- Home
- Sports
- Cricket
- ಈ ಕಾರಣದಿಂದ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ಶ್ರೇಯಾಂಕಾ ಪಾಟೀಲ್! ಕೊನೆಗೆ ಮನಸ್ಸು ಬದಲಿಸಿದ್ದು ಹೇಗೆ?
ಈ ಕಾರಣದಿಂದ ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ಶ್ರೇಯಾಂಕಾ ಪಾಟೀಲ್! ಕೊನೆಗೆ ಮನಸ್ಸು ಬದಲಿಸಿದ್ದು ಹೇಗೆ?
ಬರ್ಮಿಂಗ್‌ಹ್ಯಾಮ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಪಾಕ್ ಎದುರಿನ ಪಂದ್ಯದ ಬಳಿಕ ಕನ್ನಡತಿ ಶ್ರೇಯಾಂಕಾ ಪಾಟೀಲ್, ಕ್ರಿಕೆಟ್‌ಗೆ ಗುಡ್ ಬೈ ಹೇಳಲು ಮುಂದಾಗಿದ್ದ ವಿಚಾರ ಬಾಯ್ಬಿಟ್ಟಿದ್ದಾರೆ.

ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ
ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬದ್ದ ಎದುರಾಳಿ ಪಾಕಿಸ್ತಾನ ಎದುರು ಭಾರತ ತಂಡವು ಭರ್ಜರಿ ಗೆಲುವು ದಾಖಲಿಸುವ ಮೂಲಕ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಶ್ರೇಯಾಂಕಾ ಪಾಟೀಲ್, ರಮೀನ್ ಶಮೀಮ್ ಬಾರಿಸಿದ ಚೆಂಡನ್ನು ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಖಿನ್ನತೆಗೊಳಗಾಗಿರುವ ವಿಚಾರ ಬಾಯ್ಬಿಟ್ಟ ಶ್ರೇಯಾಂಕಾ
ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಅವರು, ‘ಗಾಯದಿಂದ 1 ವರ್ಷಕ್ಕೂ ಹೆಚ್ಚಿನ ಕಾಲ ತಂಡದಿಂದ ದೂರ ಉಳಿಯಬೇಕಾಯಿತು. ಇದರಿಂದಾಗಿ ಖಿನ್ನತೆಗೆ ಒಳಗಾಗಿ ಕ್ರಿಕೆಟ್ ಬಿಡುವ ಬಗ್ಗೆ ಯೋಚಿಸಿದ್ದೆ’ ಎಂದು ತಾರಾ ಆಟಗಾರ್ತಿ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಹೇಳಿದ್ದಾರೆ.
14 ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಶ್ರೇಯಾಂಕಾ
ಆರ್‌ಸಿಬಿ ಮಹಿಳಾ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಶ್ರೇಯಾಂಕಾ ಪಾಟೀಲ್, 2024ರಿಂದ 2025ರ ಅವಧಿಯಲ್ಲಿ ಬರೋಬ್ಬರಿ 14 ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿದಿದ್ದರು. ಈ ವೇಳೆ ತಾವು ಡಿಪ್ರೆಷನ್‌ಗೆ ಒಳಗಾಗಿದ್ದಾಗಿ ತಿಳಿಸಿದ್ದಾರೆ.
ನಾನು ಇಷ್ಟ ಪಡುವ ಕೆಲಸವನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ
‘ನಾನು ಖಿನ್ನತೆಗೆ ಒಳಗಾಗಿಲ್ಲ ಅಥವಾ ಕ್ರಿಕೆಟ್ ತ್ಯಜಿಸುವ ಬಗ್ಗೆ ಯೋಚಿಸಿಲ್ಲ ಎಂದರೆ ಅದು ಸುಳ್ಳು. ಗಾಯಕ್ಕೆ ತುತ್ತಾಗಿದ್ದ ಒಂದು ಹಂತದಲ್ಲಿ ನನಗೆ ಹಾಗೆ ಅನಿಸುತ್ತಿತ್ತು. ಆದರೆ ಏನೇ ಇರಲಿ, ನಾನು ಆಟ ಆಡಲು ಇಷ್ಟಪಡುತ್ತೇನೆ ಎಂದು ನನಗೆ ಯಾವಾಗಲೂ ಅನಿಸುತ್ತಿತ್ತು. ಅದ್ದರಿಂದ ನಾನು ಇಷ್ಟಪಡುವ ಕೆಲಸವನ್ನು ಬಿಟ್ಟುಕೊಡಲು ಸಾಧ್ಯವಾಗಲಿಲ್ಲ. ಎಂದಿಗೂ ಬಿಟ್ಟುಕೊಡುವುದಿಲ್ಲ’ ಎಂದು ಹೇಳಿದರು.
ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬುಮ್ರಾ ಭೇಟಿ ಮಾಡಿದ ಶ್ರೇಯಾಂಕಾ ಪಾಟೀಲ್
ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡ ಶ್ರೇಯಾಂಕಾ ಪಾಟೀಲ್, ಅಲ್ಲೇ ಪ್ರಾಕ್ಟೀಸ್ ಮಾಡುತ್ತಿದ್ದ ಜಸ್ಪ್ರೀತ್ ಬುಮ್ರಾ ಅವರನ್ನು ಭೇಟಿ ಮಾಡಿ ಅವರಿಂದ ಹಲವು ವಿಚಾರಗಳಲ್ಲಿ ಮಾರ್ಗದರ್ಶನ ಪಡೆದಿರುವುದಾಗಿಯೂ ಈ ಹಿಂದೆ ಶ್ರೇಯಾಂಕಾ ಪಾಟೀಲ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಬುಮ್ರಾ ಅವರ ಬಳಿ ಹಲವು ಪ್ರಶ್ನೆಗಳನ್ನು ಕೇಳಿದ್ದ ಶ್ರೇಯಾಂಕಾ
ಒತ್ತಡದ ಸಂದರ್ಭದಲ್ಲಿ ಹೇಗೆ ಬೌಲಿಂಗ್ ಮಾಡಬೇಕು, ಯಾರ್ಕರ್ ಹಾಕುವುದನ್ನು ಪ್ರಾಕ್ಟೀಸ್ ಮಾಡುವುದು ಹೇಗೆ? ಅವರು ವೇಗದ ಬೌಲರ್, ನಾನು ಸ್ಪಿನ್ನರ್.ಹೀಗಿದ್ದೂ ಡೆತ್ ಓವರ್‌ನಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂದೆಲ್ಲಾ ಬುಮ್ರಾ ಅವರಲ್ಲಿ ಪ್ರಶ್ನೆಗಳನ್ನು ಕೇಳಿದ್ದೆ ಎಂದು ಶ್ರೇಯಾಂಕಾ ಪಾಟೀಲ್ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

