ದರ್ಶನ್, ಪವಿತ್ರಾ ಗೌಡ ಸೇರಿ ಐವರಿಗೆ ಮತ್ತೊಮ್ಮೆ ಪರಪ್ಪನ ಆಗ್ರಹಾರ ಜೈಲಿಗೆ ಶಿಫ್ಟ್
ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ನಂತರ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಐಷಾರಾಮಿ ಜೀವನದ ಫೋಟೋ ವೈರಲ್ ಆದ ಬಳಿಕ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್‌ರನ್ನು ಶಿಫ್ಟ್ ಮಾಡಲಾಗುತ್ತಿದೆ.

ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಆರೋಪಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರನ್ನು ಇಂದು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಐವರು ಆರೋಪಿಗಳನ್ನು ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡ ಬರಲಾಗಿತ್ತು.
ಎಲ್ಲಾ ಆರೋಪಿಗಳನ್ನೂ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿ ಆದೇಶಿ, ಮುಂದಿನ ವಿಚಾರಣೆಯನ್ನು ಆಗಸ್ಟ್ 23ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇಲ್ಲಿಂದ ಎಲ್ಲಾ ಆರೋಪಿಗಳನ್ನು ಪರಪ್ಪನ ಅಗ್ರಹಾರದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗುತ್ತದೆ.
ಈ ಹಿಂದೆಯೂ ದರ್ಶನ್ ಇದೇ ಜೈಲಿನಲ್ಲಿ ಕೆಲ ದಿನಗಳಿದ್ದು, ಐಷಾರಾಮಿ ಜೀವನದ ಫೋಟೋ ವೈರಲ್ ಬೆನ್ನಲ್ಲೇ ಬಳ್ಳಾರಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಮತ್ತೆ ನಟನಿಗೆ ಪರಪ್ಪನ ಅಗ್ರಹಾರದ ದರ್ಶನವಾಗಲಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದ್ದು, ಬೆಂಗಳೂರಿಗೆ ಕರೆದುಕೊಂಡು ಬರಲಾಗುತ್ತಿದೆ.
“ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. “ಆರೋಪಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತವನ್ನು ಎತ್ತಿ ಹಿಡಿಯಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.
ಜೈಲಿನಲ್ಲಿ ಆರೋಪಿಗಳಿಗೆ 5 ಸ್ಟಾರ್ ಅತಿಥ್ಯ ನೀಡಿರುವ ಬಗ್ಗೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು. “ಜೈಲು ಸೂಪರಿಂಟೆಂಡೆಂಟ್‌ರನ್ನು ಸಸ್ಪೆಂಡ್ ಮಾಡಬೇಕಿತ್ತು” ಎಂದು ಅಭಿಪ್ರಾಯಪಟ್ಟಿದೆ. “ಯಾರಿಗಾದರೂ ವಿಐಪಿ ಅತಿಥ್ಯ ನೀಡುತ್ತಿರುವ ಫೋಟೋ ಅಥವಾ ವೀಡಿಯೋ ಕಂಡುಬಂದರೆ, ಮೊದಲು ನಿಮ್ಮನ್ನು ಸಮನ್ಸ್ ಮಾಡಲಾಗುತ್ತದೆ” ಎಂದು ನ್ಯಾ. ಪರ್ದಿವಾಲಾ ಎಚ್ಚರಿಸಿದರು.