ಟೀಂ ಇಂಡಿಯಾಗೆ Debut ಮಾಡೋ ಮುನ್ನವೇ ಬ್ಯಾನ್ ಆಗ್ತಾರಾ 'ವಂಡರ್‌ಕಿಡ್' Vaibhav Suryavanshi?
Vaibhav Suryavanshi: ತ್ರಿಕೋನ ಸರಣಿಯ ಭಾಗವಾಗಿ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡ ಸೂಪರ್ ಓವರ್‌ನಲ್ಲಿ ಸೋತಿದೆ. ಪಂದ್ಯದ ನಂತರ ಭಾರತ, ಲಂಕಾ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ಮತ್ತು ತಳ್ಳಾಟ ನಡೆದಿದೆ. ಆಟಗಾರರು ಯಾಕೆ ಜಗಳವಾಡಿದರು? ಅಸಲಿಗೆ ಆಗಿದ್ದೇನು? ಈಗ ಬ್ಯಾನ್ ಆಗ್ತಾರಾ?

ಪಂದ್ಯದಲ್ಲಿ ಹಲವು ವಿವಾದ
ದಂಬುಲಾದಲ್ಲಿ ನಡೆದ ತ್ರಿಕೋನ ಸರಣಿಯ ಪಂದ್ಯದಲ್ಲಿ ಶ್ರೀಲಂಕಾ ಎ ಮತ್ತು ಭಾರತ ಎ ತಂಡಗಳ ಆಟಗಾರರ ನಡುವೆ ಜಗಳ ನಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 49.2 ಓವರ್‌ಗಳಲ್ಲಿ 265 ರನ್‌ಗಳಿಗೆ ಆಲೌಟ್ ಆಯಿತು. ನಂತರ ಗುರಿ ಬೆನ್ನಟ್ಟಿದ ಶ್ರೀಲಂಕಾ ಎ ತಂಡ ಕೂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಸರಿಯಾಗಿ 265 ರನ್ ಗಳಿಸಿತು. ಹೀಗಾಗಿ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಆದರೆ, ಇದಕ್ಕೂ ಮುನ್ನವೇ ಪಂದ್ಯದಲ್ಲಿ ಹಲವು ವಿವಾದಗಳು ನಡೆದಿದ್ದವು. ಶ್ರೀಲಂಕಾ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ವಿವಾದಾತ್ಮಕ ರನ್ ಬಂದಿತ್ತು. ಬ್ಯಾಟರ್ ಶಾಟ್ ಆಡದಿದ್ದರೂ, ಚೆಂಡು ಪ್ಯಾಡ್‌ಗೆ ತಗುಲಿ ಹೋದರೂ ಅಂಪೈರ್‌ಗಳು ರನ್ ನೀಡಿದ್ದಾರೆ ಎಂದು ಭಾರತದ ನಾಯಕ ತಿಲಕ್ ವರ್ಮಾ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು.
ಆಟದಲ್ಲಿ ಏನೇನಾಯ್ತು?
ಪಂದ್ಯ ಟೈ ಆದ ನಂತರ ಮೈದಾನದಲ್ಲಿ ಬೆಳಕು ಕಡಿಮೆಯಾಗಿದ್ದರಿಂದ ಸೂಪರ್ ಓವರ್ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಹೆಚ್ಚಾಯಿತು. ನಿಯಮಗಳ ಪ್ರಕಾರ, ಪರಿಸ್ಥಿತಿಗಳು ಉತ್ತಮವಾಗಿದ್ದರೆ ಮಾತ್ರ ಸೂಪರ್ ಓವರ್ ಆಡಬೇಕು. ಈ ಬಗ್ಗೆ ತಿಲಕ್ ವರ್ಮಾ ಅಂಪೈರ್‌ಗಳೊಂದಿಗೆ ಗಂಭೀರ ಚರ್ಚೆ ನಡೆಸಿದರು. ಅಂತಿಮವಾಗಿ ಎರಡೂ ತಂಡಗಳ ನಾಯಕರು ಒಪ್ಪಿದ್ದರಿಂದ ಅಂಪೈರ್‌ಗಳು ಸೂಪರ್ ಓವರ್‌ಗೆ ಗ್ರೀನ್ ಸಿಗ್ನಲ್ ನೀಡಿದರು. ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳಲ್ಲಿ ಟೆನ್ಷನ್ ಶುರುವಾಗಿತ್ತು.
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 16 ರನ್ ಗಳಿಸಿತು. ಆದರೆ ಈ ಆರು ಎಸೆತಗಳಲ್ಲೂ ಭಾರೀ ನಾಟಕೀಯ ಬೆಳವಣಿಗೆ ನಡೆಯಿತು. ಅರ್ಷದ್ ಖಾನ್ ಎಸೆದ ಒಂದು ಎಸೆತವನ್ನು ಅಂಪೈರ್ ವೈಡ್ ಎಂದು ಘೋಷಿಸಿದಾಗ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಲಂಕಾ ಬ್ಯಾಟರ್ ಅವಿಷ್ಕ ಫೆರ್ನಾಂಡೋ ಒಂದು ಭರ್ಜರಿ ಸಿಕ್ಸರ್ ಬಾರಿಸಿ ಒತ್ತಡ ಹೆಚ್ಚಿಸಿದರು. ಕೊನೆಯ ಎಸೆತದಲ್ಲಿ ಅವಿಷ್ಕ ಔಟಾದಾಗ, ಭಾರತೀಯ ಆಟಗಾರರು ಸಂಭ್ರಮಿಸುತ್ತಾ ಮೈದಾನದಿಂದ ಹೊರನಡೆಯಲು ಆರಂಭಿಸಿದರು. ಆದರೆ ಅಂಪೈರ್‌ಗಳು ಅದನ್ನು ನೋ ಬಾಲ್ ಎಂದು ಘೋಷಿಸಿದ್ದರಿಂದ ಎಲ್ಲರೂ ಮತ್ತೆ ವಾಪಸ್ ಬರಬೇಕಾಯಿತು. ಇದರಿಂದ ಲಂಕಾ ಸ್ಕೋರ್ 16ಕ್ಕೆ ತಲುಪಿತು. ಇದಕ್ಕೂ ಮುನ್ನ ಭಾರತದ ಇನ್ನಿಂಗ್ಸ್ ವೇಳೆ ವಿಪ್ರಜ್ ನಿಗಮ್ ಪಿಚ್‌ನ ಡೇಂಜರ್ ಜೋನ್‌ನಲ್ಲಿ ಎರಡು ಬಾರಿ ಓಡಿದ್ದರಿಂದ ಭಾರತಕ್ಕೆ 10 ರನ್‌ಗಳ ಪೆನಾಲ್ಟಿ ವಿಧಿಸಲಾಗಿತ್ತು. ಇದು ಕೂಡ ಪಂದ್ಯದ ಮೇಲೆ ತೀವ್ರ ಪರಿಣಾಮ ಬೀರಿತು.
ಯಾಕೆ ಗಲಾಟೆ ಆಯ್ತು?
ಗೆಲ್ಲಲು 17 ರನ್‌ಗಳ ಗುರಿಯೊಂದಿಗೆ ಭಾರತದ ಪರ ಸೂಪರ್ ಓವರ್ ಆಡಲು ವೈಭವ್ ಸೂರ್ಯವಂಶಿ ಮತ್ತು ಸೂರ್ಯಾಂಶ ಶೆಡ್ಗೆ ಕ್ರೀಸ್‌ಗೆ ಬಂದರು. ಲಂಕಾ ಬೌಲರ್ ಕುಗತಾಸ್ ಮಾತುಲಾನ್ ಅದ್ಭುತವಾಗಿ ಬೌಲಿಂಗ್ ಮಾಡಿದರು. ಸೂರ್ಯಾಂಶ ಮೊದಲ ಮೂರು ಎಸೆತಗಳಲ್ಲಿ ಕೇವಲ 3 ರನ್ ಗಳಿಸಲಷ್ಟೇ ಶಕ್ತರಾದರು. ನಂತರ ಸ್ಟ್ರೈಕ್‌ಗೆ ಬಂದ ವೈಭವ್ ಸೂರ್ಯವಂಶಿ ಒಂದು ಬೌಂಡರಿ ಮತ್ತು ಎರಡು ರನ್ ಗಳಿಸಿದರೂ, ಕೊನೆಯ ಎಸೆತದಲ್ಲಿ ಯಾರ್ಕರ್ ಎದುರಿಸಲಾಗದೆ ವಿಫಲರಾದರು. ಇದರಿಂದ ಭಾರತ ಸೂಪರ್ ಓವರ್‌ನಲ್ಲಿ ಕೇವಲ 9 ರನ್ ಗಳಿಸಿ, 7 ರನ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಇದಕ್ಕೂ ಮುನ್ನ ಮುಖ್ಯ ಪಂದ್ಯದಲ್ಲಿ ಸೂರ್ಯಾಂಶ ಶೆಡ್ಗೆ (66 ಎಸೆತಗಳಲ್ಲಿ 72) ಮತ್ತು ವಿಪ್ರಜ್ ನಿಗಮ್ (49 ಎಸೆತಗಳಲ್ಲಿ 51) ಅರ್ಧಶತಕ ಗಳಿಸಿ 8ನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವಾಡಿದರೂ ಫಲ ಸಿಗಲಿಲ್ಲ. ವೈಭವ್ 14 ಎಸೆತಗಳಲ್ಲಿ 21 ರನ್, ತಿಲಕ್ ವರ್ಮಾ 23 ಮತ್ತು ರುತುರಾಜ್ ಗಾಯಕ್ವಾಡ್ 32 ರನ್ ಗಳಿಸಿದ್ದರು. ಟೂರ್ನಿಯಲ್ಲಿ ಭಾರತಕ್ಕೆ ಇದು ಎರಡನೇ ಸೋಲು.
ಸೂಪರ್ ಓವರ್‌ನಲ್ಲಿ ಲಂಕಾ ಗೆಲ್ಲುತ್ತಿದ್ದಂತೆ, ಆ ದೇಶದ ಆಟಗಾರರು ವೈಭವ್ ಸೂರ್ಯವಂಶಿ ಮತ್ತು ಸೂರ್ಯಾಂಶ ಎದುರು ಬಂದು ಜೋರಾಗಿ ಕೂಗುತ್ತಾ ಸಂಭ್ರಮಿಸಿದರು. ಈ ವೇಳೆ ಲಂಕಾ ಆಟಗಾರ ವಿಷನ್ ಹಲಂಬಾ ಗೆ, ವೈಭವ್ ಬಳಿ ಬಂದು ಪ್ರಚೋದನಾಕಾರಿಯಾಗಿ “ಇದು ಐಪಿಎಲ್ ಅಲ್ಲ” ಹೇಳಿದರು. ಇದರಿಂದ ಕೋಪಗೊಂಡ ಯುವ ಓಪನರ್ ವೈಭವ್ ಸೂರ್ಯವಂಶಿ, ಆತನೊಂದಿಗೆ ವಾಗ್ವಾದಕ್ಕಿಳಿದು, ಲಂಕಾ ಆಟಗಾರನನ್ನು ಹಿಂದಕ್ಕೆ ದೂಡಿದರು. ಹಲಂಬಾ ಗೆ ಕೂಡ ವೈಭವ್‌ನನ್ನು ತಳ್ಳಿದ. ಜಗಳ ದೊಡ್ಡದಾಗುತ್ತಿದ್ದಂತೆ ಸೂರ್ಯಾಂಶ ಶೆಡ್ಜ್ ತಕ್ಷಣವೇ ಮಧ್ಯಪ್ರವೇಶಿಸಿ ವೈಭವ್‌ನನ್ನು ಪಕ್ಕಕ್ಕೆ ಎಳೆದುಕೊಂಡು ಹೋದರು. ಮೈದಾನದಿಂದ ಹೊರಹೋಗುವಾಗಲೂ ವೈಭವ್ ಲಂಕಾ ಆಟಗಾರರತ್ತ ಬೆರಳು ತೋರಿಸಿ ಕೋಪದಿಂದ ಮಾತನಾಡಿದ್ದು ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ನಂತರ ಎರಡೂ ತಂಡಗಳ ಆಟಗಾರರು ಹಸ್ತಲಾಘವ ಮಾಡಿ ಪಂದ್ಯವನ್ನು ಸೌಹಾರ್ದಯುತವಾಗಿ ಮುಗಿಸಿದರು.
ICC ನಿಯಮ ಏನು?
ಕ್ರಿಕೆಟ್ ಮೈದಾನದಲ್ಲಿ ಕೂಡ ಒಂದಿಷ್ಟು ನೀತಿ ನಿಯಮ ಇರುತತದೆ. ಇದು ಐಸಿಸಿ (ICC) ನೀತಿ ಸಂಹಿತೆಯ ಆರ್ಟಿಕಲ್ 2.12 ರ ಅಡಿಯಲ್ಲಿ ಈ ವಿಷಯ ಬರುತ್ತದೆ. ಅದರಂತೆ "ಅಂತರರಾಷ್ಟ್ರೀಯ ಪಂದ್ಯದಲ್ಲಿ ಕ್ರಿಕೆಟರ್ ಮಾತ್ರ ಅಲ್ಲಿನ ಅಂಪೈರ್, ರೆಫರಿ ಅಥವಾ ಬೇರೆ ವ್ಯಕ್ತಿ ಜೊತೆ ದೈಹಿಕವಾಗಿ ಅನುಚಿತವಾಗಿ ವರ್ತನೆ ಮಾಡುವಂತಿಲ್ಲ” ಎಂದಿದೆ.
ಓರ್ವ ಕ್ರಿಕೆಟರ್ ಮಾತ್ರ ಉದ್ದೇಶದಿಂದ ಅಥವಾ ಅಜಾಗರೂಕತೆಯಿಂದ ಇನ್ನೊಬ್ಬ ಕ್ರಿಕೆಟರ್ ಅಥವಾ ಅಧಿಕಾರಿ ಜೊತೆ ಓಡುವಾಗ ಅಥವಾ ಹೆಗಲಿಗೆ ಡಿಕ್ಕಿ ಹೊಡೆಯುವುದು ಈ ರೀತಿ ಮಾಡುವ ಹಾಗಿಲ್ಲ. ಈ ರೀತಿ ಆಗಿದ್ದರೆ ಉದ್ದೇಶಪೂರ್ವಕವೇ? ಅಜಾಗರೂಕತೆಯಿಂದ ಆಗಿತ್ತೇ? ನಿರ್ಲಕ್ಷ್ಯವೇ? ಈ ರೀತಿ ಮಾಡದೆ ಹಾಗೆ ಇರಬಹುದಿತ್ತೇ? ಈ ರೀತಿ ಆದಾಗ ಯಾವ ರೀತಿ ಫೋರ್ಸ್ ಮಾಡಲಾಗಿದೆ? ಈ ಘಟನೆಯಿಂದ ಏನಾದರೂ ಗಾಯ ಆಗಿದೆಯೇ? ಎಂಬುದೆಲ್ಲ ನೋಡಲಾಗುತ್ತದೆ.
ವೈಭವ್ ಸೂರ್ಯವಂಶಿ ಬ್ಯಾನ್ ಆಗ್ತಾರಾ?
ಆರ್ಟಿಕಲ್ 2.12 ರ ಹಂತ 1 ರ (Level 1) ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಇದೆಲ್ಲ ರೆಫರಿ ಹೇಳಿದಂತೆ ಆಗುತ್ತದೆ. ಕ್ರಿಕೆಟರ್‌ನ ಪಂದ್ಯದಲ್ಲಿ ಗರಿಷ್ಠ ಶೇಕಡಾ 50ರಷ್ಟು ದಂಡ ಹಾಕಲಾಗುವುದು. ಕ್ರಿಕೆಟರ್ ಶಿಸ್ತಿನ ದಾಖಲೆಗೆ ಒಂದು ಅಥವಾ ಎರಡು ಡಿಮೆರಿಟ್ ಅಂಕಗಳನ್ನು ಸೇರಿಸಲಾಗುತ್ತದೆ. ಅಷ್ಟೊಂದು ಸೀರಿಯಸ್ ಇಲ್ಲ ಅಂದ್ರೆ ಎಚ್ಚರಿಕೆ ಕೊಡಬಹುದು.
ಓರ್ವ ಕ್ರಿಕೆಟರ್ ನಾಲ್ಕು ಡಿಮೆರಿಟ್ ಪಾಯಿಂಟ್ ಸಿಕ್ಕಿದರೆ ಪಂದ್ಯದಿಂದ ಅಮಾನತು ಆಗಬಹುದು. ಈಗ ಪಂದ್ಯದ ರೆಫರಿ ಪ್ರದೀಪ್ ಜಯಪ್ರಕಾಶ್ ಏನು ಹೇಳ್ತಾರೆ ಎಂದು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

