ಭಾರತ ವಿರುದ್ದ ಹೀನಾಯ ಸೋಲಿಗೆ ತಲೆದಂಡ, ಸಂಪೂರ್ಣ ಶ್ರೀಲಂಕಾ ಕ್ರಿಕೆಟ್ ಮಂಡಳಿ ವಜಾ!
ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡ ಕೇವಲ 2 ಗೆಲುವಿನ ಮೂಲಕ ಬಹುತೇಕ ಹೊರಬಿದ್ದಿದೆ. ಈಗಾಗಲೇ 5 ಪಂದ್ಯದಲ್ಲಿ ಸೋತಿದೆ. ಆದರೆ ಭಾರತ ವಿರುದ್ಧದ ಸೋಲು ಲಂಕಾ ಅಭಿಮಾನಿಗಳಿಗೆ ಮಾತ್ರವಲ್ಲ, ಕ್ರೀಡಾ ಸಚಿವಾಲಯದ ಪಿತ್ತ ನೆತ್ತಿಗೇರಿಸಿದೆ. ಪರಿಣಾಮ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ, ಆಯ್ಕೆ ಸಮಿತಿ ಸೇರಿ ಎಲ್ಲಾ ಸದಸ್ಯರನ್ನು ವಜಾ ಮಾಡಿದೆ.
ಐಸಿಸಿ ವಿಶ್ವಕಪ್ 2023ರ ಟೂರ್ನಿಯಲ್ಲಿ ಶ್ರೀಲಂಕಾ ತಂಡ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಆಡಿದ 7 ಪಂದ್ಯದಲ್ಲಿ 5 ಸೋಲು ಅನುಭವಿಸಿದೆ. ಕೇವಲ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಆಫ್ಘಾನಿಸ್ತಾನ, ಪಾಕಿಸ್ತಾನ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಸೋಲನ್ನು ಶ್ರೀಲಂಕಾ ತಂಡ, ಅಭಿಮಾನಿಗಳು ಹಾಗೂ ಕ್ರಿಕೆಟ್ ಮಂಡಳಿ ಕ್ರೀಡಾ ಸ್ಪೂರ್ತಿಯಿಂದಲೇ ತೆಗೆದುಕೊಂಡಿತ್ತು. ಆದರೆ ಭಾರತದ ವಿರುದ್ಧದ ಸೋಲು ಮಾತ್ರ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಶ್ರೀಲಂಕಾ ಕೇವಲ 19.4 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್ ಆಗಿತ್ತು. ಭಾರತ 302 ರನ್ ಭರ್ಜರಿ ಗೆಲುವು ದಾಖಲಿಸಿತ್ತು. ಈ ಸೋಲಿನಿಂದ ಶ್ರೀಲಂಕಾದಲ್ಲಿ ಆಕ್ರೋಶ ಹೆಚ್ಚಾಗಿದೆ. ಇದೀಗ ಶ್ರೀಲಂಕಾ ಕ್ರೀಡಾ ಸಚಿವಾಲಯ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಅತ್ಯಂತ ಕಳಪೆ ಪ್ರದರ್ಶನ ನೀಡುವ ಮೂಲಕ ಶ್ರೀಲಂಕಾ ಕನಿಷ್ಠ ಹೋರಾಟ ನೀಡಿಲ್ಲ. ಹೀಗಾಗಿ ಆಯ್ಕೆ ಸಮಿತಿ, ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೇರಿದಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಎಲ್ಲಾ ಸದಸ್ಯರನ್ನು ವಜಾ ಮಾಡಲಾಗಿದೆ.
ಕ್ರೀಡಾ ಸಚಿವ ರೋಶನ್ ರಣಸಿಂಘೆ ಈ ನಿರ್ಧಾರ ಘೋಷಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಭ್ರಷ್ಟಾಚಾರ ನಡೆಸಿ ತಂಡ ಆಯ್ಕೆ ಮಾಡಿದೆ. ಸಂಪೂರ್ಣ ಮಂಡಳಿ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಹೀಗಾಗಿ ಎಲ್ಲಾ ಸದಸ್ಯರ ವಜಾಗೆ ಆದೇಶಿಸಲಾಗಿದೆ.
ಶ್ರೀಲಂಕಾ ಕ್ರಿಕೆಟ್ ಅಭಿಮಾನಿಗಳು ಕೂಡ ಮಂಡಳಿ ಮುಖ್ಯ ಕಚೇರಿ ಮುಂಭಾಗ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಅಭಿಮಾನಗಳು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ.
1996ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟ ಶ್ರೀಲಂಕಾ ನಾಯಕ ಅರ್ಜುನ್ ರಣತುಂಗರನ್ನು ಹಂಗಾಮಿ ಚೇರ್ಮೆನ್ ಆಗಿ ನೇಮಕ ಮಾಡಲಾಗಿದೆ. ಈ ಕುರಿತು ಸಚಿವ ರೋಶನ್ ರಣಸಿಂಘೆಆದೇಶ ಹೊರಡಿಸಿದ್ದಾರೆ.
7 ಮಂದಿ ಸದಸ್ಯರ ಹೊಸ ಸಮಿತಿ ರಚನೆ ಮಾಡಲಾಗಿದೆ. ಶ್ರೀಲಂಕಾ ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ ನೇತೃತ್ವದ ಈ ಸಮಿತಿ ಸದ್ಯ ಶ್ರೀಲಂಕಾ ಕ್ರಿಕೆಟ್ ಮಂಡಳಿ ಆಡಳಿತ ನೋಡಿಕೊಳ್ಳಲಿದೆ.