ಸರ್ಕಾರಿ ಶಾಲೆ ಮುಚ್ಚಲು ಸಂಬಳ ಪಡೆಯುವ ಶಿಕ್ಷಕರೇ ಕಾರಣ; ಇಂಥ ಮೇಷ್ಟ್ರು ಇದ್ದರೆ ಹರೋಹರ!
ಚಾಮರಾಜನಗರದ ಒಂದು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಒಳಜಗಳದಿಂದಾಗಿ ಈ ವರ್ಷ ಯಾವುದೇ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ, ಮತ್ತು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಚಾಮರಾಜನಗರ (ಜೂ.03): ಶಿಕ್ಷಕರ ಒಳ ಜಗಳ ಹಿನ್ನಲೆ ಈ ಸರ್ಕಾರಿ ಶಾಲೆಯಲ್ಲಿ ಶೂನ್ಯ ಪ್ರವೇಶ (ಝೀರೋ ಅಡ್ಮಿಷನ್) ಆಗಿದೆ. ಆದ್ದರಿಂದ ಇಬ್ಬರು ಶಿಕ್ಷಕರು, ಇಬ್ಬರು ಅಡುಗೆ ಸಿಬ್ಬಂದಿ, ಏಳು ಕೊಠಡಿಗಳನ್ನು ಈ ಸರ್ಕಾರಿ ಶಾಲೆ ಇದೀಗಾ ಮಕ್ಕಳಿಲ್ಲದೇ ಅನಥವಾಗಿದೆ. ಶಿಕ್ಷಕರ ಒಳಜಗಳಕ್ಕೆ ಬೇಸತ್ತ ಪೋಷಕರು ಶಾಲೆಗೆ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕಿದ್ದಾರೆ. ಇದೆಲ್ಲಿ ಅಂತೀರಾ ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.
ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಗುತ್ತೆ ಅಂತಾರಲ್ಲ ಹಾಗಾಗಿದೆ ಈ ಸರ್ಕಾರಿ ಶಾಲೆಯ ಕಥೆ. ಶಿಕ್ಷಕರ ನಡುವೆ ಒಳ ಜಗಳ ಹಿನ್ನಲೆ ಯಲ್ಲಿ ಈ ಸರ್ಕಾರಿ ಶಾಲೆಗೆ ಈ ಬಾರಿ ಝೀರೋ ಅಡ್ಮಿಷನ್ ಆಗಿದೆ. ಒಬ್ಬ ವಿದ್ಯಾರ್ಥಿಯು ಕೂಡ ಪ್ರವೇಶ ಪಡೆದಿಲ್ಲ. ವಿದ್ಯಾರ್ಥಿಗಳಿಲ್ಲದೆ ಶಾಲಾ ಕೊಠಡಿಗಳು ಬಿಕೋ ಎನ್ನುತ್ತಿವೆ. ಇಡೀ ಸರ್ಕಾರಿ ಶಾಲೆ ಖಾಲಿ ಖಾಲಿ ಹೊಡೆಯುತ್ತಿದೆ.ಚಾಮರಾಜನಗರ ತಾಲೂಕು ಮರಿಯಾಲ ಸ.ಹಿ.ಪ್ರಾ.ಶಾಲಾ ದುಸ್ಥಿತಿಯಾಗಿದೆ.
ಶಿಕ್ಷಕರ ಒಳ ಜಗಳ ಹಿನ್ನಲೆ ಸರಿಯಾಗಿ ಪಾಠ ಪ್ರವಚನ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಶಾಲೆ ಆರಂಭವಾಗಿ ನಾಲ್ಕು ದಿನಗಳು ಕಳೆದರು ಕೂಡ ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.
ಸರ್ಕಾರಿ ಶಾಲೆಗೆ ಪ್ರವೇಶ ಪಡೆಯದೇ ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಸಮರ್ಪಕ ಬಿಸಿಯೂಟ ನೀಡಲ್ಲ, ಕುಡಿಯುವ ನೀರಿಲ್ಲ, ಸ್ವಚ್ಚತೆ ಇಲ್ಲ, ಶಿಕ್ಷಕರ ಜಗಳದಿಂದ ಶಾಲೆಯ ವಾತಾವರಣ ಹದಗಟ್ಟಿದೆ ಎಂದು ಪೋಷಕರ ಆರೋಪ ಮಾಡುತ್ತಿದ್ದಾರೆ. ಕಳೆದ ವರ್ಷ 26 ವಿದ್ಯಾರ್ಥಿಗಳಿದ್ದರು ಆದರೆ ಈ ಬಾರಿ ಬಹುತೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆದಿದ್ದಾರೆ. ಇನ್ನೂ ಮೂರು ತಿಂಗಳ ಹಿಂದೆ ಮುಖ್ಯ ಶಿಕ್ಷಕಿ ಸುಶೀಲಾ ಪೊಲೀಸ್ ರಕ್ಷಣೆ ಪಡೆದಿದ್ದರು. ತಮ್ಮೂರ ಶಾಲೆಗೆ ನಿತ್ಯ ಪೊಲೀಸ್ ಕಾವಲಿನಿಂದ ಪೋಷಕರು ಬೇಸತ್ತಿದ್ದರು.
ಸರ್ಕಾರಿ ಶಾಲೆಯ ದುರಾವಸ್ಥೆಯಿಂದ ಆಕ್ರೋಶಗೊಂಡು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಮುಂದಾಗಿದ್ದಾರೆ. ಉಳ್ಳವರು ಖಾಸಗಿ ಶಾಲೆಗೆ ಸೇರಿಸುತ್ತಾರೆ, ಬಡವರು ಕೂಲಿ ಕಾರ್ಮಿಕರು ಏನು ಮಾಡಬೇಕು?. ಇಲ್ಲಿನ ಶಿಕ್ಷಕರನ್ನು ವರ್ಗಾವಣೆ ಮಾಡಿ ಹದಗಟ್ಟಿರುವ ಸರ್ಕಾರಿ ಶಾಲೆಯ ಚಿತ್ರಣ ಬದಲಿಸಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಕ್ರಮ ವಹಿಸಬೇಕಿದೆ.
ಒಟ್ಟಿನಲ್ಲಿ ಗಡಿ ಜಿಲ್ಲೆಯ ಸರ್ಕಾರಿ ಶಾಲೆಗಳನ್ನು ಉಳಿಸುವಂತೆ ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ.ಆದ್ರೆ ಇಲ್ಲಿ ಇರುವ ಇಬ್ಬರು ಶಿಕ್ಷಕರ ಜಗಳಕ್ಕೆ ಬೇಸತ್ತ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ.ಇಷ್ಟಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ವರದಿ - ಪುಟ್ಟರಾಜು. ಆರ್. ಸಿ, ಏಷ್ಯಾನೆಟ್ ಸುವರ್ಣ ನ್ಯೂಸ್