- Home
- Life
- Fashion
- ಕಾನ್ಸ್ ನಲ್ಲಿ ಇನ್ಯಾರದ್ದೋ ಡಿಸೈನರ್ ಡ್ರೆಸ್ ಧರಿಸಿ… ನಾನೇ ಮಾಡಿದ್ದೆಂದು ಸುಳ್ಳು ಹೇಳಿದ್ರ ಜನಪ್ರಿಯ ಇನ್‌ಫ್ಲುಯೆನ್ಸರ್
ಕಾನ್ಸ್ ನಲ್ಲಿ ಇನ್ಯಾರದ್ದೋ ಡಿಸೈನರ್ ಡ್ರೆಸ್ ಧರಿಸಿ… ನಾನೇ ಮಾಡಿದ್ದೆಂದು ಸುಳ್ಳು ಹೇಳಿದ್ರ ಜನಪ್ರಿಯ ಇನ್‌ಫ್ಲುಯೆನ್ಸರ್
ಕಳೆದ ವರ್ಷ ಕಾನ್ಸ್ ಫಿಲಂ ಫೆಸ್ಟಿವಲ್ ನಲ್ಲಿ ನ್ಯಾನ್ಸಿ ತ್ಯಾಗಿ ದೊಡ್ಡ ಸಂಚಲವನ್ನೇ ಸೃಷ್ಟಿಸಿದ್ದರು. ಆದರೆ ಈ ಬಾರಿ ಅವರ ಉಡುಗೆ ವಿವಾದಕ್ಕೆ ಗುರಿಯಾಗಿದೆ. ಹಾಗಂತ ಆಕೆಯ ಉಡುಗೆಯೇನೂ ಕೆಟ್ಟದಾಗಿರಲಿಲ್ಲ. ಆದರೆ ಆಕೆ ಅದನ್ನ ತನ್ನದೇ ಕ್ರಿಯೇಷನ್ ಎಂದು ಸುಳ್ಳು ಹೇಳಿ ಸಿಕ್ಕಿ ಹಾಕಿಕೊಂಡಿದ್ದಾಳೆ.

ನ್ಯಾನ್ಸಿ ತ್ಯಾಗಿಯ (Nancy Tyagi) ಪರಿಚಯದ ಅಗತ್ಯ ನಿಮಗಿಲ್ಲ ಅಲ್ವಾ? ಭಾರತದ ಇನ್‌ಫ್ಲುಯೆನ್ಸರ್ (influencer) ನ್ಯಾನ್ಸಿ ತ್ಯಾಗಿ ಮುಂಬೈನಲ್ಲಿ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿದ್ದವಳು. ವಿದ್ಯಾಭ್ಯಾಸವೂ ಹೆಚ್ಚಿಲ್ಲ. ಆದರೆ ಆಕೆಯ ಸ್ಕ್ರಾಚ್ ನಿಂದ ತಯಾರಿಸುತ್ತಿದ್ದಂತಹ ವಿವಿಧ ವಿನ್ಯಾಸದ ಬಟ್ಟೆಗಳು, ಯಾವುದೇ ಡಿಸೈನರ್ ಬಟ್ಟೆಗೆ ಕಡಿಮೆ ಇಲ್ಲ ಎನ್ನುವಂತೆ ಕಾಣಿಸುತ್ತಿದ್ದವು. ಇದರಿಂದಲೇ ಆಕೆಗೆ ಜನಪ್ರಿಯತೆ ಸಿಕ್ಕಿತು.
ಅಷ್ಟೇ ಅಲ್ಲ 2024ರ ಕಾನ್ಸ್ ಫಿಲಂ ಫೆಸ್ಟಿವಲ್ (Cannes Film Festival) ನಲ್ಲಿ ಭಾಗವಹಿಸುವ ಅವಕಾಶವೂ ಸಿಕ್ಕಿತು. ಅದರಿಂದ ಆಕೆ ಸಿಕ್ಕಾಪಟ್ಟೆ ಫೇಮಸ್ ಕೂಡ ಆದಳು. ಭಾರತೀಯ ಮೀಡಿಯಾಗಳು ಆಕೆಯ ಸಂದರ್ಶನಕ್ಕಾಗಿ ಕಾಯುವಂತಾಯಿತು. ಹಲವರು ಆಕೆಯನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಬಟ್ಟೆ ಹೊಲಿಯೋದಕ್ಕೆ ಶುರು ಮಾಡಿದ್ದೂ ಇದೆ.
ಆದರೆ ಈ ವರ್ಷ ನ್ಯಾನ್ಸಿ ತ್ಯಾಗಿ ಅವರ ಕೇನ್ಸ್ 2025 ರ ಲುಕ್ ವಿವಾದಕ್ಕೆ ಗುರಿಯಾಗಿದೆ. ಕೇನ್ಸ್‌ಗಾಗಿ ತಮ್ಮ ಉಡುಪನ್ನು ತಾನೇ ವಿನ್ಯಾಸಗೊಳಿಸಿದ್ದೇನೆ ಎಂದು ನ್ಯಾನ್ಸಿ ಹೇಳಿಕೊಂಡಿರುವುದು ಸುಳ್ಳು ಎಂದು ಬಿಗ್ ಬಾಸ್ ಒಟಿಟಿ ಸ್ಪರ್ಧಿ ನೇಹಾ ಭಾಸಿನ್ (Neha Bhasin) ಅವರು ಹೇಳಿದ್ದಾರೆ. ಇದಲ್ಲದೆ, ನೇಹಾ ಭಾಸಿನ್ ಅವರು ಅದೇ ಉಡುಪನ್ನು ಧರಿಸಿರುವ ತಮ್ಮ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಆದರೆ ನ್ಯಾನ್ಸಿ ಕೇನ್ಸ್ ಚಲನಚಿತ್ರೋತ್ಸವಕ್ಕೂ ಮೊದಲು ಆ ಉಡುಪನ್ನು 25 ಸಾವಿರ ರೂ.ಗೆ ಖರೀದಿಸಿದ್ದರು ಎಂದು ಮುಂಬೈನ ಅಂಗಡಿಯ ಮಾಲೀಕರು ಸಹ ತಿಳಿಸಿದ್ದಾರೆ.
ನೇಹಾ ಭಾಸಿನ್ ಭಾನುವಾರ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ (Instagram Story) ನ್ಯಾನ್ಸಿಯ ಕಾನ್ಸ್ ಔಟ್ ಫಿಟ್ ಹಾಗೂ ತಾವು ಕಾರ್ಯಕ್ರಮವೊಂದರಲ್ಲಿ ಧರಿಸಿದ ಅದೇ ಡ್ರೆಸ್ ನ ಫೋಟೊವನ್ನು ಪೋಸ್ಟ್ ಮಾಡಿದ್ದರು. ನೇಹಾ ನ್ಯಾನ್ಸಿಯ ಫೋಟೋ ಜೊತೆಗೆ ಈ ಕಾರ್ಸೆಟ್ ಸಾಕಷ್ಟು ಪರಿಚಿತವಾಗಿ ಕಾಣುತ್ತದೆ ಎಂದು ಬರೆದಿದ್ದರು. ಈ ಫೋಟೊಗಳಲ್ಲಿ ನೇಹಾ ಮತ್ತು ನ್ಯಾನ್ಸಿ ಇಬ್ಬರ ಕಾರ್ಸೆಟ್‌ಗಳು ಹೋಲಿಕೆಯಾಗಿರೋದನ್ನು ಕಾಣಬಹುದು. ಈ ಡ್ರೆಸ್ ಸ್ಫಟಿಕ ಮತ್ತು ಮುತ್ತಿನ ಸೂಕ್ಷ್ಮ ಡಿಸೈನ್ ಹೊಂದಿವೆ. ನೇಹಾ ಅದೇ ಕಾರ್ಸೆಟ್‌ನಲ್ಲಿ ಇನ್ನೊಬ್ಬ ಮಾಡೆಲ್‌ನ ಫೋಟೋವನ್ನು ಸಹ ಪೋಸ್ಟ್ ಮಾಡಿದ್ದಾರೆ. ಪ್ರತಿಯೊಬ್ಬರೂ ಆ ಕಾರ್ಸೆಟ್ ಅನ್ನು ವಿಭಿನ್ನವಾಗಿ ಸ್ಟೈಲ್ ಮಾಡಿದ್ದಾರೆ. ನ್ಯಾನ್ಸಿ ಕೂಡ ಅದನ್ನು ವಿಭಿನ್ನವಾಗಿ ಧರಿಸಿದ್ದರು.
ಇದೀಗ ಫ್ರೀ ಪ್ರೆಸ್ ಜರ್ನಲ್ ವರದಿಯ ಪ್ರಕಾರ, ದಿ ಸೋರ್ಸ್ ಬಾಂಬೆಯ (The source Bombay) ಸಂಸ್ಥಾಪಕಿ ಸುರಭಿ ಗುಪ್ತಾ, ನ್ಯಾನ್ಸಿ ತನ್ನ ಅಂಗಡಿಯಿಂದ ಈ ಉಡುಪನ್ನು ಖರೀದಿಸಿದ್ದಾಳೆ ಎಂದು ದೃಢಪಡಿಸಿದ್ದಾರೆ. ‘ನ್ಯಾನ್ಸಿ ಈ ಉಡುಪನ್ನು ತಾನೇ ಹೊಲಿಯುವುದಾಗಿ ಹೇಳಿಕೊಂಡಿದ್ದಾರೆ, ಆದರೆ ಅವರು ಅದನ್ನು ನಮ್ಮಿಂದ ಖರೀದಿಸಿದ್ದಾರೆ. ಅವರು ನಮ್ಮ ಮುಂಬೈ ಅಂಗಡಿಯಿಂದ ಉಡುಪನ್ನು ಖರೀದಿಸಿದ್ದಾರೆ. ಅವರು ಅದನ್ನು ಖರೀದಿಸುವುದರಲ್ಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಅವರು ಅದರೊಂದಿಗೆ ಏನು ಬೇಕಾದರೂ ಮಾಡಲು ಸ್ವತಂತ್ರರು, ಆದರೆ ಅದು ನಮ್ಮ ಡಿಸೈನರ್ ವೇರ್. ಆಕೆ ಹೇಳಿಕೊಂಡಿರುವಂತೆ, ಅದು ಆಕೆ ಡಿಸೈನ್ ಮಾಡಿರೋದು ಅಲ್ಲ ಎಂದಿದ್ದಾರೆ. ಆದರೆ ಆಕೆ ಧರಿಸಿರುವ ಕೇಪ್ ನನ್ನದಲ್ಲ, ಬಹುಶಃ ಅವರು ಅದನ್ನು ಮಾಡಿರಬೇಕು ಎಂದಿದ್ದಾರೆ. ' ಕೇನ್ಸ್‌ಗೆ ಮೊದಲು ನ್ಯಾನ್ಸಿ ಈ ಉಡುಪನ್ನು 25000 ರೂ.ಗೆ ಖರೀದಿಸಿದ್ದಾಳೆ ಎಂದು ಸುರಭಿ ಹೇಳಿದ್ದಾರೆ. ಆದರೆ ಈ ಬಗ್ಗೆ ನ್ಯಾನ್ಸಿ ಮಾತ್ರ ಏನು ಹೇಳಿಲ್ಲ.
ಈ ಉಡುಪಿನ ಬಗ್ಗೆ ನ್ಯಾನ್ಸಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೀಗೆ ಬರೆದಿದ್ದಾರೆ, 'ಈ ಬಣ್ಣ ನನ್ನ ತಾಯಿಗೆ ತುಂಬಾ ಇಷ್ಟ, ಆದ್ದರಿಂದ ಈ ಬಾರಿ ನಾನು ಈ ಬಣ್ಣದಲ್ಲಿ ಧರಿಸಲು ನಿರ್ಧರಿಸಿದೆ. ಇದನ್ನು ತಯಾರಿಸಲು ಒಂದು ತಿಂಗಳು ಬೇಕಾಯಿತು ಮತ್ತು ಉಡುಗೆ ತುಂಬಾ ಭಾರವಾಗಿದ್ದರಿಂದ ಕೊನೆಯ ಕ್ಷಣದವರೆಗೂ ತಯಾರಿ ನಡೆಸುತ್ತಿದ್ದೆ. ಈ ಸುಂದರ ಪ್ರಯಾಣದ ಭಾಗವಾಗಿದ್ದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು, ನೀವೆಲ್ಲರೂ ಇಲ್ಲದಿದ್ದರೆ ಈ ಕ್ಷಣ ಇಷ್ಟೊಂದು ವಿಶೇಷವಾಗಿರುತ್ತಿರಲಿಲ್ಲ ಎಂದು ಬರೆದುಕೊಂಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

