92 ವರ್ಷಗಳಲ್ಲಿ ಇದೇ ಮೊದಲು..! ಇತಿಹಾಸ ಬರೆದ ಯಶಸ್ವಿ ಜೈಸ್ವಾಲ್
ರಾಂಚಿ: ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ರನ್ ರಾಶಿಯನ್ನೇ ಗುಡ್ಡೆಹಾಕುತ್ತಾ ಮುನ್ನುಗ್ಗುತ್ತಿದ್ದಾರೆ. ಇದೇ ವೇಳೆ 92 ವರ್ಷಗಳ ಭಾರತದ ಟೆಸ್ಟ್ ಇತಿಹಾಸದಲ್ಲಿ ಜೈಸ್ವಾಲ್ ಅಪರೂಪದ ದಾಖಲೆಯನ್ನೂ ಬರೆದಿದ್ದಾರೆ.
ಟೀಂ ಇಂಡಿಯಾ ಬ್ಯಾಟರ್ ಯಶಸ್ವಿ ಜೈಸ್ವಾಲ್, ಇದೀಗ ಟೆಸ್ಟ್ ಸರಣಿಯೊಂದರಲ್ಲಿ 600+ ರನ್ ಬಾರಿಸಿದ ಭಾರತದ ಮೊದಲ ಎಡಗೈ ಬ್ಯಾಟರ್ ಎನ್ನುವ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ವೇಳೆಯಲ್ಲಿ ಯಶಸ್ವಿ ಜೈಸ್ವಾಲ್ ಈ ಅಪರೂಪದ ಸಾಧನೆ ಮಾಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ತಂಡಗಳು ರಾಂಚಿಯಲ್ಲಿ 4ನೇ ಟೆಸ್ಟ್ ಪಂದ್ಯವನ್ನಾಡುತ್ತಿವೆ.
ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಹೀಗಿರುವಾಗ ಯಶಸ್ವಿ ಜೈಸ್ವಾಲ್ ತಾವಾಡಿದ 7ನೇ ಇನಿಂಗ್ಸ್‌ನಲ್ಲೇ ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ಸ್ಪಿನ್ನರ್ ಶೋಯೆಬ್ ಬಷೀರ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸುತ್ತಿದ್ದಂತೆಯೇ ಈ ಸಾಧನೆ ಮಾಡಿದರು. ಜೈಸ್ವಾಲ್ 55 ರನ್ ಬಾರಿಸಿದಾಗ ಈ ಟೆಸ್ಟ್ ಸರಣಿಯಲ್ಲಿ 600 ರನ್ ಗಡಿ ದಾಟುವಲ್ಲಿ ಯಶಸ್ವಿಯಾದರು.
ಟೀಂ ಇಂಡಿಯಾ ಯುವ ಪ್ರತಿಭಾನ್ವಿತ ಬ್ಯಾಟರ್ ಯಶಸ್ವಿ ಜೈಸ್ವಾಲ್ ಇದೀಗ ಟೆಸ್ಟ್ ಸರಣಿಯೊಂದರಲ್ಲಿ 600+ ರನ್ ಬಾರಿಸಿದ ಭಾರತದ 5ನೇ ಬ್ಯಾಟರ್ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ
ಈ ಮೂಲಕ 22 ವರ್ಷದ ಎಡಗೈ ಬ್ಯಾಟರ್ ಜೈಸ್ವಾಲ್ ಇದೀಗ, ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್ ಹಾಗೂ ದಿಲಿಪ್ ಸರ್‌ದೇಸಾಯಿ ಅವರಂತ ದಿಗ್ಗಜ ಬ್ಯಾಟರ್‌ಗಳ ಸಾಲಿಗೆ ಸೇರಿದ್ದಾರೆ.
ಇನ್ನು ಟೀಂ ಇಂಡಿಯಾ ಮಾಜಿ ನಾಯಕರಾದ ವಿರಾಟ್ ಕೊಹ್ಲಿ, ಸುನಿಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಎರಡೆರಡು ಬಾರಿ ಟೆಸ್ಟ್ ಸರಣಿಯಲ್ಲಿ 600+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಮಾತ್ರ ಟೆಸ್ಟ್ ಸರಣಿಯಲ್ಲಿ 700+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ. ಸನ್ನಿ ಎರಡು ಬಾರಿ ಟೆಸ್ಟ್ ಸರಣಿಯಲ್ಲಿ 700+ ರನ್ ಸಾಧನೆ ಮಾಡಿದ್ದಾರೆ.