ಇಂದು ಆರ್‌ಸಿಬಿ-ಲಖನೌ ಮ್ಯಾಚ್ ರದ್ದಾದ್ರೆ ಯಾವ ತಂಡ ಮೊದಲ ಕ್ವಾಲಿಫೈಯರ್ ಆಡುತ್ತೆ?
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ಆರ್‌ಸಿಬಿ-ಲಖನೌ ತಂಡಗಳು ಮುಖಾಮುಖಿಯಾಗುತ್ತಿದೆ. ಈ ಪಂದ್ಯದ ಫಲಿತಾಂಶದ ಮೇಲೆ ಮೊದಲ ಕ್ವಾಲಿಫೈಯರ್ ಆಡೋದು ಯಾರು ಎನ್ನುವುದು ನಿರ್ಧಾರವಾಗುತ್ತೆ. ಆದ್ರೆ ಇಂದು ಪಂದ್ಯ ರದ್ದಾದ್ರೆ ಮೊದಲ ಕ್ವಾಲಿಫೈಯರ್ ಆಡೋದು ಯಾರು

ಮುಂಬೈ ಇಂಡಿಯನ್ಸ್ ಎದುರು ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 19 ಅಂಕಗಳನ್ನು ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದರ ಜತೆಗೆ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅರ್ಹತೆ ಗಿಟ್ಟಿಸಿಕೊಂಡಿದೆ.
ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯ ಆರ್‌ಸಿಬಿ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ.
ಹೌದು, ಲಖನೌ ಸೂಪರ್ ಜೈಂಟ್ಸ್ ತಂಡವು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ. ಲಖನೌ ತವರಿನಲ್ಲಿ ಗೆಲುವಿನೊಂದಿಗೆ ಅಭಿಯಾನ ಮುಗಿಸಲು ಎದುರು ನೋಡುತ್ತಿದೆ. ಇನ್ನೊಂದೆಡೆ ಆರ್‌ಸಿಬಿ ತಂಡದ ಬಳಿ ಸದ್ಯ 17 ಅಂಕ ಹೊಂದಿದ್ದು, ಈ ಪಂದ್ಯ ಗೆದ್ದರೇ 19 ಅಂಕಗಳೊಂದಿಗೆ ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಎದುರು ನೋಡುತ್ತಿದೆ.
ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ ಆರ್‌ಸಿಬಿ ಕಥೆ ಏನು ಎನ್ನುವ ಆತಂಕ ಅಭಿಮಾನಿಗಳಲ್ಲಿ ಶುರುವಾಗಿದೆ. ಯಾಕೆಂದರೆ ಹಾಗಾದಲ್ಲಿ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ. ಆಗ ಗುಜರಾತ್ ಟೈಟಾನ್ಸ್ ಹಾಗೂ ಆರ್‌ಸಿಬಿ ತಂಡದ ಅಂಕಗಳು ತಲಾ 18 ಅಂಕಗಳು ಇರಲಿವೆ.
ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಆರ್‌ಸಿಬಿ ಈ ಪಂದ್ಯದಲ್ಲಿ ಗೆಲ್ಲಬೇಕು. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೂ, ಆರ್‌ಸಿಬಿಗೆ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ -2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು.
ಗುಜರಾತ್ ಸದ್ಯ 18 ಅಂಕ ಹೊಂದಿದ್ದು, 0.254 ನೆಟ್ ರನ್‌ರೇಟ್ ಇದೆ. ಮಂಗಳವಾರದ ಪಂದ್ಯ ರದ್ದಾದರೆ 1 ಅಂಕ ಲಭಿಸಿ, ಆರ್‌ಸಿಬಿ ಅಂಕ 18 ಆಗುತ್ತದೆ. ತಂಡದ ನೆಟ್ ರನ್ ರೇಟ್ ಈಗ 0.255 ಇದೆ. ಅಂದರೆ 0.001 ಅಂತರದಲ್ಲಿ ಗುಜರಾತ್‌ಗಿಂತ ಹೆಚ್ಚಿದೆ. ಅಂಕಗಳು ಸಮಗೊಂಡರೆ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ ಅಗ್ರ-2 ಸ್ಥಾನ ಪಡೆಯಲಿದೆ.