ಐಸಿಸಿ ಇತಿಹಾಸದಲ್ಲೇ ಇದುವರೆಗೂ ಯಾರು ಮಾಡದ ದಾಖಲೆ ಬರೆದ ರವೀಂದ್ರ ಜಡೇಜಾ
ಟೀಂ ಇಂಡಿಯಾ ಅಲ್ ರೌಂಡರ್ ರವೀಂದ್ರ ಜಡೇಜಾ, ಐಸಿಸಿ ಇತಿಹಾಸದಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆಯೊಂದನ್ನು ಬರೆದಿದ್ದಾರೆ. ಏನಿದು ಜಡೇಜಾ ಬರೆದ ಹೊಸ ದಾಖಲೆ?

ಭಾರತೀಯ ಕ್ರಿಕೆಟ್‌ಗೆ ದೀರ್ಘಕಾಲ ಸೇವೆ ಸಲ್ಲಿಸುತ್ತಿರುವ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಇದೀಗ ಅಪರೂಪದ ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 1151 ದಿನಗಳ ಕಾಲ ಸತತವಾಗಿ ನಂ.1 ಆಲ್‌ರೌಂಡರ್ ಆಗಿ ಮುಂದುವರೆದಿದ್ದಾರೆ. ಇದರೊಂದಿಗೆ ಐಸಿಸಿ ರ್ಯಾಂಕಿಂಗ್ಸ್ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಜಡೇಜಾ ತಮ್ಮ ಸ್ಥಿರ ಆಟ, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನದೊಂದಿಗೆ ಭಾರತ ತಂಡಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ್ದಾರೆ. ಹಲವು ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕಾಲ ನಂ.1 ಆಲ್‌ರೌಂಡರ್ ಆಗಿ ಉಳಿದಿರುವುದಕ್ಕೆ ಜಡೇಜಾ ಅವರನ್ನು ಶ್ಲಾಘಿಸಲಾಗುತ್ತಿದೆ.
ಇನ್ನು ಮತ್ತೊಂದೆಡೆ, ಜಡೇಜಾ ಭವಿಷ್ಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಭಾರತದ ದಿಗ್ಗಜ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ 2024ರ ಟಿ20 ವಿಶ್ವಕಪ್ ಗೆದ್ದ ನಂತರ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.
ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿ, “ಈ ಮೂವರು ಆಟಗಾರರು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ನಂತರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಿದೆ” ಎಂದು ಹೇಳಿದ್ದಾರೆ.
ಈ ಹೇಳಿಕೆಗಳ ಆಧಾರದ ಮೇಲೆ, ರವೀಂದ್ರ ಜಡೇಜಾ ಶೀಘ್ರದಲ್ಲೇ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ಈಗಾಗಲೇ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಜಡೇಜಾ ಮೇಲೆ ಇದೀಗ ಎಲ್ಲರ ಚಿತ್ತ ನೆಟ್ಟಿದೆ.
ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೆ 80 ಪಂದ್ಯಗಳ 118 ಇನ್ನಿಂಗ್ಸ್‌ಗಳಲ್ಲಿ 3370 ರನ್ ಗಳಿಸಿದ್ದಾರೆ. ಇದರಲ್ಲಿ 22 ಅರ್ಧಶತಕಗಳು ಮತ್ತು 4 ಶತಕಗಳು ಸೇರಿವೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ರವೀಂದ್ರ ಜಡೇಜಾ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.