ನಿಜಕ್ಕೂ ಪಾಕಿಸ್ತಾನದ ಆರ್ಥಿಕತೆಗಿಂತ ಐಪಿಎಲ್ 13 ಪಟ್ಟು ಮೌಲ್ಯಯುತವಾಗಿದೆಯೇ..? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
ಬೆಂಗಳೂರು: 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿ ಒಂದು ತಿಂಗಳಾಗುತ್ತಾ ಬಂದಿದ್ದರೂ, ಐಪಿಎಲ್ ಕುರಿತಾದ ಚರ್ಚೆಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇದೀಗ ನೆರೆಯ ಪಾಕಿಸ್ತಾನದ ಆರ್ಥಿಕತೆಯ ಮೌಲ್ಯಕ್ಕಿಂತ 13 ಪಟ್ಟ ಐಪಿಎಲ್ ಮೌಲ್ಯ ಹೆಚ್ಚಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಜಗತ್ತಿನ ಶ್ರೀಮಂತ ಟಿ20 ಲೀಗ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ಈ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕು ಎಂದು ಜಗತ್ತಿನ ತಾರಾ ಕ್ರಿಕೆಟಿಗರು ತುದಿಗಾಲಿನಲ್ಲಿ ನಿಂತಿರುತ್ತಾರೆ.
ಇತ್ತೀಚೆಗಷ್ಟೇ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಕುರಿತಾಗಿ ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ತನ್ನ ವರದಿಯನ್ನು ಪ್ರಕಟಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ, ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಸುಮಾರು 6.5% ಹೆಚ್ಚಾಗಿದೆ ಎಂದು ತಿಳಿಸಿದೆ.
17ನೇ ಆವೃತ್ತಿ ಬಳಿಕ ಸುಮಾರು 16.4 ಬಿಲಿಯನ್ ಡಾಲರ್(ಸುಮಾರು 1.36 ಲಕ್ಷ ಕೋಟಿ ರು.)ಗೆ ಏರಿಕೆಯಾಗಿದೆ ಎಂದು ಜಾಗತಿಕ ಹೂಡಿಕೆ ಬ್ಯಾಂಕ್ ಹೌಲಿಹಾನ್ ಲೋಕಿ ವರದಿ ಮಾಡಿದೆ. ಕಳೆದ ವರ್ಷ ಐಪಿಎಲ್ ಮೌಲ್ಯ 15.4 ಬಿಲಿಯನ್ ಡಾಲರ್(1.28 ಲಕ್ಷ ಕೋಟಿ ರು.) ಇತ್ತು.
ಇನ್ನು ಈ ವರದಿ ಪ್ರಕಟವಾದ ಬೆನ್ನಲ್ಲೇ, ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ ಪಾಕಿಸ್ತಾನದ ಆರ್ಥಿಕತೆಗಿಂತ 13 ಪಟ್ಟು ಹೆಚ್ಚಿದೆ ಎನ್ನುವ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಹರಿಡಾಡುತ್ತಿವೆ. ಇದರ ಸತ್ಯಾಸತ್ಯತೆ ನೋಡುವುದಾದರೇ..
ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿರುವ ವರದಿಗಳ ಪ್ರಕಾರ ಪಾಕಿಸ್ತಾನದ ಜಿಡಿಪಿ 1.27 ಬಿಲಿಯನ್ ಡಾಲರ್ ಆಗಿದೆ. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 10,414 ಕೋಟಿ ರುಪಾಯಿಗಳು.
ಇದೇ ನಿಜವಾದರೆ, ಖಂಡಿತವಾಗಿಯೂ ಐಪಿಎಲ್ ಬ್ರ್ಯಾಂಡ್ ವ್ಯಾಲ್ಯೂ, ಪಾಕಿಸ್ತಾನದ ಜಿಡಿಪಿಗಿಂತ 13 ಪಟ್ಟು ಹೆಚ್ಚಿದೆ. ಇಡೀ ಪಾಕಿಸ್ತಾನದ ಜಿಡಿಪಿಗಿಂತ ಐಪಿಎಲ್‌ನ ವಹಿವಾಟಿನ ಆರ್ಥಿಕತೆ 13 ಪಟ್ಟು ಹೆಚ್ಚಿದೆ.
ಇನ್ನು ಕೇವಲ ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ, ಇಡೀ ಪಾಕಿಸ್ತಾನದ ಆರ್ಥಿಕತೆಯ ಮೂರು ಪಟ್ಟು ಹೆಚ್ಚಿದೆ ಎನ್ನುವುದು ಅಚ್ಚರಿ ಎನಿಸಿದರೂ ಸತ್ಯ.
ಇನ್ನು ಈ ಕಾರಣಕ್ಕಾಗಿಯೇ ಹಣದ ಹೊಳೆಯೇ ಹರಿಯುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಗತ್ತಿನ ನಾನಾ ದೇಶಗಳ ಟಿ20 ಸ್ಪೆಷಲಿಸ್ಟ್ ಆಟಗಾರರು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹಾತೊರೆಯುತ್ತಿರುತ್ತಾರೆ.
ಐಪಿಎಲ್ ತಂಡಗಳಲ್ಲೇ ಅತ್ಯಂತ ಹೆಚ್ಚು ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ತಂಡವೆಂದರೆ ಅದು, ಐದು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ್ದು. ವರದಿಗಳ ಪ್ರಕಾರ ಸಿಎಸ್‌ಕೆ ಬ್ರ್ಯಾಂಡ್ ವ್ಯಾಲ್ಯೂ 231 ಮಿಲಿಯನ್ ಡಾಲರ್.
ಇನ್ನುಳಿದಂತೆ ಅತಿಹೆಚ್ಚು ಫ್ಯಾನ್ ಫಾಲೋವರ್ಸ್ ಹೊಂದಿರುವ ಆರ್‌ಸಿಬಿ ತಂಡದ ಬ್ರ್ಯಾಂಡ್ ವ್ಯಾಲ್ಯೂ 227 ಮಿಲಿಯನ್ ಡಾಲರ್ ಆಗಿದ್ದು, ಐಪಿಎಲ್‌ನ ಎರಡನೇ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದೆ ಫ್ರಾಂಚೈಸಿ ಎನಿಸಿಕೊಂಡಿದೆ.
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಬ್ರ್ಯಾಂಡ್ ವ್ಯಾಲ್ಯೂ 216 ಮಿಲಿಯನ್ ಡಾಲರ್ ಆಗಿದ್ದು, ಐಪಿಎಲ್‌ನ ಮೂರನೇ ಬ್ರ್ಯಾಂಡ್ ವ್ಯಾಲ್ಯೂ ಹೊಂದಿದ ತಂಡ ಎನಿಸಿಕೊಂಡಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕ್ಯಾಪ್ಟನ್ಸಿ ಸೇರಿದಂತೆ ನಾನಾ ಕಾರಣಗಳಿಗೆ ಸುದ್ದಿಯಾಗಿದ್ದ ಮುಂಬೈ ಇಂಡಿಯನ್ಸ್, ಟಾಪ್ 3 ಪಟ್ಟಿಯಿಂದ ಹೊರಬಿದ್ದಿದ್ದು, ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ವ್ಯಾಲ್ಯೂ 204 ಮಿಲಿಯನ್ ಡಾಲರ್ ಆಗಿದೆ.