ಲವ್ ಜಿಹಾದ್ ಟ್ರೋಲ್ ಬಗ್ಗೆ ಮೌನಮುರಿದ ಸೋನಾಕ್ಷಿ ಸಿನ್ಹಾ : ಮಗಳ ಮದುವೆಗೆ ಒಪ್ಪಿಗೆ ನೀಡಿಲ್ವಾ ಕುಟುಂಬಸ್ಥರು?
ಹೀರಾಮಂಡಿ ವೆಬ್ ಸೀರಿಸ್ ಸಕ್ಸಸ್ ಖುಷಿಯಲ್ಲಿರೋ ನಟಿ ಸೋನಾಕ್ಷಿ ಸಿನ್ಹಾ ಇದೇ ಸಂದರ್ಭದಲ್ಲಿ ನಟ ಜಹೀರ್ ಇಕ್ಬಾಲ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಜೂನ್ 23ರಂದು ಮುಂಬೈನಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಆಗಲಿದ್ದು, ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಸೋನಾಕ್ಷಿ ಮದುವೆ ಆಗ್ತಿರೋ ಹುಡುಗ ಮುಸ್ಲಿಂ ಆಗಿರೋ ಕಾರಣ ಇದು ಲವ್ ಜಿಹಾದ್ ಎಂಬ ಮಾತುಗಳು ಕೇಳಿ ಬಂದಿವೆ.
ಕಳೆದ ಕೆಲವು ವರ್ಷಗಳಿಂದ ಸೋನಾಕ್ಷಿ ಮತ್ತು ಜಹೀರ್ ಜೊತೆಯಾಗಿ ಸುತ್ತಾಡುತ್ತಿದ್ದಾರೆ. ಸಲ್ಮಾನ್ ಖಾನ್ ಮೂಲಕ ಸೋನಾಕ್ಷಿಗೆ ಜಹೀರ್ ಇಕ್ಬಾಲ್ ಪರಿಚಯವಾಗಿತ್ತು. ಪರಿಚಯ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಆದ್ರೆ ಈವರೆಗೂ ನಾವು ಒಳ್ಳೆಯ ಸ್ನೇಹಿತರು ಎಂದು ಇಬ್ಬರು ಹೇಳಿಕೊಂಡಿದ್ದಾರೆ.
ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮದುವೆ ಸುದ್ದಿ ಹೊರ ಬಂದಾಗಿನಿಂದ ಹಿಂದೂ ನಟಿಯರು ಮುಸ್ಲಿಂ ನಟರನ್ನು ಮದುವೆ ಆಗೋದೇಕೆ? ಇದು ಲವ್ ಜಿಹಾದ್ ಅಲ್ಲವೇ? ರಾಮಾಯಣ ಹೆಸರಿನ ಮನೆಗೆ ಮುಸ್ಲಿಂ ಅಳಿಯ ಎಂದ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿತ್ತು.
ಇದೀಗ ಈ ಎಲ್ಲಾ ಟ್ರೋಲ್ ಮತ್ತು ಮದುವೆ ಕುರಿತ ವಿಷಯದ ಬಗ್ಗೆ ಸೋನಾಕ್ಷಿ ಸಿನ್ಹಾ ಮೌನ ಮುರಿದಿದ್ದಾರೆ. ಐದಿವಾ ಸಂದರ್ಶನದಲ್ಲಿ ನಟಿ ಸೋನಾಕ್ಷಿ ಸಿನ್ಹಾಗೆ ಮದುವೆ ಬಗ್ಗೆ ಕೇಳಿದಾಗ ಉತ್ತರ ನೀಡಿದ್ದು ಹೀಗೆ.
ಇದು ನನ್ನ ವೈಯಕ್ತಿಕ ವಿಷಯ ಮತ್ತು ನನ್ನದೇ ಆಯ್ಕೆ. ಈ ವಿಷಯದಲ್ಲಿ ಬೇರೆಯವರ ಹಸ್ತಕ್ಷೇಪ ಬೇಕಿಲ್ಲ. ನನ್ನ ಪೋಷಕರಿಗಿಂತ ಜನರು ಯಾಕೆ ಇಷ್ಟು ಕುತೂಹಲ ಹೊಂದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಮದುವೆ ಬಗ್ಗೆ ಪೋಷಕರಿಗಿಂತ ಬೇರೆಯವರೇ ಹೆಚ್ಚು ಕೇಳುತ್ತಾರೆ. ಹಾಗಾಗಿ ಇದು ನನಗೆ ತುಂಬಾ ತಮಾಷೆಯಾಗಿ ಕಾಣುತ್ತದೆ ಎಂದು ಸೋನಾಕ್ಷಿ ಸಿನ್ಹಾ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಸೋನಾಕ್ಷಿ ಸಿನ್ಹಾ, ಈಗ ನನಗೆ ಇಂತಹ ಮಾತುಗಳನ್ನು ಕೇಳಿ ರೂಢಿಯಾಗಿದ್ದು, ನಾನು ಇಂತಹ ವಿಷಯಗಳನ್ನು ಗಂಭೀರವಾಗಿ ತೆಗೆದುಕೊಳ್ಳಲ್ಲ. ಆದ್ರೂ ಜನರು ಹೆಚ್ಚು ಕುತೂಹಲ ಹೊಂದಿದ್ರೆ ನಾನೇನು ಮಾಡಲು ಸಾಧ್ಯ ಎಂದು ಸೋನಾಕ್ಷಿ ಹೇಳಿದ್ದಾರೆ.
ಇನ್ನೊಂದೆಡೆ ಕುಟುಂಬಸ್ಥರ ವಿರೋಧದ ನಡುವೆ ಸೋನಾಕ್ಷಿ ಮದುವೆ ಆಗ್ತಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ನನಗೆ ಮದುವೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ರೆ, ಸೋದರ ಲವ್, ಮದುವೆಯಲ್ಲಿ ನನ್ನ ಪಾತ್ರ ಇಲ್ಲ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.