀಡಿದರು.
ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ವಿಶ್ವ ಸುಂದರಿ 2021 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ಪೋಲಿಷ್ ಮಾಡೆಲ್, ಟಿವಿ ನಿರೂಪಕಿ, ಸಾಮಾಜಿಕ ಕಾರ್ಯಕರ್ತೆ, ಯುಎನ್ ಶಾಂತಿ ಸೌಹಾರ್ದ ರಾಯಭಾರಿ, ಲೋಕೋಪಕಾರಿ ಮತ್ತು ಪ್ರಚಾರಕಿಯೂ ಆಗಿದ್ದಾರೆ
ಇದರ ಜತೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರೋಲಿನಾ ಬಿಲಾವ್ಸ್ಕಾ, "ನಾನು ಗೋವಾಗೆ ಭೇಟಿ ನೀಡಲು ಇಷ್ಟಪಡುತ್ತೇನೆ ಹಾಗೂ ಅಲ್ಲಿನ ಬೀಚ್ ಜೀವನವನ್ನು ಅನ್ವೇಷಿಸಲು ಬಯಸುತ್ತೇನೆ. ಮಣಿಪುರಕ್ಕೆ ಹೋಗಿ, ಪ್ರಕೃತಿಯನ್ನು ನೋಡಲು ನಾನು ಇಷ್ಟಪಡುತ್ತೇನೆ. ನನಗೆ ವ್ಯಾಪಾರದಲ್ಲಿ ಆಸಕ್ತಿ ಇದೆ, ಈ ಹಿನ್ನಲೆ ನಾನು ಬೆಂಗಳೂರಿಗೆ ಹೋಗಿ ಬುದ್ಧಿಜೀವಿಗಳನ್ನು ಭೇಟಿ ಮಾಡಲು ಬಯಸುತ್ತೇನೆ. ಮತ್ತು ನಿಮ್ಮ ವ್ಯವಹಾರಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಭಾರತದಲ್ಲಿ ಹಲವಾರು ಸ್ಥಳಗಳಿವೆ ಮತ್ತು ಅನ್ವೇಷಿಸಲು ಒಂದು ತಿಂಗಳು ಸಾಕಾಗುವುದಿಲ್ಲ. ನಾನು ಪ್ರಯಾಣಿಸಲು ಮತ್ತು ಜನರ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ ಅವರು ಪ್ರತಿ ದೇಶದ ಪ್ರಮುಖ ಭಾಗವಾಗಿದ್ದಾರೆ’’ ಎಂದೂ ಹೇಳಿದ್ದಾರೆ.
ಭಾರತವು ವಿಶ್ವ ಸುಂದರಿಯ 71 ನೇ ಆವೃತ್ತಿಯನ್ನು ಆಯೋಜಿಸುತ್ತದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಪರ್ಧೆಯು 27 ವರ್ಷಗಳ ನಂತರ, ಅಂದರೆ 1996 ರ ಬಳಿಕ ಭಾರತದಲ್ಲಿ ಆತಿಥ್ಯ ವಹಿಸಲಿದೆ. ಭಾರತವು ಈವರೆಗೆ ಆರು ಬಾರಿ ವಿಶ್ವ ಸುಂದರಿ ಸ್ಪರ್ಧೆಯನ್ನು ಗೆದ್ದಿದೆ.
1966 ರಲ್ಲಿ ರೀಟಾ ಫರಿಯಾ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರೆ, 1994 ರಲ್ಲಿ ಐಶ್ವರ್ಯ ರೈ ಬಚ್ಚನ್ ಕಿರೀಟವನ್ನು ಪಡೆದರು. ಡಯಾನಾ ಹೇಡನ್ 1997 ರಲ್ಲಿ ವಿಶ್ವ ಸುಂದರಿ ಪ್ರಶಸ್ತಿಯನ್ನು ಗೆದ್ದರು. ಇನ್ನು, ಯುಕ್ತ ಮುಖಿ 1999 ರಲ್ಲಿ ವಿಶ್ವ ಸುಂದರಿ ಪಟ್ಟವನ್ನು ಪಡೆದರೆ, 2000 ವರ್ಷವು ಮತ್ತೊಮ್ಮೆ ಮಿಸ್ ಇಂಡಿಯಾ ವರ್ಲ್ಡ್ ಗೆದ್ದಿದ್ದು, ಪ್ರಿಯಾಂಕಾ ಚೋಪ್ರಾ ಕಿರೀಟ ಗೆದ್ದಿದ್ದಾರೆ. ಬಳಿಕ ಮಾನುಷಿ ಛಿಲ್ಲರ್ ಆರನೇ ಮಿಸ್ ಇಂಡಿಯಾ ವರ್ಲ್ಡ್ ಆದರು.