IPL ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಗೆದ್ದ 6 ಭಾರತೀಯರಿವರು: ಈ ಲಿಸ್ಟ್‌ನಲ್ಲಿದ್ದಾರೆ ಇಬ್ಬರು ಕನ್ನಡಿಗರು..!
ಬೆಂಗಳೂರು: ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಇದೀಗ ಯಶಸ್ವಿ 16 ಆವೃತ್ತಿಗಳನ್ನು ಮುಗಿಸಿ, 17ನೇ ಆವೃತ್ತಿಗೆ ಸಜ್ಜಾಗಿದೆ. 16 ಆವೃತ್ತಿಗಳ ಪೈಕಿ 6 ಆವೃತ್ತಿಗಳಲ್ಲಿ ಭಾರತೀಯ ಬ್ಯಾಟರ್‌ಗಳೇ ಅತಿಹೆಚ್ಚು ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸಿದ್ದಾರೆ. ನಾವಿಂದು ಆರೆಂಜ್ ಟ್ರೋಫಿ ಗೆದ್ದ ಆ 6 ಭಾರತೀಯರು ಯಾರು ಎನ್ನುವುದನ್ನು ನೋಡೋಣ ಬನ್ನಿ
ಭಾರತದ ಚುಟುಕು ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ 10 ಫ್ರಾಂಚೈಸಿಗಳು ಪ್ರಶಸ್ತಿಗಳಿಗಾಗಿ ಕಾದಾಡಲಿವೆ.
ಪ್ರತಿವರ್ಷ ಜರುಗುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಲ್ಲಾ ತಂಡಗಳು ಹಾಗೂ ತಂಡದ ಆಟಗಾರರು ಶಕ್ತಿ ಮೀರಿ ಪ್ರದರ್ಶನ ತೋರುವ ಮೂಲಕ ತಮ್ಮ ತಂಡವನ್ನು ಚಾಂಪಿಯನ್ ಮಾಡಲು ಕಾದಾಟ ನಡೆಸುತ್ತಾರೆ.
ಹೊಡಿಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್ ಟೂರ್ನಿಯಲ್ಲಿ ನಾವಿಂದು ಆವೃತ್ತಿಯೊಂದರಲ್ಲಿ ಅತಿಹೆಚ್ಚು ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ಜಯಿಸಿದ ಬ್ಯಾಟರ್‌ಗಳು ಯಾರು ಎನ್ನುವುದನ್ನು ನಾವಿಂದು ನೋಡೋಣ ಬನ್ನಿ
1. ಸಚಿನ್ ತೆಂಡುಲ್ಕರ್:
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಐಪಿಎಲ್ ಇತಿಹಾಸದಲ್ಲಿ ಆರೆಂಜ್ ಕ್ಯಾಪ್ ಜಯಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. 2010ರ ಐಪಿಎಲ್‌ನಲ್ಲಿ ತೆಂಡುಲ್ಕರ್ 14 ಪಂದ್ಯಗಳಿಂದ 618 ರನ್ ಸಿಡಿಸಿದ್ದರು.
2. ರಾಬಿನ್ ಉತ್ತಪ್ಪ:
ಕನ್ನಡಿಗ ರಾಬಿನ್ ಉತ್ತಪ್ಪ 2014ರ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸುವಾಗ ಆರೆಂಜ್ ಕ್ಯಾಪ್ ಜಯಿಸಿದ್ದರು. 2014ರ ಐಪಿಎಲ್‌ನಲ್ಲಿ ಉತ್ತಪ್ಪ 660 ರನ್ ಬಾರಿಸಿ ಆರೆಂಜ್ ಕ್ಯಾಪ್ ಜಯಿಸಿದ್ದರು.
3. ವಿರಾಟ್ ಕೊಹ್ಲಿ:
ಆರ್‌ಸಿಬಿ ಆಪತ್ಬಾಂಧವ ವಿರಾಟ್ ಕೊಹ್ಲಿ 2016ರ ಐಪಿಎಲ್ ಟೂರ್ನಿಯಲ್ಲಿ 4 ಶತಕ ಸಹಿತ 973 ರನ್ ಸಿಡಿಸುವ ಮೂಲಕ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು. ಇಂದಿಗೂ ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ.
4. ಕೆ ಎಲ್ ರಾಹುಲ್:
ಕನ್ನಡಿಗ ಕೆ ಎಲ್ ರಾಹುಲ್ 2020ರ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿದ್ದಾಗ ಭರ್ಜರಿ ಬ್ಯಾಟಿಂಗ್ ನಡೆಸಿ ಮಿಂಚಿದ್ದರು. ಪಂಜಾಬ್ ಪರ ರಾಹುಲ್ 670 ರನ್ ಸಿಡಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು
5. ಋತುರಾಜ್ ಗಾಯಕ್ವಾಡ್:
ಮಹಾರಾಷ್ಟ್ರ ಮೂಲದ ಪ್ರತಿಭಾನ್ವಿತ ಬ್ಯಾಟರ್ ಗಾಯಕ್ವಾಡ್ 2021ರ ಐಪಿಎಲ್ ಟೂರ್ನಿಯಲ್ಲಿ 635 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
6. ಶುಭ್‌ಮನ್ ಗಿಲ್:
ಗುಜರಾತ್ ಟೈಟಾನ್ಸ್ ತಂಡದ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ 2023ರ ಐಪಿಎಲ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನದ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಗಿಲ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 890 ರನ್ ಸಿಡಿಸಿದ್ದರು.