RCB's Shreyanka Patil & Mr Nags Dance to 'Na Drivera' Song ಆರ್‌ಸಿಬಿ ತಂಡದ ಸಹ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಹಾಗೂ ಮಿ.ನಾಗ್ಸ್ ಅವರು 'ನಾ ಡ್ರೈವರಾ' ಹಾಡಿಗೆ ಮಾಡಿದ ಡಾನ್ಸ್, ಮಂಕಾಗಿದ್ದ ಸ್ಮೃತಿಯನ್ನು ಮನಸಾರೆ ನಗುವಂತೆ ಮಾಡಿದೆ.
ಬೆಂಗಳೂರು (ಜ.30): ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಕಂಡು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಕೊನೆಗೂ ಗೆಲುವಿನ ಲಯ ಕಂಡುಕೊಂಡಿದೆ. ಇದು ನಾಯಕಿ ಸ್ಮೃತಿ ಮಂಧನಾ ಖುಷಿಗೂ ಕಾರಣವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಪಲಾಶ್ ಮುಚ್ಚಾಲ್, ಮದುವೆಯಂಥ ವೈಯಕ್ತಿಕ ವಿಚಾರಗಳಿಂದ ಮಂಕಾಗಿದ್ದ ಸ್ಮೃತಿ ಮಂಧನಾರನ್ನು ನಗಿಸಲು ಆರ್‌ಸಿಬಿಯ ಟಗರುಪುಟ್ಟಿ ಶ್ರೇಯಾಂಕಾ ಪಾಟೀಲ್ ಹಾಗೂ ಮಿ.ನಾಗ್ಸ್ ಯಶಸ್ವಿಯಾಗಿದ್ದಾರೆ.
ಆರ್‌ಸಿಬಿ ಇನ್‌ಸೈಡರ್ ಕಾರ್ಯಕ್ರಮವನ್ನು ಮಿ.ನಾಗ್ಸ್ ಆಗಿ ನಡೆಸಿಕೊಡುವ ಡ್ಯಾನಿಷ್ ಸೇಠ್, ಯಪಿ ವಾರಿಯರ್ಸ್ ಪಂದ್ಯಕ್ಕೂ ಮುನ್ನ ಕನ್ನಡತಿ ಶ್ರೇಯಾಂಕಾ ಪಾಟೀಲ್ ಜೊತೆ ಹರಟೆ ನಡೆಸಿದ್ದರು. 5 ನಿಮಿಷದ ವಿಡಿಯೋ ಕೊನೆಯಲ್ಲಿ ಇಬ್ಬರೂ ಕೂಡ ಬಿಗ್‌ಬಾಸ್ ಸ್ಪರ್ಧಿ ಮಾಳು ನಿಪನಾಳ ಅವರ ಫೇಮಸ್ ಸಾಂಗ್ 'ನಾ ಡ್ರೈವರಾ.. ನೀ ನನ ಲವರ್ರಾ..' ಅನ್ನೋ ಹಾಡಿಗೆ ಕ್ರಿಕೆಟ್ ಪಿಚ್ ರೋಲರ್‌ನಲ್ಲಿ ಡಾನ್ಸ್ ಮಾಡಿದ್ದಾರೆ. ಇದನ್ನು ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಯಲ್ಲಿ ಹಂಚಿಕೊಂಡಿದ್ದಾರೆ. ಟೀಮ್ ಪ್ರ್ಯಾಕ್ಟೀಸ್ ಟೈಮ್‌ನಲ್ಲಿ ಮೈದಾನದಲ್ಲಿಯೇ ಮಿ.ನಾಗ್ಸ್ ಹಾಗೂ ಶ್ರೇಯಾಂಕಾ ಪಾಟೀಲ್ ಅವರ ಡಾನ್ಸ್ ನೋಡಿ ಸ್ಮೃತಿ ಮಂಧನಾ ಮನಸಾರೆ ನಕ್ಕಿದ್ದಾರೆ.
ಈ ಪೋಸ್ಟ್ ಹಂಚಿಕೊಂಡಿರುವ ಆರ್‌ಸಿಬಿ ಅಕೌಂಟ್‌ನಲ್ಲಿ ಹಲವರು ಸ್ಮೃತಿ ಮಂಧನಾರ ಮುಖದಲ್ಲಿ ಮತ್ತೆ ನಗು ನೋಡುತ್ತಿರುವುದಕ್ಕೆ ಬಹಳ ಸಂತಸವಾಗುತ್ತಿದೆ ಎಂದಿದ್ದಾರೆ. ಕೊನೆಗೂ ಸ್ಮೃತಿಯನ್ನು ನಗಿಸಲು ಆಕೆಯ ಆತ್ಮೀಯ ಗೆಳತಿ ಶ್ರೇಯಾಂಕಾ ಪಾಟೀಲ್ ಅವರೇ ಬರಬೇಕಾಯಿತು ಎಂದಿದ್ದಾರೆ.
'ಶ್ರೇಯಾಂಕಾಳ ತಮಾಷೆಯ ಆಟ ಆನ್ ಪಾಯಿಂಟ್ ಇರಬಹುದು. ಆದರೆ, ನಮ್ಮ ಟಗರುಪಟ್ಟಿಗೆ ಮಿ.ನಾಗ್ಸ್ ಸುಲಭವಾಗಿ ಸಿಗೋದಿಲ್ಲ. ಈ ಆರ್‌ಸಿಬಿ ಇನ್‌ಸೈಡರ್ ಎಪಿಸೋಡ್ ಲಾಫ್ ರಾಯ್ಟ್..' ಎಂದು ಅರ್‌ಸಿಬಿ ಬರೆದುಕೊಂಡಿದ್ದು, ವಿಡಿಯೋದ ಎಂಡ್‌ನಲ್ಲಿ ಈ ಸೀಸನ್‌ನ ವೈರಲ್ ಕ್ಲಿಪ್ ಸಿಗಲಿದೆ ಎಂದು ತಿಳಿಸಿದೆ.
ವಿಡಿಯೋದ ಕೊನೆಯಲ್ಲಿ ಕೆಲ ನಿಮಿಷಗಳ ಕಾಲ ನಾಗ್ಸ್ ಹಾಗೂ ಶ್ರೇಯಾಂಕಾ ಪಾಟೀಲ್, ಮಾಳು ನಿಪನಾಳ ಅವರ ಫೇಮಸ್ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದಾರೆ. ಇದನ್ನು ಕೆಲ ಸೆಕೆಂಡ್‌ಗಳ ಕಾಲ ಬಳಸಿಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಗತ್ತು ಆರ್‌ಸಿಬಿಗೂ ಗೊತ್ತು ಎಂದು ಅಭಿಮಾನಿಗಳು ಈ ವಿಡಿಯೋವನ್ನು ಮೆಚ್ಚಿದ್ದಾರೆ.
ನಿಮಗೆ ಜನರು ಯಾವ ರೀತಿ ನೋಡೋದು ಇಷ್ಟ ಎಂದು ನಾಗ್ಸ್ ತಮಾಷೆಯಾಗಿ ಕೇಳಿದ್ದಾರೆ. ಬ್ಯಾಟರ್, ಬೌಲರ್ ಅಥವಾ ಇನ್‌ಫ್ಲುಯೆನ್ಸರ್? ಅನ್ನೋ ಪ್ರಶ್ನೆಗೆ ಅಷ್ಟೇ ತಮಾಷೆಯಾಗಿ ಉತ್ತರ ನೀಡುವ ಪ್ರಿಯಾಂಕಾ, ನನಗೆ ಇನ್‌ಫ್ಲುಯೆನ್ಸರ್ ಆಗೋದೇ ಇಷ್ಟ. ಕ್ರಿಕೆಟ್ ನನ್ನ ಜೀವನದ ಸ್ಮಾಲ್ ಪಾರ್ಟ್ ಅಷ್ಟೇ. ಇನ್‌ಫ್ಲುಯೆನ್ಸರ್ ಆದ್ರೆ ನಾನು ಡಿಫರೆಂಟ್ ಡಿಫರೆಂಟ್ ಆಗಿ ಕಾಣಬಹುದು. ಹೊಸ ಹೊಸ ಹೇರ್‌ಸ್ಟೈಲ್, ಮೇಕಪ್, ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
ಹಳದಿ ಬಣ್ಣಕ್ಕೆ ಟಾಂಗ್ ಕೊಟ್ಟ ಶ್ರೇಯಾಂಕಾ
ಇನ್ನು ಇಡೇ ಎಪಿಸೋಡ್‌ನಲ್ಲಿ ಹಳದಿ ಬಣ್ಣಕ್ಕೆ ಶ್ರೇಯಾಂಕಾ ಪಾಟೀಲ್ ಟಾಂಗ್ ಕೊಟ್ಟಿದ್ದನ್ನು ಆರ್‌ಸಿಬಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಳದಿ ಬಣ್ಣ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯನ್ನು ಪ್ರತಿನಿಧಿಸುತ್ತದೆ.


