Inauguration of RV University: ವಿವಿಗಳು ಸಂಶೋಧನೆಗೆ ಆದ್ಯತೆ ನೀಡಬೇಕು: ಸಿಎಂ ಬೊಮ್ಮಾಯಿ
ಬೆಂಗಳೂರು(ಡಿ.09): ವಿದ್ಯಾರ್ಥಿಗಳು(Students) ಕೇವಲ ಪದವಿ ಹೊಂದುವುದಕ್ಕೆ ಮಾತ್ರ ಸೀಮಿತರಾಗದೇ ಅಗತ್ಯ ಕೌಶಲ್ಯಗಳನ್ನು ಕಲಿಯಬೇಕು. ಇದಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಕೌಶಲ್ಯಾಭಿವೃದ್ಧಿ ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹೇಳಿದ್ದಾರೆ.
ಬುಧವಾರ ನಗರದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ನೂತನ ‘ಆರ್.ವಿ. ವಿಶ್ವವಿದ್ಯಾಲಯ’(RV University) ಉದ್ಘಾಟಿಸಿ ಮಾತನಾಡಿದ ಸಿಎಂ, ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಲು ಜಾರಿಗೆ ತಂದಿರುವ ಸರ್ಕಾರ ಕೌಶಲ್ಯಾಭಿವೃದ್ಧಿ ಯೋಜನೆಗೆ ತಾಂತ್ರಿಕ ಮತ್ತು ಆರ್ಥಿಕ ನೆರವು, ಸಹಕಾರ ನೀಡುತ್ತಿದೆ ಎಂದರು.
ವಿಶ್ವವಿದ್ಯಾಲಯಗಳು(Universities) ಸಂಶೋಧನೆ(Research) ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸಮಾಜ ಹಾಗೂ ಯುವ ಪೀಳಿಗೆಗೆ ಕೊಡುಗೆ ನೀಡಬೇಕು. ದೂರದೃಷ್ಟಿವುಳ್ಳ ಹಾಗೂ ಅಭಿವೃದ್ಧಿ, ಆವಿಷ್ಕಾರ, ಸಂಶೋಧನೆಗಳಿಗೆ ಒತ್ತು ನೀಡುವ ಸಂಸ್ಥೆಗಳನ್ನು ಪ್ರೋತ್ಸಾಹಿಸುವ ಮತ್ತು ಅವುಗಳೊಂದಿಗೆ ಕೈಜೋಡಿಸುವ ಮೂಲಕ ಸರ್ಕಾರ ಎಲ್ಲ ವಲಯಗಳ ಅಭಿವೃದ್ಧಿಗೆ ಶ್ರಮಿಸುತ್ತದೆ. ರಾಜ್ಯದ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಬಗೆಹರಿಸಬೇಕೆಂಬ ಚಿಂತನೆ ಸರ್ಕಾರಕ್ಕಿದೆ ಎಂದು ತಿಳಿಸಿದ ಸಿಎಂ ಬೊಮ್ಮಾಯಿ
ಹೊಸದಾಗಿ ಆರಂಭವಾಗುವ ಸಂಸ್ಥೆಗಳು ವರ್ಷಗಳ ನಂತರ ಸಮಾಜಕ್ಕೆ ನೀಡುವ ಫಲಿತಾಂಶ ಬಗ್ಗೆ ಯೋಚಿಸಬೇಕು. ಮಾತನಾಡದೇ, ಮಾಡಿ ತೋರಿಸುವ ಸಂಸ್ಕೃತಿ ಪಾಲಿಸಬೇಕು. ಈ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಆರ್.ವಿ. ಶಿಕ್ಷಣ ಸಂಸ್ಥೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿಗಳು
21ನೇ ಶತಮಾನ ಜ್ಞಾನಾಧಾರಿತ ಆರ್ಥಿಕತೆಯ ಯುಗವಾಗಿದೆ. ಗುಣಮಟ್ಟದ ಶಿಕ್ಷಣವೇ ಇಲ್ಲಿ ಎಲ್ಲ ಸಮಸ್ಯೆಗಳಿಗೆ ಸದೃಢ ಪರಿಹಾರವಾಗಿದೆ. ಕೌಶಲ್ಯಯುತ ವ್ಯಕ್ತಿಗಳಿಗೆ ಉದ್ಯೋಗ ರಂಗದಲ್ಲಿ ಅಪಾರ ಬೇಡಿಕೆ ಇದೆ. ಹೀಗಾಗಿಯೇ ಶಿಕ್ಷಣ ಉದ್ಯೋಗದಾತ ಕಂಪನಿಗಳ ಜತೆ ಬೆಸೆದುಕೊಂಡಿದೆ. ಪೂರಕವಾಗಿ ರಾಜ್ಯದಲ್ಲಿ ‘ನೂತನ ರಾಷ್ಟ್ರೀಯ ಶಿಕ್ಷಣ ನೀತಿ’ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್(CN Ashwathnarayan)
ರಾಜ್ಯದಲ್ಲಿ(Karnataka) 8 ಸಾವಿರ ಸ್ಮಾರ್ಟ್ ತರಗತಿ ಕೊಠಡಿ(Smart Classroom) ತೆರೆಯಲಾಗಿದ್ದು, ರಾಜ್ಯದಲ್ಲಿ ಎಲ್ಲ ವಲಯಗಳಲ್ಲೂ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸುವ ಜತೆಗೆ ಡಿಜಿಟಲ್ ಎಕಾನಮಿ ಮಿಷನ್ ಯೋಜನೆಯಡಿ ಸಮಗ್ರ ಬೆಳವಣಿಗೆಗೆ ಒತ್ತು ನೀಡುತ್ತಿದ್ದೇವೆ ಎಂದು ವಿವರಿಸಿದ ಅಶ್ವತ್ಥ್ ನಾರಾಯಣ್
ವಿವಿ ಕುಲಾಧಿಪತಿ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ, ಉಪ ಕುಲಾಧಿಪತಿ ಡಾ. ವೈ.ಎಸ್.ಆರ್.ಮೂರ್ತಿ, ಸಹ ಕುಲಾಧಿಪತಿ ಎ.ವಿ.ಎಸ್.ಮೂರ್ತಿ, ಸಹ ಉಪ ಕುಲಾಧಿಪತಿ ಡಿ.ಪಿ.ನಾಗರಾಜ್, ಖಜಾಂಚಿ ಕೆ.ಜಿ.ಸುಬ್ಬರಾಮಶೆಟ್ಟಿ, ರಿಜಿಸ್ಟ್ರಾರ್ ಕೃಪಾಶಂಕರ್ ಪಾಲ್ಗೊಂಡಿದ್ದರು.
ರಾಷ್ಟ್ರೀಯ ಶಿಕ್ಷಣ ಸಮಿತಿಯ ನೂತನ ಆರ್.ವಿ. ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ವಿವಿ ಕುಲಾಧಿಪತಿ ಡಾ.ಎಂ.ಕೆ.ಪಾಂಡುರಂಗ ಶೆಟ್ಟಿ ಇತರರಿದ್ದರು.