- Home
- Entertainment
- ಲತಾ ಮಂಗೇಶ್ಕರ್ ಸೀರೆ ಮೇಲೆ ಟೀ ಚೆಲ್ಲಿದ್ದ ಎಸ್ಪಿಬಿಗೆ ಕಾದಿತ್ತು ಸರ್ಪ್ರೈಸ್: ಇದು ಒಳ್ಳೆಯ ಶಕುನನಾ?
ಲತಾ ಮಂಗೇಶ್ಕರ್ ಸೀರೆ ಮೇಲೆ ಟೀ ಚೆಲ್ಲಿದ್ದ ಎಸ್ಪಿಬಿಗೆ ಕಾದಿತ್ತು ಸರ್ಪ್ರೈಸ್: ಇದು ಒಳ್ಳೆಯ ಶಕುನನಾ?
ಲತಾ ಮಂಗೇಶ್ಕರ್ ಸೀರೆ ಮೇಲೆ ಬಿಸಿ ಟೀ ಚೆಲ್ಲಿದ ಮರೆಯಲಾಗದ ಘಟನೆಯನ್ನು ಸಂಗೀತ ದಂತಕಥೆ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಳೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆ ನೆನಪುಗಳನ್ನು ಈಗ ನೋಡೋಣ.
ಮರೆಯಲಾಗದ ಘಟನೆ
ಸಂಗೀತ ದಂತಕಥೆ ದಿವಂಗತ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಧ್ವನಿ ಮತ್ತು ಸರಳತೆ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಜೀವಂತವಾಗಿದೆ. ಭಾಷೆಯ ಗಡಿ ದಾಟಿ ಸಾವಿರಾರು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ. ಅವರು ಆರಂಭದಲ್ಲಿ ಕನ್ನಡ ಮತ್ತು ತಮಿಳು ಕಲಿತ ಸ್ವಾರಸ್ಯಕರ ಕಥೆ ಹಾಗೂ ಲತಾ ಮಂಗೇಶ್ಕರ್ ಸೀರೆ ಮೇಲೆ ಬಿಸಿ ಟೀ ಚೆಲ್ಲಿದ ಮರೆಯಲಾಗದ ಘಟನೆಯನ್ನು ಹಳೆಯ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದರು. ಆ ನೆನಪುಗಳನ್ನು ಈಗ ನೋಡೋಣ. ಯಾವುದೇ ಭಾಷೆಯಲ್ಲಿ ಹಾಡಿದರೂ ಆ ಭಾಷೆಯ ಉಚ್ಚಾರಣೆ ತುಂಬಾ ಮುಖ್ಯ ಎಂದು ಎಸ್ಪಿಬಿ ನಂಬಿದ್ದರು. ಅವರ ಮಾತೃಭಾಷೆ ತೆಲುಗು. ಆದರೆ, ಅವರು ಕನ್ನಡದಲ್ಲಿ ಮಾತನಾಡುವಾಗ ಉಚ್ಚಾರಣೆ ಅಷ್ಟೇ ಸ್ಪಷ್ಟವಾಗಿರುತ್ತಿತ್ತು. ಆದರೆ, ಆರಂಭದಲ್ಲಿ ಕನ್ನಡ ಎಂಬ ಭಾಷೆ ಇರುವುದೇ ಅವರಿಗೆ ಗೊತ್ತಿರಲಿಲ್ಲವಂತೆ.
ಪೋಸ್ಟರ್ ನೋಡಿ ತಮಿಳು ಕಲಿತೆ
ತಮ್ಮ ಭಾಷೆ ಕಲಿತ ದಿನಗಳ ಬಗ್ಗೆ ಎಸ್ಪಿಬಿ ಹೀಗೆ ಹೇಳಿದ್ದರು: "ನಾನು ಹಾಡಿದ ಎರಡನೇ ಹಾಡು ಕನ್ನಡ. ಮೊದಲ ಹಾಡು ರೆಕಾರ್ಡಿಂಗ್ ವೇಳೆ, ಸಂಗೀತ ನಿರ್ದೇಶಕ ರಂಗರಾವ್ ಅದನ್ನು ಕೇಳಿ 'ನಿನ್ನ ಕೈಯಲ್ಲಿ ನಾನು ಕನ್ನಡದಲ್ಲಿ ಹಾಡಿಸುತ್ತೇನೆ' ಎಂದರು. ನಿಜ ಹೇಳಬೇಕೆಂದರೆ, ಕನ್ನಡ ಎಂಬ ಭಾಷೆ ಇರುವುದೇ ನನಗೆ ಆಗ ಗೊತ್ತಾಗಿದ್ದು! ಅದು ಹೇಗಿರುತ್ತದೆ ಎಂದು ಕೂಡ ಗೊತ್ತಿರಲಿಲ್ಲ. ಆಗ ಒಬ್ಬ ಕವಿ ಬಂದು, 'ಏನೂ ತೊಂದರೆ ಇಲ್ಲ, ಇದು ತೆಲುಗು ತರಾನೇ ಇರುತ್ತೆ' ಎಂದು ಹೇಳಿ, ತೆಲುಗಿನಲ್ಲೇ ಸಾಲುಗಳನ್ನು ಬರೆದುಕೊಟ್ಟು ಹಾಡಿಸಿದರು. ಆದರೆ, ಹೋಗ್ತಾ ಹೋಗ್ತಾ ಜನ 'ಕನ್ನಡ ಅಂದ್ರೆ ಅದು ಬಾಲು ಅವರ ಧ್ವನಿನೇ' ಎನ್ನುವಷ್ಟರ ಮಟ್ಟಿಗೆ ಪ್ರೀತಿ ಕೊಟ್ಟರು."
ತಮಿಳು ಚಿತ್ರರಂಗಕ್ಕೆ ಬಂದಾಗ, ಖ್ಯಾತ ಸಂಗೀತ ನಿರ್ದೇಶಕ ಎಂ.ಎಸ್. ವಿಶ್ವನಾಥನ್ ಎಸ್ಪಿಬಿಗೆ ಒಂದು ಸವಾಲು ಹಾಕಿದರಂತೆ. "ನಿನ್ನ ಹಾಡು ಚೆನ್ನಾಗಿದೆ, ಆದರೆ ತಮಿಳು ಉಚ್ಚಾರಣೆ ಸರಿಯಿಲ್ಲ. ಓದಲು ಬರದಿದ್ದರೂ ಪರವಾಗಿಲ್ಲ, ಮೊದಲು ತಮಿಳು ಚೆನ್ನಾಗಿ ಮಾತನಾಡಲು ಕಲಿತು ಬಾ, ಆಮೇಲೆ ಅವಕಾಶ ಕೊಡುತ್ತೇನೆ" ಎಂದು ಹೇಳಿದ್ದರು. ದೊಡ್ಡ ಸಂಗೀತ ನಿರ್ದೇಶಕ ಹೇಳಿದ್ದನ್ನು ಸೀರಿಯಸ್ ಆಗಿ ತೆಗೆದುಕೊಂಡ ಬಾಲು, ಬೀದಿಯಲ್ಲಿ ಅಂಟಿಸಿದ್ದ ಸಿನಿಮಾ ಪೋಸ್ಟರ್ಗಳನ್ನು ಓದಿಯೇ ತಮಿಳು ಕಲಿತರಂತೆ!
ಲತಾಜಿ ಬಿಳಿ ಸೀರೆ ಮೇಲೆ ಟೀ ಚೆಲ್ಲಿದ ಆ ದಿನ
ಹಿಂದಿ ಸಿನಿಮಾದ ಮುಡಿಸೂಡದ ರಾಣಿ ಲತಾ ಮಂಗೇಶ್ಕರ್ ಅವರನ್ನು ಮೊದಲ ಬಾರಿ ಭೇಟಿಯಾದಾಗ ನಡೆದ ಸ್ವಾರಸ್ಯಕರ ಘಟನೆಯನ್ನೂ ಎಸ್ಪಿಬಿ ಹೇಳಿದ್ದಾರೆ. "ಅದು 'ಏಕ್ ದುಜೇ ಕೇ ಲಿಯೇ' ಸಿನಿಮಾದ 'ತೇರೆ ಮೇರೆ ಬೀಚ್ ಮೇ' ಹಾಡು ರೆಕಾರ್ಡಿಂಗ್ ಸಮಯ. ಲಕ್ಷ್ಮೀಕಾಂತ್-ಪ್ಯಾರೇಲಾಲ್ ಸಂಗೀತ ನಿರ್ದೇಶಕರು. ಲತಾಜಿ ಹಾಡುತ್ತಿರುವಾಗ ಮಧ್ಯದಲ್ಲಿ ನಾನು 'ನೀ ರೊಂಬ ನಲ್ಲಾ ಪಾಡ್ರೆ' ಎಂದು ಒಂದು ತಮಿಳು ಡೈಲಾಗ್ ಹೇಳಬೇಕಿತ್ತು. ಸಾಕ್ಷಾತ್ ಲತಾ ಮಂಗೇಶ್ಕರ್ ಹಾಡಿಗೆ ನಾನು ಒಂದು ಸರ್ಟಿಫಿಕೇಟ್ ಕೊಡಬೇಕಲ್ಲ ಎಂಬ ಭಯ ನನ್ನಲ್ಲಿತ್ತು.
ಅವರು ಸ್ಟುಡಿಯೋಗೆ ಬಂದಾಗ, ನೂರಕ್ಕೂ ಹೆಚ್ಚು ಸಂಗೀತಗಾರರು ಮತ್ತು ಸಂಗೀತ ನಿರ್ದೇಶಕರು ಮರ್ಯಾದೆಯಿಂದ ಎದ್ದು ನಿಂತರು. ನಾನು ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದೆ. ಆಮೇಲೆ ವಾಯ್ಸ್ ಬೂತ್ನಲ್ಲಿ ಕುಳಿತು ಅವರು ಹಾಡು ಕಲಿಯುತ್ತಿದ್ದರು, ನಾನು ಡೈಲಾಗ್ ಹೇಳಲು ರೆಡಿಯಾಗುತ್ತಿದ್ದೆ. ಆಗ ನಮಗೆ ಟೀ ತಂದುಕೊಟ್ಟರು. ನನಗೆ ತುಂಬಾ ನರ್ವಸ್ ಆಗಿತ್ತು, ಭಯದಲ್ಲಿ ಕೈ ನಡುಗುತ್ತಿತ್ತು. ಲತಾಜಿ ಯಾವಾಗಲೂ ಶುದ್ಧ ಬಿಳಿ ಸೀರೆಯೇ ಉಡುತ್ತಾರೆ ಎಂದು ಎಲ್ಲರಿಗೂ ಗೊತ್ತು. ನನ್ನ ಕೈ ನಡುಗಿ ಆ ಬಿಸಿ ಟೀಯನ್ನು ಅವರ ಸೀರೆ ಮೇಲೆಯೇ ಚೆಲ್ಲಿಬಿಟ್ಟೆ!
ಒಳ್ಳೆಯ ಶಕುನ
ಆ ನಿಮಿಷ ನನ್ನ ಎದೆಯೇ ನಿಂತುಹೋಯ್ತು. ಬಾಲು ಸುಬ್ರಹ್ಮಣ್ಯಂ, ಹಿಂದಿ ಸಿನಿಮಾದಲ್ಲಿ ನಿನಗೆ ಇದೇ ಮೊದಲ ದಿನ ಮತ್ತು ಕೊನೆಯ ದಿನ. ರೆಕಾರ್ಡಿಂಗ್ ಕ್ಯಾನ್ಸಲ್ ಆಗಿ ನಿನ್ನನ್ನು ಹೊರಗೆ ಅಟ್ಟುತ್ತಾರೆ ಎಂದುಕೊಂಡೆ. ಆದರೆ ಲತಾಜಿ ಸ್ವಲ್ಪವೂ ಕೋಪಗೊಳ್ಳದೆ, ನಗುತ್ತಲೇ 'ಬಹುತ್ ಅಚ್ಚಾ ಶಗುನ್ ಹೈ ಬಾಲುಜಿ' (ಇದು ತುಂಬಾ ಒಳ್ಳೆಯ ಶಕುನ ಬಾಲುಜಿ) ಅಂತ ಹೇಳಿದರು! ಬಿಳಿ ಬಟ್ಟೆ ಮೇಲೆ ಕಾಫಿ ಅಥವಾ ಟೀ ಚೆಲ್ಲಿದರೆ ಅದು ಒಳ್ಳೆಯ ಶಕುನವಂತೆ! ಅವರ ಆ ದೊಡ್ಡ ಮನಸ್ಸನ್ನು ನೋಡಿ ನನಗೆ ನೆಮ್ಮದಿಯಾಯಿತು. ಆಮೇಲೆ ಬಂದ ದಿನಗಳಲ್ಲಿ, 'ಹೀಗೆ ಒಳ್ಳೆಯ ಶಕುನ ಆಗುತ್ತೆ ಅಂದ್ರೆ ನಾನು ಪ್ರತಿ ರೆಕಾರ್ಡಿಂಗ್ನಲ್ಲೂ ನಿಮ್ಮ ಸೀರೆ ಮೇಲೆ ಕಾಫಿ ಚೆಲ್ಲುತ್ತೇನೆ' ಎಂದು ಲತಾಜಿ ಬಳಿ ತಮಾಷೆ ಮಾಡುತ್ತಿದ್ದೆ" ಎಂದು ಎಸ್ಪಿಬಿ ಆ ದಿನಗಳನ್ನು ನೆನಪಿಸಿಕೊಂಡರು.
ಇನ್ನು ಭಾಷೆ ಮೇಲಿದ್ದ ಒಲವು ಮತ್ತು ಹಿರಿಯ ಕಲಾವಿದರ ಮೇಲಿದ್ದ ಗೌರವವೇ ಎಸ್ಪಿಬಿಯನ್ನು ಭಾರತೀಯ ಸಂಗೀತ ಜಗತ್ತಿನಲ್ಲಿ ಒಬ್ಬ ಅಳಿಯದ ಗಾಯಕನನ್ನಾಗಿ ಮಾಡಿತು ಎನ್ನುವುದಕ್ಕೆ ಈ ಘಟನೆಗಳೇ ಸಾಕ್ಷಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.













