- Home
- Sports
- Cricket
- Ind vs Eng 4th T20I: ಸಂಜು ಸ್ಯಾಮ್ಸನ್ ನಾಲ್ಕನೇ ಟಿ20 ಮ್ಯಾಚ್ ಆಡೋದು ಫಿಕ್ಸ್, ಹಾಗಿದ್ರೆ ಗೇಟ್‌ಪಾಸ್ ಯಾರಿಗೆ?
Ind vs Eng 4th T20I: ಸಂಜು ಸ್ಯಾಮ್ಸನ್ ನಾಲ್ಕನೇ ಟಿ20 ಮ್ಯಾಚ್ ಆಡೋದು ಫಿಕ್ಸ್, ಹಾಗಿದ್ರೆ ಗೇಟ್‌ಪಾಸ್ ಯಾರಿಗೆ?
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಮಹತ್ವದ ಪಂದ್ಯಕ್ಕೆ ಬ್ರಿಸ್ಟೊಲ್‌ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ, ಇಂದಿನ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.

ಭಾರತ-ಇಂಗ್ಲೆಂಡ್ ಟಿ20 ಸರಣಿಯಲ್ಲಿ ಆತಿಥೇಯರಿಗೆ ಮುನ್ನಡೆ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 2-0 ಅಂತರದ ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದರೇ, ಎರಡು ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರ ಎದುರು ಮೇಲುಗೈ ಸಾಧಿಸಿದೆ.
ಸರಣಿ ಸೋಲುವ ಭೀತಿಯಲ್ಲಿದೆ ಭಾರತ!
ಇದೀಗ ಸತತ ಎರಡು ಪಂದ್ಯಗಳನ್ನು ಸೋತಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಸರಣಿ ಸಮಬಲ ಸಾಧಿಸಬೇಕಿದ್ದರೇ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಟೀಮ್ ಮ್ಯಾನೇಜ್‌ಮೆಂಟ್ ಕಠಿಣ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದ್ದ, ಅನುಭವಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ತಿಲಕ್ ವರ್ಮಾಗೆ ಸಿಗುತ್ತಾ ರೆಸ್ಟ್?
ಹೀಗಾದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಉಪನಾಯಕರಾಗಿರುವ ತಿಲಕ್ ವರ್ಮಾ ಆಡುವ ಹನ್ನೊಂದರ ಬಳಗದಿಂದ ಹೊರಬೀಳುವ ಸಾಧ್ಯತೆಯಿದೆ. ಎಡಗೈ ಬ್ಯಾಟರ್ ತಿಲಕ್ ವರ್ಮಾ, ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಾ ಬಂದಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ತಿಲಕ್ ವರ್ಮಾಗೆ ವಿಶ್ರಾಂತಿ ಸಿಕ್ಕರೂ ಅಚ್ಚರಿಯೇನಿಲ್ಲ. ತಿಲಕ್ ವರ್ಮಾ ಕಳೆದ ಮೂರು ಪಂದ್ಯಗಳಲ್ಲಿ ಕೇವಲ 114.29ರ ಸ್ಟ್ರೈಕ್‌ರೇಟ್‌ನಲ್ಲಿ ಬರೀ 40 ರನ್ ಬಾರಿಸಿ ನಿರಾಸೆ ಮೂಡಿಸಿದ್ದಾರೆ.
ಸೂರ್ಯವಂಶಿ ಜತೆ ಸಂಜು ಓಪನ್ನಿಂಗ್?
ಇದೀಗ ಕೇರಳ ಮೂಲದ ಕ್ರಿಕೆಟಿಗ ಸಂಜು ಸ್ಯಾಮ್ಸನ್, ವೈಭವ್ ಸೂರ್ಯವಂಶಿ ಜತೆ ಆರಂಭಿಕನಾಗಿ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ. ಇಲ್ಲದಿದ್ದರೇ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯಬಹುದು ಎನ್ನಲಾಗುತ್ತಿದೆ. ಟೀಮ್ ಮ್ಯಾನೇಜ್‌ಮೆಂಟ್ ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಇಂಗ್ಲೆಂಡ್ ಇದುವರೆಗೂ ಭಾರತ ಎದುರು ಟಿ20 ಸರಣಿ ಗೆದ್ದಿಲ್ಲ
ಅಂದಹಾಗೆ ಇಂಗ್ಲೆಂಡ್ ತಂಡವು ಭಾರತ ಎದುರು ಇದುವರೆಗೂ ದ್ವಿಪಕ್ಷೀಯ ಟಿ20 ಸರಣಿಯನ್ನು ಗೆದ್ದಿಲ್ಲ. ಹೀಗಾಗಿ ಇದೀಗ ಭಾರತ ಎದುರು ಐತಿಹಾಸಿಕ ಸಾಧನೆ ಮಾಡಲು ಇಂಗ್ಲೆಂಡ್‌ಗೆ ಇನ್ನುಳಿದ ಎರಡು ಪಂದ್ಯಗಳಲ್ಲಿ ಇನ್ನೊಂದು ಗೆಲುವು ಬೇಕಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಗೆದ್ದು ಹ್ಯಾರಿ ಬ್ರೂಕ್ ಪಡೆ ಇತಿಹಾಸ ಬರೆಯಲು ತುದಿಗಾಲಿನಲ್ಲಿ ನಿಂತಿದೆ.
ಇಂಗ್ಲೆಂಡ್ ಎದುರಿನ 4ನೇ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿದೆ:
ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಶದೀಪ್ ಸಿಂಗ್, ವರುಣ್ ಚಕ್ರವರ್ತಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

