"ಈತನಿಗೆ ಆಡೋಕ್ಕೆ ಬರಲ್ಲ, ಇಡೀ ತಂಡವನ್ನೇ ಕಿತ್ತೊಗೆಯಲು ಇದು ಸರಿಯಾದ ಸಮಯ": ಭಾರತ ಎದುರು ಸೋಲುಂಡ ಪಾಕ್ ಮೇಲೆ ಅಕ್ರಂ ಕಿಡಿ
ನ್ಯೂಯಾರ್ಕ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಲಾರದೇ ಸೋಲು ಕಂಡ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ಕಿಡಿಕಾರಿದ್ದಾರೆ. ಅದರಲ್ಲೂ ತಂಡದ ಕೆಲ ಆಟಗಾರರ ಮೇಲೆ ಅಕ್ರಂ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾನುವಾರ ಭಾರತ ನೀಡಿದ್ದ ಕೇವಲ 120 ರನ್ ಗುರಿ ಚೇಸ್ ಮಾಡಲು ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ವಿಫಲವಾಗಿದೆ. ಇದರ ಬೆನ್ನಲ್ಲೇ ಪಾಕ್ ತಂಡದ ಮೇಲೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಭಾರತ ನೀಡಿದ್ದ 120 ರನ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 113 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಪಾಕ್ ತಂಡವು 6 ರನ್ ಅಂತರದ ವಿರೋಚಿತ ಸೋಲು ಅನುಭವಿಸಿತು.
ಭಾರತ ನೀಡಿದ್ದ ಸಾಧಾರಣ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವತ್ತ ಪಾಕಿಸ್ತಾನ ತಂಡವು ದಿಟ್ಟ ಹೆಜ್ಜೆಯಿಟ್ಟಿತ್ತು. ಒಂದು ಹಂತದಲ್ಲಿ ಪಾಕ್‌ಗೆ 48 ಎಸೆತಗಳಲ್ಲಿ ಕೇವಲ 48 ರನ್ ಅಗತ್ಯವಿತ್ತು. 8 ವಿಕೆಟ್‌ಗಳು ಕೈಯಲ್ಲಿತ್ತು. ಹೀಗಿದ್ದೂ ಈ ಪಂದ್ಯವನ್ನು ಪಾಕಿಸ್ತಾನಕ್ಕೆ ಗೆಲ್ಲಲು ಸಾಧ್ಯವಾಗಲಿಲ್ಲ.
ಟೀಂ ಇಂಡಿಯಾ ಪರ ವೇಗಿಗಳಾದ ಜಸ್ಪ್ರೀತ್ ಬುಮ್ರಾ(14/3) ಹಾಗೂ ಹಾರ್ದಿಕ್ ಪಾಂಡ್ಯ(24/2) ಮಾರಕ ದಾಳಿ ನಡೆಸುವ ಮೂಲಕ ಪಂದ್ಯ ಟೀಂ ಇಂಡಿಯಾ ಪಾಲಾಗುವಂತೆ ಮಾಡುವಲ್ಲಿ ಯಶಸ್ವಿಯಾದರು. 31 ರನ್ ಗಳಿಸಿ ಮುನ್ನುಗ್ಗುತ್ತಿದ್ದ ಮೊಹಮ್ಮದ್ ರಿಜ್ವಾನ್ ಅವರನ್ನು ಬುಮ್ರಾ ಬಲಿ ಪಡೆದಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಎನಿಸಿತು.
ಇದೀಗ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಅಕ್ರಂ ತಮ್ಮ ಆಕ್ರೋಶ ಹೊರಹಾಕಿದ್ದು, ಇಡೀ ತಂಡವನ್ನೇ ಕಿತ್ತೊಗೆಯಬೇಕು ಹಾಗೂ ರಿಜ್ವಾನ್, ಫಖರ್ ಜಮಾನ್ ಸೇರಿದಂತೆ ಕೆಲ ಆಟಗಾರರಿಗೆ ಕ್ರಿಕೆಟ್ ಪರಿಜ್ಞಾನವೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಇವರೆಲ್ಲರೂ ಸುಮಾರು 10 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ. ಅವರಿಗೆ ಹೇಗೆ ಆಡಬೇಕು ಎಂದು ನಾವು ಹೇಳಬೇಕಿಲ್ಲ. ರಿಜ್ವಾನ್‌ಗಂತೂ ಗೇಮ್ ಅವೇರ್‌ನೆಸ್ ಇಲ್ಲ. ಬುಮ್ರಾಗೆ ಬೌಲಿಂಗ್ ಕೊಟ್ಟಿದ್ದಾರೆ ಎಂದರೆ ಆಗ ಎದುರಾಳಿ ಪಡೆ ವಿಕೆಟ್ ನಿರೀಕ್ಷೆಯಲ್ಲಿದೆ ಎಂದು ಅರ್ಥ ಮಾಡಿಕೊಳ್ಳಬೇಕಲ್ಲವೇ? ಆ ಸಂದರ್ಭದಲ್ಲಿ ಎಚ್ಚರಿಕೆಯಿಂದ ಆಡಬೇಕಿತ್ತು. ಆದರೆ ರಿಜ್ವಾನ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಕೈಚೆಲ್ಲಿದರು ಎಂದು ಅಕ್ರಂ ಹೇಳಿದ್ದಾರೆ.
ಇನ್ನು ಇಫ್ತಿಕಾರ್ ಅಹಮದ್‌ಗೆ ಕೇವಲ ಲೆಗ್ ಸೈಡ್‌ನಲ್ಲಿ ಒಂದೇ ರೀತಿ ಶಾಟ್ ಹೊಡೆಯುವುದಕ್ಕೆ ಬರೋದು. ಸಾಕಷ್ಟು ವರ್ಷಗಳಿಂದ ಆತ ತಂಡದಲ್ಲಿದ್ದರೂ ಇನ್ನೂ ಹೇಗೆ ಬ್ಯಾಟ್ ಮಾಡಬೇಕು ಎಂದು ಗೊತ್ತಿಲ್ಲ ಎಂದು ಅಕ್ರಂ ಹೇಳಿದ್ದಾರೆ.
ನಾನು ಹೋಗಿ ಫಖರ್ ಜಮಾನ್‌ಗೆ ಹೀಗೆ ಬ್ಯಾಟಿಂಗ್ ಮಾಡಿ ಎಂದು ಹೇಳಬೇಕಿಲ್ಲ. ಪಾಕಿಸ್ತಾನ ಆಟಗಾರರೆಲ್ಲಾ ತಾವು ಚೆನ್ನಾಗಿ ಆಡಲಿಲ್ಲ ಎಂದರೆ ಕೋಚ್‌ಗಳ ತಲೆದಂಡವಾಗುತ್ತದೆ, ನಮಗೇನೂ ಆಗುವುದಿಲ್ಲ ಅಂದುಕೊಂಡಿದ್ದಾರೆ. ಈಗ ಕೋಚ್‌ಗಳನ್ನು ಉಳಿಸಿಕೊಂಡು, ಇಡೀ ತಂಡವನ್ನೇ ಕಿತ್ತೊಗೆಯುವ ಸಮಯ ಬಂದಿದೆ ಎಂದು ವಾಸೀಂ ಅಕ್ರಂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ತಂಡವು 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮೊದಲೆರಡು ಸೋಲು ಕಾಣುವ ಮೂಲಕ ಸೂಪರ್ 8ರ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಿಕೊಂಡಿದೆ.
ಈಗಾಗಲೇ ಆತಿಥೇಯ ಯುಎಸ್‌ಎ ಎದುರು ಸೋಲು ಕಂಡು ಮುಖಭಂಗ ಅನುಭವಿಸಿದ್ದ ಪಾಕಿಸ್ತಾನ ಪಡೆಗೆ ಇದೀಗ ಬದ್ದ ಎದುರಾಳಿ ಭಾರತದ ಮೇಲಿನ ಸೋಲು ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದ್ದು, ಬಹುತೇಕ ಸೂಪರ್ 8ರ ಹಾದಿ ಭಗ್ನವಾದಂತೆ ಆಗಿದೆ.