ಟಿ20 ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ ಈ 6 ಟೀಂ ಇಂಡಿಯಾ ಕ್ರಿಕೆಟರ್ಸ್..!
ನ್ಯೂಯಾರ್ಕ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಅಮೆರಿಕದಲ್ಲಿ ಚಾಲನೆ ಸಿಕ್ಕಿದೆ. ಈ ಚುಟುಕು ಮಹಾ ವಿಶ್ವಕಪ್ ಟೂರ್ನಿಗೆ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಜಂಟಿ ಆತಿಥ್ಯ ವಹಿಸಿವೆ. ಇದೀಗ ಟೀಂ ಇಂಡಿಯಾದ 6 ಆಟಗಾರರು ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಇಂದು ಟಿ20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ನ್ಯೂಯಾರ್ಕ್‌ನಲ್ಲಿಂದು ಟೀಂ ಇಂಡಿಯಾ, ಐರ್ಲೆಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದೆ.
ಭಾರತ ಹಾಗೂ ಐರ್ಲೆಂಡ್ ತಂಡಗಳು ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ 'ಎ' ಗುಂಪಿನಲ್ಲಿ ಸ್ಥಾನ ಪಡೆದಿವೆ. ಇನ್ನು ಇದೇ ಗುಂಪಿನಲ್ಲಿ ಬದ್ದ ಎದುರಾಳಿ ಪಾಕಿಸ್ತಾನ, ಕೆನಡಾ ಹಾಗೂ ಆತಿಥೇಯ ಯುಎಸ್‌ಎ ತಂಡಗಳು ಸ್ಥಾನ ಪಡೆದಿವೆ.
ನಾವಿಂದು ಇದೇ ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಪಾದಾರ್ಪಣೆ ಮಾಡುತ್ತಿರುವ ಟೀಂ ಇಂಡಿಯಾ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
1. ಯಶಸ್ವಿ ಜೈಸ್ವಾಲ್:
22 ವರ್ಷದ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಕಳೆದ ವರ್ಷವಷ್ಟೇ ಭಾರತ ಟಿ20 ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದು, ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
2. ಶಿವಂ ದುಬೆ:
ಟೀಂ ಇಂಡಿಯಾ ಯುವ ಆಲ್ರೌಂಡರ್ ಶಿವಂ ದುಬೆ 2019ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಇದೀಗ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿದ್ದು, ಇದೇ ಮೊದಲ ಬಾರಿಗೆ ಚುಟುಕು ಕ್ರಿಕೆಟ್ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.
3. ಯುಜುವೇಂದ್ರ ಚಹಲ್
2016ರಲ್ಲೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡಿರುವ ಚಹಲ್ ಇದುವರೆಗೂ ಟಿ20 ವಿಶ್ವಕಪ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿಲ್ಲ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ. ಈ ಬಾರಿ ಚಹಲ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ.
4. ಕುಲ್ದೀಪ್ ಯಾದವ್:
2017ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿರುವ ಮತ್ತೋರ್ವ ಲೆಗ್‌ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡಾ ಇದೀಗ ಇದೇ ಮೊದಲ ಬಾರಿಗೆ ಟಿ20 ವಿಶ್ವಕಪ್‌ಗೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ.
5. ಮೊಹಮ್ಮದ್ ಸಿರಾಜ್:
ಹೈದರಾಬಾದ್ ಮೂಲದ ಅನುಭವಿ ವೇಗಿ ಮೊಹಮ್ಮದ್ ಸಿರಾಜ್ ಕೂಡಾ 2017ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದರೆ ಇದುವರೆಗೂ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಸಿರಾಜ್ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿದ್ದಾರೆ.
6. ಸಂಜು ಸ್ಯಾಮ್ಸನ್:
ಒಂದು ದಶಕದ ಹಿಂದೆಯೇ ಅಂದರೆ 2014ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್ ಆಡಲು ಅವಕಾಶ ಗಿಟ್ಟಿಸಿಕೊಂಡಿದ್ದಾರೆ.