ಸನ್‌ರೈಸರ್ಸ್ ಹೈದರಾಬಾದ್ ತನ್ನನ್ನು ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಮಾಡಿದೆ ಎಂದು ಮಾಜಿ ನಾಯಕ ಡೇವಿಡ್ ವಾರ್ನರ್ ಬಹಿರಂಗಪಡಿಸಿದ್ದಾರೆ. ಒಂದು ಕಾಲದಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದ ವಾರ್ನರ್, 2021ರ ಸೀಸನ್‌ನಲ್ಲಿ ಮ್ಯಾನೇಜ್‌ಮೆಂಟ್ ಜೊತೆಗಿನ ಭಿನ್ನಾಭಿಪ್ರಾಯದಿಂದ ತಂಡದಿಂದ ಹೊರಬಿದ್ದಿದ್ದರು. ಈ ಘಟನೆ ಅವರ ಮತ್ತು ಫ್ರಾಂಚೈಸಿ ನಡುವಿನ ಹಳಸಿದ ಸಂಬಂಧವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಮೆಲ್ಬೋರ್ನ್: ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನನ್ನು ಈಗಲೂ 'ಬ್ಲಾಕ್' ಮಾಡಿದೆ ಅಂತ ತಂಡದ ಮಾಜಿ ನಾಯಕ ಡೇವಿಡ್ ವಾರ್ನರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್‌ನ ಇನ್‌ಸ್ಟಾಗ್ರಾಂ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ವಾರ್ನರ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಯಾರನ್ನಾದರೂ ಬ್ಲಾಕ್ ಮಾಡಿದಾಗ ಕಾಣಿಸುವ ಹಾಗೆ, ವಾರ್ನರ್ ಶೇರ್ ಮಾಡಿದ ಸ್ಕ್ರೀನ್‌ಶಾಟ್‌ನಲ್ಲಿ ಸನ್‌ರೈಸರ್ಸ್ ಖಾತೆ 'ಪ್ರೈವೇಟ್' ಎಂದು ಕಾಣಿಸುತ್ತಿದೆ.

ಇದರ ಜೊತೆಗೆ, "ಇದು ನಿಜವಾಗಿಯೂ ಸನ್‌ರೈಸರ್ಸ್‌ನ ಅಧಿಕೃತ ಖಾತೆಯೇ?" ಅಂತ ಕೇಳಿ ವಾರ್ನರ್ ಒಂದು ಪೋಲ್ ಕೂಡ ಹಾಕಿದ್ದಾರೆ. ಮೊನ್ನೆ ವಾರ್ನರ್ ಹಾಕಿದ್ದ ಇನ್‌ಸ್ಟಾಗ್ರಾಂ ಪೋಸ್ಟ್‌ ಒಂದರ ಕೆಳಗೆ ಅಭಿಮಾನಿಯೊಬ್ಬರು ಮಾಡಿದ ಕಾಮೆಂಟ್‌ನಿಂದ ಈ ಇಡೀ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಆ ಅಭಿಮಾನಿ, ಸನ್‌ರೈಸರ್ಸ್ ಹೈದರಾಬಾದ್ ಖಾತೆಯನ್ನು ಟ್ಯಾಗ್ ಮಾಡಿ, ವಾರ್ನರ್ ಅವರನ್ನು ಅನ್‌ಬ್ಲಾಕ್ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಉತ್ತರವಾಗಿ ವಾರ್ನರ್, "ಅವರು ನನ್ನನ್ನು ಎಂದಿಗೂ ಅನ್‌ಬ್ಲಾಕ್ ಮಾಡುವುದಿಲ್ಲ," ಎಂದು ಬರೆದುಕೊಂಡಿದ್ದಾರೆ.

Scroll to load tweet…

ಸನ್‌ರೈಸರ್ಸ್ ಮತ್ತು ವಾರ್ನರ್ ನಡುವಿನ ಮುನಿಸು

2024ರ ಸೀಸನ್ ನಂತರ ಡೇವಿಡ್ ವಾರ್ನರ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿಲ್ಲ. ಇತ್ತೀಚೆಗೆ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಆಡಿದ್ದ ಅವರು, ಜಗತ್ತಿನಾದ್ಯಂತ ಬೇರೆ ಬೇರೆ ಟ್ವೆಂಟಿ20 ಲೀಗ್‌ಗಳಲ್ಲಿ ಸಕ್ರಿಯವಾಗಿದ್ದಾರೆ. ಸದ್ಯಕ್ಕೆ ಫ್ರಾಂಚೈಸಿಯೊಂದಿಗೆ ದೊಡ್ಡ ಮಟ್ಟದ ಮುನಿಸು ಇದ್ದರೂ, ಐಪಿಎಲ್ ಇತಿಹಾಸದಲ್ಲಿ ವಾರ್ನರ್ ಮತ್ತು ಹೈದರಾಬಾದ್ ಜೋಡಿ ಅತ್ಯಂತ ಯಶಸ್ವಿ ಕಾಂಬಿನೇಷನ್‌ಗಳಲ್ಲಿ ಒಂದಾಗಿತ್ತು. 2014ರಲ್ಲಿ ಹೈದರಾಬಾದ್ ತಂಡಕ್ಕೆ ಬಂದ ವಾರ್ನರ್, ಅದರ ಮರು ವರ್ಷವೇ ತಂಡದ ನಾಯಕರಾದರು. 2016ರಲ್ಲಿ ಸನ್‌ರೈಸರ್ಸ್ ತನ್ನ ಏಕೈಕ ಐಪಿಎಲ್ ಟ್ರೋಫಿ ಗೆದ್ದಿದ್ದು ವಾರ್ನರ್ ನಾಯಕತ್ವದಲ್ಲಿಯೇ.

ಸನ್‌ರೈಸರ್ಸ್ ಹೈದರಾಬಾದ್ ಪರ ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದಿರುವ ವಾರ್ನರ್

ಹೈದರಾಬಾದ್ ಪರ 95 ಪಂದ್ಯಗಳಲ್ಲಿ ವಾರ್ನರ್ 49.56ರ ಸರಾಸರಿಯಲ್ಲಿ 4014 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು 40 ಅರ್ಧಶತಕಗಳು ಸೇರಿವೆ. 2015, 2017 ಮತ್ತು 2019ರಲ್ಲಿ ಡೇವಿಡ್ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದಾಗಲೇ ಐಪಿಎಲ್‌ನ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು. ತನ್ನ ಸ್ಫೋಟಕ ಬ್ಯಾಟಿಂಗ್ ಅಷ್ಟೇ ಅಲ್ಲದೆ, ತೆಲುಗು ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡುವ ಮೂಲಕ ಹೈದರಾಬಾದ್ ಅಭಿಮಾನಿಗಳ ಪಾಲಿನ 'ಕಲ್ಟ್ ಹೀರೋ' ಆಗಿ ಈ ಆಸ್ಟ್ರೇಲಿಯಾದ ಓಪನರ್ ಗುರುತಿಸಿಕೊಂಡಿದ್ದರು.

ಆದರೆ 2021ರ ಸೀಸನ್‌ನಲ್ಲಿ ಎಲ್ಲವೂ ಬದಲಾಯಿತು. ಕಳಪೆ ಫಾರ್ಮ್ ಮತ್ತು ಸತತ ಸೋಲುಗಳಿಂದಾಗಿ, ಸೀಸನ್ ಮಧ್ಯದಲ್ಲೇ ಮ್ಯಾನೇಜ್‌ಮೆಂಟ್ ವಾರ್ನರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿತು. ನಂತರ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಆಡುವ ಬಳಗದಿಂದಲೂ ಹೊರಗಿಟ್ಟಿತು. ಇದಾದ ಬಳಿಕ ಡೇವಿಡ್ ವಾರ್ನರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿತು. ಮರುವರ್ಷ ವಾರ್ನರ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಡೇವಿಡ್ ವಾರ್ನರ್‌ಗೆ ಗೇಟ್‌ಪಾಸ್ ನೀಡಿತು.