- Home
- Sports
- Cricket
- ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!
ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಇತಿಹಾಸ ಬರೆದ ರಿಷಭ್ ಪಂತ್: ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್!
ದುಬೆ: ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಐಸಿಸಿ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಪಂತ್, ಇದೀಗ ರ್‍ಯಾಂಕಿಂಗ್‌ನಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಹೆಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು 5 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿತು.
ಇನ್ನು ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ಪರಿಷ್ಕೃತ ಟೆಸ್ಟ್ ರ್‍ಯಾಂಕಿಂಗ್ ಪ್ರಕಟಗೊಂಡಿದೆ. ಈ ರ್‍ಯಾಂಕಿಂಗ್ ನಲ್ಲಿ ಟೀಂ ಇಂಡಿಯಾ ಉಪನಾಯಕ ರಿಷಭ್ ಪಂತ್ ಹೊಸ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನ ಎರಡು ಇನ್ನಿಂಗ್ಸ್‌ನಲ್ಲೂ ರಿಷಭ್ ಪಂತ್ ಆಕರ್ಷಕ ಶತಕ ಸಿಡಿಸಿದ್ದರು. ಇದರೊಂದಿಗೆ ಪಂತ್ ಟೆಸ್ಟ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡಿದ್ದಾರೆ.
ಹೆಡಿಂಗ್ಲೆ ಟೆಸ್ಟ್ ಮುಕ್ತಾಯದ ಬೆನ್ನಲ್ಲೇ ರಿಷಭ್ ಪಂತ್ ಐಸಿಸಿ ಟೆಸ್ಟ್ ಬ್ಯಾಟರ್‌ಗಳ ರ್‍ಯಾಂಕಿಂಗ್‌ನಲ್ಲಿ ವೃತ್ತಿಜೀವನ ಶ್ರೇಷ್ಠ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಇನ್ನು ಇದಷ್ಟೇ ಅಲ್ಲದೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ 800 ರೇಟಿಂಗ್ ಅಂಕ ಸಂಪಾದಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಹಿರಿಮೆಗೆ ಪಂತ್ ಪಾತ್ರರಾಗಿದ್ದಾರೆ.
ಸದ್ಯ ರಿಷಭ್ ಪಂತ್ 801 ರೇಟಿಂಗ್ ಅಂಕ ಸಂಪಾದಿಸಿದ್ದಾರೆ. ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್ 134 ರನ್ ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದ್ದರು.
ಇನ್ನು ಭಾರತ ಎದುರು ಮೊದಲ ಇನ್ನಿಂಗ್ಸ್‌ನಲ್ಲಿ 62 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ 149 ರನ್ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಬೆನ್ ಡಕೆಟ್ 5 ಸ್ಥಾನ ಜಿಗಿತ ಕಂಡು 8ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.