- Home
- Sports
- Cricket
- 14 ವರ್ಷದ ವೈಭವ್ ಸೂರ್ಯವಂಶಿ ಇನ್ಯಾವತ್ತೂ ಅಂಡರ್-19 ವಿಶ್ವಕಪ್ ಆಡೋಕೆ ಸಾಧ್ಯವಿಲ್ಲ! ಶಾಕ್ ಕೊಟ್ಟ ಬಿಸಿಸಿಐ ರೂಲ್ಸ್
14 ವರ್ಷದ ವೈಭವ್ ಸೂರ್ಯವಂಶಿ ಇನ್ಯಾವತ್ತೂ ಅಂಡರ್-19 ವಿಶ್ವಕಪ್ ಆಡೋಕೆ ಸಾಧ್ಯವಿಲ್ಲ! ಶಾಕ್ ಕೊಟ್ಟ ಬಿಸಿಸಿಐ ರೂಲ್ಸ್
ಬೆಂಗಳೂರು: 2026ರ ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಿದೆ. 14 ವರ್ಷದ ವೈಭವ್ ಸೂರ್ಯವಂಶಿ, ಭಾರತ ಯುವ ಪಡೆ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವೈಭವ್ ಇನ್ನು ಮುಂದೆ ಅಂಡರ್-19 ವಿಶ್ವಕಪ್ ಆಡಲ್ಲ. ಯಾಕೆ ಹೀಗೆ?

ಅಂಡರ್-19 ವಿಶ್ವಕಪ್ ಗೆದ್ದ ಭಾರತ
ಭಾರತ ಅಂಡರ್-19 ತಂಡವು ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ಆರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತ ಯುವ ಪಡೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಭಾರತದ ಗೆಲುವಿನಲ್ಲಿ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದರು.
ಎಲ್ಲರ ಕಣ್ಣು ವೈಭವ್ ಸೂರ್ಯವಂಶಿ ಮೇಲಿತ್ತು!
ಅಂಡರ್-19 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲೇ ಎಲ್ಲರ ಕಣ್ಣು ಬಿಹಾರ ಮೂಲದ ವೈಭವ್ ಸೂರ್ಯವಂಶಿ ಮೇಲಿತ್ತು. ಏಕೆಂದರೆ, ತಾನಾಡಿದ ಎಲ್ಲಾ ಟೂರ್ನಿಯಲ್ಲೂ ಶತಕ ಸಿಡಿಸುವಲ್ಲಿ ಯಶಸ್ವಿಯಾಗಿದ್ದರು. ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಅತಿಕಿರಿಯ ಬ್ಯಾಟರ್ ಎನಿಸಿಕೊಂಡಿದ್ದರು. ಇದರ ಜತೆಗೆ ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಅಂಡರ್-19 ಏಷ್ಯಾಕಪ್ ಟೂರ್ನಿಯಲ್ಲೂ ವೈಭವ್ ಶತಕ ಚಚ್ಚಿದ್ದರು.
ಬಹುತೇಕ ಆಡಿದ ಎಲ್ಲಾ ಟೂರ್ನಿಗಳಲ್ಲೂ ಶತಕ ಚಚ್ಚಿರುವ ಬಿಹಾರದ ಪೋರ
ಇದೀಗ ವೈಭವ್ ಸೂರ್ಯವಂಶಿ, ಐಸಿಸಿ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಎದುರು ಸ್ಪೋಟಕ 175 ರನ್ ಸಿಡಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಮೂರು ಅರ್ಧಶತಕ ಹಾಗೂ ಒಂದು ಶತಕ ಸಹಿತ 439 ರನ್ ಚಚ್ಚಿ ಈ ಟೂರ್ನಿಯನ್ನು ಸ್ಮರಣೀಯವಾಗಿಸಿಕೊಂಡರು. 14 ವರ್ಷದ ವೈಭವ್ ಸೂರ್ಯವಂಶಿಗೆ ಇದೇ ಮೊದಲ ಹಾಗೂ ಕೊನೆಯ ಅಂಡರ್-19 ವಿಶ್ವಕಪ್. ಇದು ಅಚ್ಚರಿ ಎನಿಸಿದ್ರೂ ಸತ್ಯ.
ವೈಭವ್ ಆಸೆಗೆ ಅಡ್ಡಿಯಾದ ಬಿಸಿಸಿಐ ರೂಲ್ಸ್
ಹೌದು, ವೈಭವ್‌ಗೆ ಈಗ ಇನ್ನೂ 14 ವರ್ಷ ಮುಂದಿನ ಅಂಡರ್-19 ವಿಶ್ವಕಪ್ 2028ರಲ್ಲಿ ನಡೆಯಲಿದೆ. ಆಗ ವೈಭವ್‌ಗೆ ಇನ್ನೂ 16 ವರ್ಷ ಆಗಿರಲಿದೆ. ಹೀಗಾಗಿ ಆ ಟೂರ್ನಿಯಲ್ಲೂ ಆಡಬಹುದಲ್ವಾ ಅಂತ ನೀವು ಕೇಳಬಹುದು. ಆದರೆ ಬಿಸಿಸಿಐ 2016ರಲ್ಲಿ ಮಾಡಿದ ಒಂದು ಕಠಿಣ ರೂಲ್ಸ್, ಇದೀಗ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಅಂಡರ್-19 ವಿಶ್ವಕಪ್ ಆಡುವ ಕನಸಿಗೆ ತಣ್ಣೀರೆರಚುವಂತೆ ಮಾಡಿದೆ.
ಬಿಸಿಸಿಐ ರೂಲ್ಸ್ ಏನು?
ಬಿಸಿಸಿಐ ನಿಯಮದ ಪ್ರಕಾರ, ಒಬ್ಬ ಆಟಗಾರ ಒಮ್ಮೆ ಅಂಡರ್-19 ವಿಶ್ವಕಪ್ ಆಡಿದರೆ, ಮತ್ತೆ ಅದೇ ಟೂರ್ನಿಗೆ ಆತನನ್ನು ಪರಿಗಣಿಸುವುದಿಲ್ಲ. ಜೂನಿಯರ್ ಮಟ್ಟದಲ್ಲಿ ವ್ಯಾಪಕವಾಗಿದ್ದ ವಯಸ್ಸಿನ ಮೋಸವನ್ನು ತಡೆಯಲು ಬಿಸಿಸಿಐ 2016ರಿಂದ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ. ಹೆಚ್ಚು ಆಟಗಾರರಿಗೆ ಅವಕಾಶ ನೀಡುವುದು ಮತ್ತು ಹೊಸ ಪ್ರತಿಭೆಗಳನ್ನು ಹುಡುಕುವುದು ಕೂಡ ಇದರ ಉದ್ದೇಶವಾಗಿದೆ.
2016ರಲ್ಲೇ ಜಾರಿಗೆ ಬಂದ ಬಿಸಿಸಿಐ ಕಠಿಣ ನಿಯಮ
ಆಟಗಾರರು ಅಂಡರ್ 19 ಮಟ್ಟದಲ್ಲೇ ಉಳಿಯದೆ, ಸೀನಿಯರ್ ಮಟ್ಟಕ್ಕೆ ಬೆಳೆಯಲು ಪ್ರೇರೇಪಿಸುವುದು ಬಿಸಿಸಿಐನ ಗುರಿಯಾಗಿತ್ತು. ಹೀಗಾಗಿ, 2028ರಲ್ಲಿ ನಡೆಯುವ ಅಂಡರ್ 19 ವಿಶ್ವಕಪ್‌ನಲ್ಲಿ ವೈಭವ್‌ಗೆ ಆಡಲು ಅವಕಾಶ ಸಿಗುವುದಿಲ್ಲ. ಭಾರತದ ಮಾಜಿ ಆಟಗಾರ ಮತ್ತು ಕೋಚ್ ಆಗಿದ್ದ ರಾಹುಲ್ ದ್ರಾವಿಡ್ 2016ರಲ್ಲೇ ಈ ಸಲಹೆಯನ್ನು ಕೊಟ್ಟಿದ್ದರು. ಆಗಿನಿಂದಲೇ ಈ ನಿಯಮ ಜಾರಿಗೆ ಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

