ನಿರಂಜನ್-ಸಂಜನಾ ಮದುವೆಯ ಝಲಕ್, ಉಪೇಂದ್ರ ಮನೆಯಲ್ಲಿ ಕಲ್ಯಾಣ ಸಂಭ್ರಮದ ಫೋಟೋಗಳು
ಸ್ಯಾಂಡಲ್ವುಡ್ನ ಯುವ ನಟ ನಿರಂಜನ್ ಹಾಗೂ ಸಂಜನಾ ಬಿ ರಾಜ್ ಮದುವೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಮದುವೆಗೆ ಸಂಬಂಧಿಸಿದ ಫೋಟೋಗಳು ವೈರಲ್ ಆಗಿವೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.

ನಿರಂಜನ್-ಸಂಜನಾ ಮದುವೆ
ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಕುಟುಂಬದಲ್ಲಿ ಕಳೆದೊಂದು ವಾರದಿಂದ ಮನೆಮಾಡಿದ್ದ ವಿವಾಹ ಸಂಭ್ರಮದ ಸುಂದರ ದೃಶ್ಯಗಳು ಇಂಟರ್ನೆಟ್ನಲ್ಲಿ ಸದ್ದು ಮಾಡುತ್ತಿವೆ. ಉಪೇಂದ್ರ ಸಹೋದರ ಸುಧೀಂದ್ರ ಮತ್ತು ವೀಣಾ ದಂಪತಿಯ ಪುತ್ರ, ಯುವ ನಟ ನಿರಂಜನ್ ಹಾಗೂ ಸಂಜನಾ ಬಿ ರಾಜ್ ಅವರ ಅದ್ಧೂರಿ ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳ ಮನಗೆದ್ದಿವೆ.
ಹೃದಯಸ್ಪರ್ಶಿ ಸಂದೇಶ
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರಗಳ ಜೊತೆಗೆ ಭಾವನಾತ್ಮಕ ಸಾಲುಗಳನ್ನೂ ಹಂಚಿಕೊಳ್ಳಲಾಗಿದೆ. ನಿರಂಜನ್ ಮತ್ತು ಸಂಜನಾ ಶಾಶ್ವತವಾಗಿ ಒಂದಾದರು. ಸಂಭ್ರಮದ ಕ್ಷಣಗಳಿಂದ ಹಿಡಿದು ಜೀವನಪೂರ್ತಿ ಜೊತೆಯಾಗಿ ಹೆಜ್ಜೆ ಹಾಕಲು ಸಮ್ಮತಿಸಿದ ಆ ಶುಭ ಘಳಿಗೆಯವರೆಗೆ, ಈ ವಿವಾಹದ ಪ್ರತಿಯೊಂದು ಹಂತವೂ ಪ್ರೀತಿ, ಆನಂದಬಾಷ್ಪ, ನಗು ಹಾಗೂ ಆಪ್ತರ ಆತ್ಮೀಯತೆಯಿಂದ ತುಂಬಿತ್ತು. ನವಜೋಡಿಗೆ ಅಭಿನಂದನೆಗಳು. ನಿಮ್ಮ ಬಾಳಿನಲ್ಲಿ ಜೀವನಪೂರ್ತಿ ಪ್ರೀತಿ, ಸಂತೋಷ ಮತ್ತು ಅಸಂಖ್ಯಾತ ಸುಂದರ ನೆನಪುಗಳು ತುಂಬಿರಲಿ ಎಂಬ ಹಾರೈಕೆಯ ಸಂದೇಶವು ಫೋಟೋಗಳಿಗೆ ಮತ್ತಷ್ಟು ಮೆರುಗು ನೀಡಿದೆ.
ಶಾಸ್ತ್ರೋಕ್ತವಾಗಿ ಸಪ್ತಪದಿ
ಅಂತರ್ಜಾಲದಲ್ಲಿ ಗಮನ ಸೆಳೆಯುತ್ತಿರುವ ಫೋಟೋಗಳಲ್ಲಿ, ನವವಧು-ವರರು ಮಂಟಪದೊಳಗೆ ಕಾಲಿಡುವ ಮುನ್ನ ರಿಬ್ಬನ್ ಕತ್ತರಿಸಿ ವಿನೂತನವಾಗಿ ಎಂಟ್ರಿ ಕೊಟ್ಟಿರುವ ಕ್ಷಣ ಪ್ರಮುಖ ಆಕರ್ಷಣೆಯಾಗಿದೆ. ಅದ್ಧೂರಿ ಆರತಕ್ಷತೆಯ ಬಳಿಕ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ದೃಶ್ಯಗಳು ಹಾಗೂ ಸಂಭ್ರಮದ ಕ್ಷಣಗಳು ನೆಟ್ಟಿಗರ ಗಮನ ಸೆಳೆದಿವೆ.
ಉಪೇಂದ್ರ-ಪ್ರಿಯಾಂಕಾ ದಂಪತಿಯ ಗಿಫ್ಟ್
ಈ ಫೋಟೋಗಳಲ್ಲಿ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ ಅವರ ಉತ್ಸಾಹ ಎದ್ದು ಕಾಣುತ್ತಿದೆ. ಮನೆಯ ಹಿರಿಯರಾಗಿ ಮುಂದೆ ನಿಂತು ವಿವಾಹದ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿದೆ. ನವಜೋಡಿಗೆ ದುಬಾರಿ ಉಡುಗೊರೆಗಳನ್ನೂ ನೀಡಿ ಹಾರೈಸಿದ್ದಾರೆ. ರಿಸೆಪ್ಷನ್ ವೇದಿಕೆಯಲ್ಲಿ ನಿರಂಜನ್ಗೆ ಉಪೇಂದ್ರ ಅವರು ಬೆಲೆಬಾಳುವ ಚಿನ್ನದ ಬ್ರೇಸ್ಲೆಟ್ ತೊಡಿಸಿದರೆ, ಸೊಸೆ ಸಂಜನಾಗೆ ಪ್ರಿಯಾಂಕಾ ದುಬಾರಿ ಚಿನ್ನದ ನೆಕ್ಲೇಸ್ ಉಡುಗೊರೆಯಾಗಿ ನೀಡಿದ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ.
ಶುಭಾಶಯಗಳ ಮಹಾಪೂರ
ವೈರಲ್ ಆಗಿರುವ ಮದುವೆ ಆಲ್ಬಂನಲ್ಲಿ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್, ನಟಿಯರಾದ ಮಾಲಾಶ್ರೀ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಅನೇಕ ಗಣ್ಯರು ನವದಂಪತಿಯೊಂದಿಗೆ ನಿಂತು ಶುಭ ಹಾರೈಸಿದ್ದಾರೆ.
ಗಣ್ಯರಿಂದ ಶುಭ ಹಾರೈಕೆ
'ಸೆಕೆಂಡ್ ಹಾಫ್', 'ಸೀತಾ ಪಯಣಂ' ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಿರಂಜನ್ ಹೊಸ ಬಾಳಿಗೆ, ಫೋಟೋಗಳ ಕಾಮೆಂಟ್ ಬಾಕ್ಸ್ನಲ್ಲಿ ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.









