ಇನ್‌ಸ್ಟಾ ಖಾತೆಯಿಂದ ಕಮರ್ಷಿಯಲ್ ಪೋಸ್ಟ್ ಡಿಲೀಟ್ ಕುರಿತು ಮೌನ ಮುರಿದ ವಿರಾಟ್
ವಿರಾಟ್ ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಕಮರ್ಷಿಲ್ ಪೋಸ್ಟ್‌ಗಳನ್ನು ರಿಮೂವ್ ಮಾಡಿದ್ದರು. ಯಾವುದೇ ಸೂಚನೆ ಇಲ್ಲದೆ ಕೊಹ್ಲಿ ಈ ನಿರ್ಧಾರ ತೆಗೆದುಕೊಂಡಿದ್ದರು. ತಮ್ಮ ಈ ನಿರ್ಧಾರದ ಕುರಿತು ಕೊಹ್ಲಿ ಕೊನೆಗೂ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅಭಿಮಾನಿ ಬಳಗವಿದೆ. ವಿಶ್ವದಲ್ಲೇ ಅತೀ ಹೆಚ್ಚು ಫಾಲೋವರ್ಸ್ ಹೊಂದಿದ ಕ್ರೀಡಾಪಟುಗಳ ಪೈಕಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಆದರೆ ಇತ್ತೀಚೆಗೆ ವಿರಾಟ್ ಕೊಹ್ಲಿ ತೆಗೆದುಕೊಂಡ ನಿರ್ಧಾರ ಹಲವರನ್ನು ಅಚ್ಚರಿಗೊಳಿಸಿತ್ತು. ಕೊಹ್ಲಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಿಂದ ಎಲ್ಲಾ ಕಮರ್ಷಿಯಲ್ ಪೋಸ್ಟ್ ತೆಗೆದು ಹಾಕಿದ್ದರು. ಕೋಟಿ ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದ ವಿರಾಟ್ ಕೊಹ್ಲಿ ಈ ನಿರ್ಧಾರ ಯಾಕೆ ಕೈಗೊಂಡಿದ್ದಾರೆ ಅನ್ನೋ ಕುತೂಹಲವೂ ಮನೆ ಮಾಡಿತ್ತು.
ಟೀಂ ಇಂಡಿಯಾ ಗೆಲುವು, ಟ್ರೋಫಿ, ಅನುಷ್ಕಾ ಜೊತೆಗಿನ ಫೋಟೋ ಸೇರಿದಂತೆ ತಮ್ಮ ವೈಯುಕ್ತಿಕ ಪೋಸ್ಟ್‌ಗಳನ್ನು ಕೊಹ್ಲಿ ಉಳಿಸಿಕೊಂಡು, ಇತರ ವಾಣಿಜ್ಯ ಪೋಸ್ಟ್‌ಗಳಳನ್ನು ತೆಗೆದುಹಾಕಿದ್ದು. ಇದೀಗ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದ ಕುರಿತು ಮಾತನಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಕುರಿತು ಕೊಹ್ಲಿ ಹೇಳಿದ್ದಾರೆ.
ಇನ್‌ಸ್ಟಾಗ್ರಾಂ ಖಾತೆ ಕುರಿತು ತೆಗೆದುಕೊಂಡ ನಿರ್ಧಾರದ ಕುರಿತು ಮೌನ ಮುರಿದಿರುವ ವಿರಾಟ್ ಕೊಹ್ಲಿ, ತಮ್ಮ ಖಾತೆಯನ್ನು ಮರುಸಂಘಟಿಸುವ ಅಗತ್ಯವಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ಸಮಯ ಕೊಡಲು ಸಾಧ್ಯವಿಲ್ಲ. ನಾಳೆ ಏನಾಗುತ್ತದೆ ಎಂದು ಯಾರಿಗೆ ಗೊತ್ತು? ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಕುರಿತು ಮಾತನಾಡಿದ್ದರು, ಸ್ಪಷ್ಟತೆ ಸಿಕ್ಕಿಲ್ಲ. ಮುಂದೆ ಯಾವುದೇ ಬ್ರ್ಯಾಂಡ್ ಪ್ರಮೋಶನ್ ಇನ್‌ಸ್ಟಾಗ್ರಾಂ ಮೂಲಕ ಮಾಡುವುದಿಲ್ಲವೇ? ಅನ್ನೋ ಪ್ರಶ್ನೆಗಳು ಎದ್ದಿದೆ. ಇದರ ನಡುವೆ ಕೊಹ್ಲಿ ಇತರರ ಬ್ರ್ಯಾಂಡ್ ಪ್ರಮೋಶನ್ ಮಾಡುವುದು ನಿಲ್ಲಿಸಿ ತಮ್ಮದೇ ಉತ್ಪನ್ನಗಳ ಬ್ರ್ಯಾಂಡ್ ಪ್ರಮೋಶನ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 271 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಹೀಗಾಗಿ ಹಲವು ಬ್ರ್ಯಾಂಡ್‌ಗಳು ಕೊಹ್ಲಿ ಇನ್‌ಸ್ಟಾಗ್ರಾಂ ಮೂಲಕ ಪ್ರಮೋಶನ್ ಒಪ್ಪಂದ ಮಾಡಿಕೊಳ್ಳುತ್ತಿದ್ದರು. ಪ್ರತಿ ಪೋಸ್ಟ್‌ಗೆ ಕೊಹ್ಲಿ ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದರು. ಇದೀಗ ಈ ಎಲ್ಲಾ ವಾಣಿಜ್ಯ ಚಟುವಟಿಕೆಯನ್ನು ದಿಢೀರ್ ಕೊಹ್ಲಿ ನಿಲ್ಲಿಸಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮತ್ತೊಂದು ವಿಶೇಷ ಅಂದರೆ ಕೊಹ್ಲಿ ಮೇಲೆ ಒತ್ತಡವೂ ಕೊಂಚ ಕಡಿಮೆಯಾಗಿದೆ. ಕಳೆದ ಎಲ್ಲಾ ಆವೃತ್ತಿಗಳಲ್ಲಿ ಆರ್‌ಸಿಬಿ ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಈ ಬಾರಿ ಈ ಅವಲಂಬನೆ ಕೊಂಚ ಕಡಿಮೆಯಾಗಿದೆ. ಕೊಹ್ಲಿ ಕಳೆದ ಆರು ಪಂದ್ಯಗಳಿಂದ 279 ರನ್ ಗಳಿಸಿದ್ದಾರೆ. ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ. 143 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ಅಪರೂಪದ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 100 ಅರ್ಧಶತಕಗಳನ್ನು ಪೂರ್ಣಗೊಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಮೊದಲ ಆಟಗಾರ. ವಾರ್ನರ್ 108 ಅರ್ಧಶತಕಗಳನ್ನು ಗಳಿಸಿದ್ದಾರೆ.