IPL 2025 RCB vs LSG: ಇಂದಿನ ಮ್ಯಾಚ್ ಗೆಲ್ಲೋರು ಯಾರು?
ಐಪಿಎಲ್ ಕ್ರಿಕೆಟ್‌ನಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಆರ್‌ಸಿಬಿ ತಂಡಗಳು ಇಂದು ಮುಖಾಮುಖಿಯಾಗಲಿವೆ. ಗೆದ್ದರೆ ಆರ್‌ಸಿಬಿ ಟಾಪ್ 2 ಸ್ಥಾನಕ್ಕೆ ಲಗ್ಗೆ ಇಡಲಿದೆ. ಇಂದಿನ ಪಂದ್ಯ ಗೆಲ್ಲೋರು ಯಾರು? ನೋಡೋಣ ಬನ್ನಿ

ಇಂದಿನ ಪಂದ್ಯ ಗೆಲ್ಲೋರು ಯಾರು?
ಐಪಿಎಲ್ 2025 ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಮುಂಬೈ ಇಂಡಿಯನ್ಸ್, ಆರ್‌ಸಿಬಿ, ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿವೆ. ಪಂಜಾಬ್ ಟಾಪ್ ಸ್ಥಾನ ಖಚಿತಪಡಿಸಿಕೊಂಡಿದೆ. 2ನೇ ಸ್ಥಾನಕ್ಕೆ ಗುಜರಾತ್ ಮತ್ತು ಆರ್‌ಸಿಬಿ ಪೈಪೋಟಿ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿಗೆ ನಿರ್ಣಾಯಕ ಪಂದ್ಯ ಇಂದು ನಡೆಯಲಿದೆ.
ಲಕ್ನೋ ಸೂಪರ್ ಜೈಂಟ್ಸ್-ಆರ್‌ಸಿಬಿ ಮುಖಾಮುಖಿ
ಇಂದು ರಾತ್ರಿ 7.30ಕ್ಕೆ ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈಗಾಗಲೇ ಪ್ಲೇ ಆಫ್ ಖಚಿತಪಡಿಸಿಕೊಂಡಿರುವ ಆರ್‌ಸಿಬಿ ಇಂದಿನ ಪಂದ್ಯ ಗೆದ್ದರೆ 2ನೇ ಸ್ಥಾನ ಪಡೆಯಲಿದೆ. ಹೆಚ್ಚಿನ ರನ್‌ಗಳ ಅಂತರದಿಂದ ಗೆದ್ದರೆ ಪಂಜಾಬ್ ಕಿಂಗ್ಸ್ ಅನ್ನು ರನ್‌ರೇಟ್‌ನಲ್ಲಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರಬಹುದು.
ಆರ್‌ಸಿಬಿ ತಂಡದಲ್ಲಿ ಜೋಸ್ ಹೇಜಲ್‌ವುಡ್
ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆರ್‌ಸಿಬಿ ಹೀನಾಯವಾಗಿ ಸೋತಿತ್ತು. ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿದರೂ ನಾಯಕ ರಜತ್ ಪಾಟೀದಾರ್ ವೈಫಲ್ಯ ಅನುಭವಿಸಿದರು. ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಕಳೆದ 2 ಪಂದ್ಯಗಳಲ್ಲಿ ಹೇಜಲ್‌ವುಡ್ ಇಲ್ಲದ ಕಾರಣ ತಂಡ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದೆ. ಇಂದಿನ ಪಂದ್ಯದಲ್ಲಿ ಹೇಜಲ್‌ವುಡ್ ಆಡಲಿರುವುದು ಆರ್‌ಸಿಬಿಗೆ ಬಲ ತುಂಬಲಿದೆ.
ಲಖನೌ ಪಿಚ್ ಹೇಗಿದೆ?
ಲಖನೌ ತಂಡಕ್ಕೆ ಈಗ ಏನೂ ಕಳೆದುಕೊಳ್ಳುವುದಿಲ್ಲವಾದ್ದರಿಂದ ಮೈ ಚಳಿಬಿಟ್ಟು ಆಡಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್‌ಗೆ ಆಘಾತ ನೀಡಿದ್ದ ಲಖನೌ ಆರ್‌ಸಿಬಿಗೂ ಶಾಕ್ ನೀಡಲು ಕಾಯುತ್ತಿದೆ. ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್ ಮತ್ತು ನಿಕೋಲಸ್ ಪೂರನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲಖನೌದ ಏಕನಾ ಕ್ರೀಡಾಂಗಣದ ಪಿಚ್ ನಿಧಾನಗತಿಯದ್ದಾಗಿದ್ದು, ಸ್ಪಿನ್ನರ್‌ಗಳಿಗೆ ನೆರವಾಗಲಿದೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಈ ಟ್ರೆಂಡ್ ಬದಲಾಗಿದ್ದು, ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಮೂರು ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್‌ಗಳು ಬಂದಿವೆ. ಇಂದಿನ ಪಂದ್ಯದ ಪಿಚ್ ಕೂಡ ಹಾಗೆಯೇ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಯಾವ ತಂಡ ಹೆಚ್ಚು ಗೆಲುವು ಸಾಧಿಸಿದೆ?
ಎಲ್‌ಎಸ್‌ಜಿ ಮತ್ತು ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಹವಾಮಾನವು ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. Accuweather.com ಪ್ರಕಾರ, ಲಕ್ನೋದಲ್ಲಿ ಮಳೆಯಾಗುವ ಸಾಧ್ಯತೆ ಕೇವಲ 7% ಮಾತ್ರ. ಹೀಗಾಗಿ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಎರಡನೇ ಇನ್ನಿಂಗ್ಸ್‌ನಲ್ಲಿ ಸ್ವಲ್ಪ ಸಮಯದವರೆಗೆ ಇಬ್ಬನಿ ಬೀಳಬಹುದು. ಲಖನೌ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್‌ಸಿಬಿ 3 ಪಂದ್ಯಗಳನ್ನು ಮತ್ತು ಲಖನೌ 2 ಪಂದ್ಯಗಳನ್ನು ಗೆದ್ದಿದೆ.
ಎರಡೂ ತಂಡಗಳ ಪ್ಲೇಯಿಂಗ್ XI
ಆರ್‌ಸಿಬಿ: ರಜತ್ ಪಾಟೀದಾರ್ (ನಾಯಕ), ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್‌ವಾಲ್, ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಮತ್ತು ಯಶ್ ದಯಾಳ್.
ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ (ನಾಯಕ), ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ರವಿ ಬಿಷ್ಣೋಯ್, ದಿಕ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್ ಮತ್ತು ಆಕಾಶ್ ದೀಪ್.
ಆರ್‌ಸಿಬಿ ಗೆಲ್ಲೋ ಸಾಧ್ಯತೆ ಹೆಚ್ಚು
ಸದ್ಯದ ಉಭಯ ತಂಡಗಳ ಪ್ರದರ್ಶನ ಗಮನಿಸಿದ್ರೆ ತವರಿನಲ್ಲಿ ಲಖನೌ ಬಲಿಷ್ಠವಾಗಿದೆ. ಆದರೆ ಮೊದಲ ಕ್ವಾಲಿಫೈಯರ್ ಹಂತಕ್ಕೇರಲು ಆರ್‌ಸಿಬಿಗೆ ಇದು ಸುವರ್ಣಾವಕಾಶವಾಗಿರುವುದರಿಂದ ಹಾಗೂ ಹೇಜಲ್‌ವುಡ್ ಎಂಟ್ರಿಯಿಂದ ಆರ್‌ಸಿಬಿ ಬಲಿಷ್ಠವಾಗಿದ್ದು, ಬೆಂಗಳೂರು ಇಂದಿನ ಪಂದ್ಯ ಗೆಲ್ಲುವ ಸಾಧ್ಯತೆ ದಟ್ಟವಾಗಿದೆ