ಐಪಿಎಲ್ ಮೆಗಾ ಹರಾಜಿನಲ್ಲಿದ್ದಾರೆ ಟಾಪ್ 5 ಮ್ಯಾಚ್ ಫಿನಿಶರ್ಸ್! ಇಬ್ಬರ ಮೇಲೆ ಕಣ್ಣಿಟ್ಟ ಆರ್‌ಸಿಬಿ
ಬೆಂಗಳೂರು: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ 5 ಸ್ಟಾರ್ ಮ್ಯಾಚ್ ಫಿನಿಶರ್‌ಗಳು ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಇಬ್ಬರು ಆಟಗಾರರ ಮೇಲೆ ಆರ್‌ಸಿಬಿ ಫ್ರಾಂಚೈಸಿ ಕಣ್ಣಿಟ್ಟಿದೆ.
ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು ಇದೇ ನವೆಂಬರ್ 24 ಹಾಗೂ 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಒಟ್ಟು 1574 ಮಂದಿ ಆಟಗಾರರು ಐಪಿಎಲ್ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಯಾವುದೇ ತಂಡವು ಪಂದ್ಯವನ್ನು ಗೆಲ್ಲಬೇಕೆಂದರೇ ಮ್ಯಾಚ್ ಫಿನಿಶರ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಈ 5 ಮ್ಯಾಚ್ ಫಿನಿಶರ್‌ಗಳನ್ನು ಖರೀದಿಸಲು ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಈ ಪೈಕಿ ಇಬ್ಬರು ಆಟಗಾರರ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ.
1. ಡೇವಿಡ್ ಮಿಲ್ಲರ್:
ದಕ್ಷಿಣ ಆಫ್ರಿಕಾ ತಂಡದ ಅನುಭವಿ ಸ್ಪೋಟಕ ಬ್ಯಾಟರ್ ಡೇವಿಡ್ ಮಿಲ್ಲರ್, ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಏಕಾಂಗಿಯಾಗಿ ಪಂದ್ಯವನ್ನು ಗೆಲುವಿನ ದಡ ಸೇರಿಸುವ ಕ್ಷಮತೆ ಹೊಂದಿರುವ ಮಿಲ್ಲರ್ ಅವರನ್ನು ಗುಜರಾತ್ ಫ್ರಾಂಚೈಸಿ ರಿಲೀಸ್ ಮಾಡಿದೆ. ಹೀಗಾಗಿ ಮಿಲ್ಲರ್ ಖರೀದಿಸಲು ಆರ್‌ಸಿಬಿ ಮಾಸ್ಟರ್ ಪ್ಲಾನ್ ಮಾಡಿದೆ.
2. ಅಶುತೋಷ್ ಶರ್ಮಾ:
ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಲು ಹಾತೊರೆಯುತ್ತಿರುವ ಅಶುತೋಷ್ ಶರ್ಮಾ, ಕಳೆದ ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ಪರ ಒಳ್ಳೆಯ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದರು. 11 ಪಂದ್ಯಗಳಲ್ಲಿ 167.26ರ ಸ್ಟ್ರೈಕ್‌ರೇಟ್‌ನಲ್ಲಿ 189 ರನ್ ಸಿಡಿಸಿದ್ದ ಅಶುತೋಷ್ ಶರ್ಮಾ ಖರೀದಿಸಲು ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.
3. ಲಿಯಾಮ್ ಲಿವಿಂಗ್‌ಸ್ಟೋನ್:
ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಎಂತಹ ಅಪಾಯಕಾರಿ ಬ್ಯಾಟರ್ ಎನ್ನುವುದನ್ನು ಕ್ರಿಕೆಟ್ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಕ್ಷಮತೆ ಹೊಂದಿರುವ ಲಿವಿಂಗ್‌ಸ್ಟೋನ್ ಖರೀದಿಸಲು ಆರ್‌ಸಿಬಿ ಈಗಾಗಲೇ ರಣತಂತ್ರ ಹೆಣೆದಿದೆ.
4. ಟಿಮ್ ಡೇವಿಡ್
ಸಿಂಗಾಪೂರ ಮೂಲದ ಆಸ್ಟ್ರೇಲಿಯಾ ಕ್ರಿಕೆಟಿಗ ಟಿಮ್ ಡೇವಿಡ್, ಮುಂಬೈ ಇಂಡಿಯನ್ಸ್ ಪರ ಹಲವಾರು ಸ್ಪೋಟಕ ಇನ್ನಿಂಗ್ಸ್ ಆಡಿದ್ದಾರೆ. ಕೆಳ ಕ್ರಮಾಂಕದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಬಲ್ಲ ದೈತ್ಯ ಕ್ರಿಕೆಟಿಗ ಟಿಮ್ ಡೇವಿಡ್ ಖರೀದಿಸಲು ಹಲವು ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ.
5. ಮಾರ್ಕಸ್ ಸ್ಟೋನಿಸ್:
ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್, ಕಳೆದ ಮೂರು ವರ್ಷಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು. ಇದೀಗ ಲಖನೌ ತಂಡವು ಸ್ಟೋನಿಸ್ ಅವರನ್ನು ರಿಲೀಸ್ ಮಾಡಿರುವುದರಿಂದ ಸ್ಟೋನಿಸ್ ಖರೀದಿಸಲು ಪೈಪೋಟಿ ಏರ್ಪಡುವ ಸಾಧ್ಯತೆಯಿದೆ.