- Home
- Sports
- Cricket
- IPL 2026: RCB vs GT ನಡುವಿನ ಮ್ಯಾಚ್ ಮಳೆಯಿಂದ ರದ್ದಾದ್ರೆ ಯಾರಿಗೆ ಲಾಭ? ಪ್ಲೇ ಆಫ್‌ಗೆ ಮೀಸಲು ದಿನವಿದೆಯಾ?
IPL 2026: RCB vs GT ನಡುವಿನ ಮ್ಯಾಚ್ ಮಳೆಯಿಂದ ರದ್ದಾದ್ರೆ ಯಾರಿಗೆ ಲಾಭ? ಪ್ಲೇ ಆಫ್‌ಗೆ ಮೀಸಲು ದಿನವಿದೆಯಾ?
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದು, ಇದೀಗ ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಕ್ವಾಲಿಫೈಯರ್-1 ಪಂದ್ಯದಲ್ಲಿ ಆರ್‌ಸಿಬಿ-ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದ್ದು, ಈ ಮ್ಯಾಚ್ ರದ್ದಾದ್ರೆ ಯಾರಿಗೆ ಲಾಭ ನೋಡೋಣ ಬನ್ನಿ.

ಕ್ವಾಲಿಫೈಯರ್-1 ಪಂದ್ಯಕ್ಕೆ ಕ್ಷಣಗಣನೆ
2026ರ ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೇ ಮೇ 26ರಿಂದ ಪ್ಲೇ ಆಫ್ ಪಂದ್ಯಗಳು ಆರಂಭವಾಗಲಿದೆ. ಮೇ 26ರಂದು ಧರ್ಮಶಾಲಾದಲ್ಲಿ ನಡೆಯಲಿರುವ ಕ್ವಾಲಿಫೈಯರ್-1 ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಕಾಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಕುತೂಹಲಕ್ಕೆ ಕಾರಣವಾದ ಕ್ವಾಲಿಫೈಯರ್-1 ಮ್ಯಾಚ್
ಈ ಪಂದ್ಯದಲ್ಲಿ ಗೆದ್ದ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಇನ್ನು ಸೋತ ತಂಡಕ್ಕೆ ಕ್ವಾಲಿಫೈಯರ್-2 ಪಂದ್ಯವನ್ನಾಡಲು ಅವಕಾಶವಿದೆ. ಆದರೆ ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿ ರದ್ದಾದರೇ ಮುಂದೇನು? ಯಾರಿಗೆ ಹೆಚ್ಚು ಅನುಕೂಲವಾಗಲಿದೆ? ಕ್ವಾಲಿಫೈಯರ್-1 ಪಂದ್ಯಕ್ಕೆ ಮೀಸಲು ದಿನವಿದಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ.
ಆರ್‌ಸಿಬಿಗಿದೆ ಗೋಲ್ಡನ್ ಚಾನ್ಸ್!
ಒಂದು ವೇಳೆ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್‌ಗೇರುವ ಸುವರ್ಣಾವಕಾಶ ಬಂದೊದಗಲಿದೆ. ಯಾಕೆಂದರೆ ಆರ್‌ಸಿಬಿ ತಂಡವು ಲೀಗ್ ಹಂತದ ಅಂತ್ಯದ ವೇಳೆಗೆ ನಂ.1 ಸ್ಥಾನ ಕಾಯ್ದುಕೊಂಡಿದೆ.
ಕ್ವಾಲಿಫೈಯರ್-1 ಪಂದ್ಯಕ್ಕೆ ಮೀಸಲು ದಿನವಿದೆಯಾ?
ದುರಾದೃಷ್ಟವಶಾತ್ ಐಪಿಎಲ್ ಪ್ಲೇ ಆಫ್‌ನ ಯಾವುದೇ ಪಂದ್ಯಕ್ಕೂ ಮೀಸಲು ದಿನವಿಲ್ಲ. ಫೈನಲ್ ಪಂದ್ಯಕ್ಕೆ ಮಾತ್ರ ಹೆಚ್ಚುವರಿ ಮೀಸಲು ದಿನವನ್ನು ಕಾಯ್ದಿರಿಸಲಾಗಿದೆ. ಹೀಗಾಗಿ ಲೀಗ್ ಹಂತದ ಅಂತ್ಯದ ವೇಳೆಗೆ ಯಾವ ತಂಡವು ಅಂಕಪಟ್ಟಿಯಲ್ಲಿ ಮೇಲಿರುತ್ತದೆಯೋ ಆ ತಂಡವು ಮುಂದಿನ ಹಂತಕ್ಕೆ ಪ್ರವೇಶ ಪಡೆಯಲಿದೆ.
ಕ್ವಾಲಿಫೈಯರ್-1 ಪಂದ್ಯ ರದ್ದಾದ್ರೆ?
ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಸತತ ಗೆಲುವಿನ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಒಂದು ವೇಳೆ ಮಳೆಯಿಂದ ಕ್ವಾಲಿಫೈಯರ್-1 ಪಂದ್ಯ ರದ್ದಾದರೇ, ಗುಜರಾತ್ ಗೆಲುವಿನ ಓಟಕ್ಕೆ ಕೊಂಚ ಬ್ರೇಕ್ ಬಿದ್ದಂತೆ ಆಗಲಿದೆ. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡದ ಎದುರು ಗುಜರಾತ್ ಟೈಟಾನ್ಸ್ ಮತ್ತೊಮ್ಮೆ ಕಾದಾಡಬೇಕಾಗುತ್ತದೆ.
ಸತತ ಎರಡನೇ ಬಾರಿಗೆ ಫೈನಲ್ ಮೇಲೆ ಕಣ್ಣಿಟ್ಟ ಆರ್‌ಸಿಬಿ
ರಜತ್ ಪಾಟೀದಾರ್ ನೇತೃತ್ವದ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದು, ಇದೀಗ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಎಂಟ್ರಿಕೊಡಲು ಎದುರು ನೋಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

