ಐಪಿಎಲ್ 2025; ಅಶ್ವಿನ್, ಬಟ್ಲರ್, ಚಹಲ್‌ರಂತ ಸ್ಟಾರ್ ಆಟಗಾರರನ್ನೇ ಕೈಬಿಟ್ಟ ರಾಜಸ್ಥಾನ ರಾಯಲ್ಸ್!
ಐಪಿಎಲ್ 2025 ಮೆಗಾ ಹರಾಜಿನ ಮುನ್ನ ರಾಜಸ್ಥಾನ ರಾಯಲ್ಸ್ ತಂಡ ಜೋಸ್ ಬಟ್ಲರ್, ಯಜುವೇಂದ್ರ ಚಹಲ್ ಸೇರಿದಂತೆ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದೆ. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಕೆಲ ಆಟಗಾರರನ್ನು ಉಳಿಸಿಕೊಂಡಿದೆ.
ಐಪಿಎಲ್ 2025 ಮೆಗಾ ಹರಾಜಿನ ಮುನ್ನ ಪ್ರತಿ ತಂಡದಲ್ಲೂ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರ ಪಟ್ಟಿ ನಿನ್ನೆ ಬಿಡುಗಡೆಯಾಗಿದೆ. ಹೈದರಾಬಾದ್ ತಂಡದಲ್ಲಿ ಹೆನ್ರಿಕ್ ಕ್ಲಾಸೆನ್ ಅವರನ್ನು 23 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿಯನ್ನು 21 ಕೋಟಿ ರೂ.ಗೆ ಆರ್‌ಸಿಬಿ ಉಳಿಸಿಕೊಂಡಿದೆ. ಭಾರತ ತಂಡದ ವಿಕೆಟ್ ಕೀಪರ್ಗಳಾದ ಕೆಎಲ್ ರಾಹುಲ್, ಇಶಾನ್ ಕಿಶನ್ ಮತ್ತು ರಿಷಭ್ ಪಂತ್ ಅವರನ್ನು ಅವರ ತಂಡಗಳು ರಿಲೀಸ್ ಮಾಡಿವೆ.
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ನಡೆದ ಬದಲಾವಣೆಗಳ ಬಗ್ಗೆ ತಿಳಿಯೋಣ ಬನ್ನಿ. ತಂಡದ ನಾಯಕ ಸಂಜು ಸ್ಯಾಮ್ಸನ್, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರನ್ನು ತಲಾ 18 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ರಿಯಾನ್ ಪರಾಗ್ ಮತ್ತು ಧ್ರುವ್ ಜುರೆಲ್ ಅವರನ್ನು 14 ಕೋಟಿ ರೂ.ಗೆ ಮತ್ತು ಶಿಮ್ರಾನ್ ಹೆಟ್ಮೇಯರ್ ಅವರನ್ನು 11 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಸಂದೀಪ್ ಶರ್ಮಾ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಆದರೆ ಅಚ್ಚರಿ ಎನ್ನುವಂತೆ ಸ್ಫೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್ ಅವರನ್ನು ತಂಡದಿಂದ ರಿಲೀಸ್ ಮಾಡಿದೆ.
ರೀಟೈನ್ ಮಾಡಿಕೊಂಡ ಆಟಗಾರರಿಗಾಗಿ ರಾಜಸ್ಥಾನ ರಾಯಲ್ಸ್ ಬರೋಬ್ಬರಿ 79 ಕೋಟಿ ರೂ. ಖರ್ಚು ಮಾಡಿದೆ. ಮೆಗಾ ಹರಾಜಿಗೆ ಕೇವಲ 41 ಕೋಟಿ ರೂ. ಕೈಯಲ್ಲಿಟ್ಟುಕೊಂಡಿದೆ. ಆದರೂ, ಬಟ್ಲರ್ ಮತ್ತು ಚಹಲ್ ಅವರನ್ನು ಮೆಗಾ ಹರಾಜಿನಲ್ಲಿ ಮತ್ತೆ ಖರೀದಿಸಲು ರಾಜಸ್ಥಾನ್ ಪ್ರಯತ್ನಿಸಬಹುದು. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್, ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ ರಾಜಸ್ಥಾನ ರಾಯಲ್ಸ್ ತಂಡದಿಂದ ಬಿಡುಗಡೆಯಾದ ಪ್ರಮುಖ ಆಟಗಾರರು.
ಇನ್ನು ಜುರೆಲ್ರನ್ನು ಉಳಿಸಿಕೊಂಡಿರುವುದು ಮತ್ತೊಂದು ವಿಶೇಷ. 2022ರ ಆಟಗಾರರ ಹರಾಜಿನಲ್ಲಿ 20 ಲಕ್ಷ ರೂ.ಗೆ ಧ್ರುವ್ ಜುರೆಲ್ ರಾಜಸ್ಥಾನ ತಂಡ ಸೇರಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾದಾರ್ಪಣೆ ಮಾಡಿ ಭಾರತ ತಂಡದಲ್ಲಿ ಮಿಂಚಿದ ಜುರೆಲ್ ಈಗ ಟೆಸ್ಟ್ ತಂಡದ ಬ್ಯಾಕ್‌ಅಪ್ ವಿಕೆಟ್ ಕೀಪರ್ ಆಗಿದ್ದಾರೆ. ಬಟ್ಲರ್ ಬಿಡುಗಡೆಯಿಂದಾಗಿ, ಜುರೆಲ್ಗೆ ಆರಂಭಿಕ ಆಟಗಾರನಾಗಿ ಅವಕಾಶ ಸಿಗಬಹುದು. ಜೋಸ್ ಬಟ್ಲರ್ ರಿಲೀಸ್ ಆಗಿರುವ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ಗೆ ಬ್ಯಾಕ್‌ಅಪ್ ಆಗಿ ಜುರೆಲ್ರನ್ನು ಬಿಡುಗಡೆ ಮಾಡುವುದು ಬುದ್ಧಿವಂತ ನಿರ್ಧಾರವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳೆದ ಐದು ವರ್ಷಗಳಿಂದ ಭಾರತಕ್ಕಾಗಿ ಆಡದ ಕಾರಣ ರಾಜಸ್ಥಾನ ರಾಯಲ್ಸ್ ಸಂದೀಪ್ ಶರ್ಮಾ ಅವರನ್ನು ಅನ್ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಳ್ಳಲು ಸಾಧ್ಯವಾಯಿತು. ಕಳೆದ ಋತುವಿನಲ್ಲಿ ರಾಜಸ್ಥಾನ್ ಪ್ಲೇ ಆಫ್ ತಲುಪಲು ಸಂಜು (531 ರನ್) ಮತ್ತು ಪರಾಗ್ (573 ರನ್) ಆಟ ಪ್ರಮುಖ ಪಾತ್ರ ವಹಿಸಿತು. 2023ರ ಆಟಗಾರರ ಹರಾಜಿನಲ್ಲಿ ಯಾರೂ ಆಯ್ಕೆ ಮಾಡಿಕೊಳ್ಳದ ಸಂದೀಪ್ ಶರ್ಮಾ ಅವರನ್ನು 50 ಲಕ್ಷ ರೂ. ನೀಡಿ ರಾಜಸ್ಥಾನ್ ತಂಡಕ್ಕೆ ತೆಗೆದುಕೊಳ್ಳಲಾಗಿತ್ತು. ಕಳೆದ ಋತುವಿನಲ್ಲಿ 13 ವಿಕೆಟ್ಗಳೊಂದಿಗೆ ಸಂದೀಪ್ ಉತ್ತಮ ಪ್ರದರ್ಶನ ನೀಡಿದ್ದರು.
ಕಳೆದ ಋತುವಿನಲ್ಲಿ ಹೆಚ್ಚಾಗಿ ಮಿಂಚದಿದ್ದರೂ, ಬಟ್ಲರ್ 359 ರನ್ಗಳೊಂದಿಗೆ ಒಂದಷ್ಟು ಉತ್ತಮ ಆಟ ಪ್ರದರ್ಶಿಸಿದ್ದರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಚಹಲ್, ಕಳೆದ ಋತುವಿನಲ್ಲಿ 18 ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲಿ ಮಿಂಚಿದ್ದರು. 2022ರ ಆಟಗಾರರ ಹರಾಜಿನಲ್ಲಿ ಬೆಂಗಳೂರು ಬಿಡುಗಡೆ ಮಾಡಿದ ಚಹಲ್ ಅವರನ್ನು 6.5 ಕೋಟಿಗೆ ರಾಜಸ್ಥಾನ ತಂಡಕ್ಕೆ ತೆಗೆದುಕೊಂಡಿತ್ತು.
ರಾಜಸ್ಥಾನ್ ರಾಯಲ್ಸ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ:
ಜೋಸ್ ಬಟ್ಲರ್, ಕುಲ್ದೀಪ್ ಸೇನ್, ರವಿಚಂದ್ರನ್ ಅಶ್ವಿನ್ ಡೊನೊವನ್ ಫೆರೆರಾ, ಗುಣಾಲ್ ರಥೋರ್, ನವದೀಪ್ ಸೈನಿ, ಟ್ರೆಂಟ್ ಬೋಲ್ಟ್, ಯಜುವೇಂದ್ರ ಚಹಲ್, ಆವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್ ಕ್ಯಾಡ್ಮೋರ್, ಅಬಿದ್ ಮುಷ್ತಾಕ್, ನಂದ್ರೆ ಬರ್ಗರ್, ಧನುಷ್ ಕೊಟ್ಯಾನ್, ಪ್ರಸಿದ್ಧ್ ಕೃಷ್ಣ, ಕೇಶವ್ ಮಹಾರಾಜ್, ಆಡಮ್ ಜಂಪಾ.