IPL 2025 ಮುಂಬೈನಲ್ಲಿ ಹೊಸ ಇತಿಹಾಸ ನಿರ್ಮಿಸಲು ರೆಡಿಯಾದ ಆರ್‌ಸಿಬಿ! ಇದು ಸಾಧ್ಯನಾ?
ಮುಂಬೈ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ತಂಡವು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಹೊಸ ಇತಿಹಾಸ ನೆಡಲು ನಮ್ಮ ಆರ್‌ಸಿಬಿ ರೆಡಿಯಾಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತವರಿನಾಚೆ ಸತತ ಎರಡು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆರ್‌ಸಿಬಿ ತಂಡವು ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸಿತ್ತು. ಇದೀಗ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲಿಗೆ ಸಜ್ಜಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕೆ ಐತಿಹಾಸಿಕ ವಾಂಖೆಡೆ ಮೈದಾನ ಆತಿಥ್ಯ ವಹಿಸಿದೆ. ಉಭಯ ತಂಡಗಳು ಟೂರ್ನಿಯಲ್ಲಿ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಒಂದು ಕಡೆ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಒಂದು ಸೋಲು ಸಹಿತ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
Image Credit: ANI
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಆಡಿದ 4 ಪಂದ್ಯಗಳ ಪೈಕಿ ಕೇವಲ ಒಂದು ಗೆಲುವು ಹಾಗೂ ಮೂರು ಸೋಲು ಸಹಿತ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಇಂದು ಆರ್‌ಸಿಬಿ ತಂಡವು ಮುಂಬೈನ ವಾಂಖೆಡೆ ಭದ್ರಕೋಟೆ ಭೇದಿಸೋ ಕನಸು ಕಾಣುತ್ತಿದೆ. ಮುಂಬೈನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸೋದು ಆರ್‌ಸಿಬಿಗೆ ಅಷ್ಟು ಸುಲಭದ ಮಾತಲ್ಲ.
ಆದ್ರೆ ಕಮ್‌ಬ್ಯಾಕ್ ಮಾಡುವುದಕ್ಕೆ ಹೆಸರುವಾಸಿಯಾಗಿರುವ ಆರ್‌ಸಿಬಿ ಇದೇ ಐಪಿಎಲ್‌ನಲ್ಲಿ 17 ವರ್ಷಗಳ ಬಳಿಕ ಚೆಪಾಕ್ ಭದ್ರಕೋಟೆ ಪುಡಿಮಾಡಿತ್ತು. ಇದೀಗ ಬರೋಬ್ಬರಿ ಒಂದು ದಶಕದ ಬಳಕ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲುವಿನ ಬೇಟೆಗೆ ಆರ್‌ಸಿಬಿ ರೆಡಿಯಾಗಿದೆ.
2015ರಲ್ಲಿ ಆರ್‌ಸಿಬಿ ತಂಡವು ಕೊನೆಯ ಸಲ ವಾಂಖೆಡೆಯಲ್ಲಿ ಗೆದ್ದಿತ್ತು. ಇದಾದ ಬಳಿಕ ವಾಂಖೆಡೆಯಲ್ಲಿ ಆರ್‌ಸಿಬಿಗೆ ಒಂದೇ ಒಂದು ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ. ಇದೀಗ ಇತಿಹಾಸದ ವಿರುದ್ದ ಈಜಲು ಬೆಂಗಳೂರು ಸಜ್ಜಾಗಿದೆ.
ವಾಂಖೇಡೆಯಲ್ಲಿ ಮುಂಬೈ ಎದುರು ಆರ್‌ಸಿಬಿ 11 ಪಂದ್ಯಗಳನ್ನಾಡಿದ್ದು ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಇನ್ನುಳಿದ 8 ಪಂದ್ಯಗಳನ್ನು ಸೋತಿದೆ. ಮುಂಬೈ ಇಂಡಿಯನ್ಸ್ ಭದ್ರಕೋಟೆ ವಾಂಖಡೆಯನ್ನು ಆರ್‌ಸಿಬಿ ಪುಡಿಗಟ್ಟುತ್ತಾ? ಈ ಪಂದ್ಯ ಗೆಲ್ಲೋರು ಯಾರು ಕಮೆಂಟ್ ಮಾಡಿ.