RCB ಅಗ್ರಸ್ಥಾನಕ್ಕೇರಲು ಮತ್ತೊಂದು ಸುವರ್ಣಾವಕಾಶ! ಇಲ್ಲಿದೆ ಟಾಪ್ 2 ಲೆಕ್ಕಾಚಾರ
ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇವೆ. ಹೀಗಿದ್ದು ಮೊದಲ ಕ್ವಾಲಿಫೈಯರ್ ಪಂದ್ಯ ಆಡೋರು ಯಾರು ಎನ್ನುವ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಆರ್‌ಸಿಬಿಗೆ ಅಗ್ರಸ್ಥಾನಕ್ಕೇರಲು ಮತ್ತೊಂದು ಅವಕಾಶ ಒದಗಿ ಬಂದಿದೆ

ಗುಜರಾತ್ ಟೈಟಾನ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ಐಪಿಎಲ್ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯುವ ರೇಸ್ ಮತ್ತಷ್ಟು ಚುರುಕಾಗಿದೆ.
ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್, ಆರ್‌ಸಿಬಿ, ಮುಂಬೈ ಈ 4 ತಂಡಕ್ಕೂ ಅಗ್ರ-2ರಲ್ಲಿ ಸ್ಥಾನ ಗಿಟ್ಟಿಸಿ ಕೊಳ್ಳಬಹುದು. ಅಂಕಪಟ್ಟಿಯಲ್ಲಿ ಅಗ್ರ -2 ತಂಡಗಳಿಗೆ ಫೈನಲ್‌ಗೇರಲು 2 ಅವಕಾಶ ಸಿಗಲಿದೆ. ಹೀಗಾಗಿ ಪ್ರತಿ ತಂಡಕ್ಕೂ ಕ್ವಾಲಿಫೈಯರ್ -1ರ ಮೇಲೆ ಕಣ್ಣಿದೆ.
ಸದ್ಯ ಗುಜರಾತ್ ಟೈಟಾನ್ಸ್ 18, ಪಂಜಾಬ್ ಕಿಂಗ್ಸ್ 17, ರಾಯಲ್ ಚಾಲೆಂಜರ್ಸ್ ಬೆಂಗಳೂರು 17 ಹಾಗೂ ಮುಂಬೈ ಇಂಡಿಯನ್ಸ್ 16 ಅಂಕ ಹೊಂದಿವೆ. ಗುಜರಾತ್‌ನ ಎಲ್ಲಾ ಪಂದ್ಯ ಕೊನೆಗೊಂಡಿದೆ. ಹೀಗಿದ್ದೂ ಈ ಎಲ್ಲಾ 4 ತಂಡಗಳಿಗೂ ಮೊದಲು ಕ್ವಾಲಿಫೈಯರ್ ಆಡಲು ಸಮಾನ ಅವಕಾಶವಿದೆ.
ಅದರಲ್ಲೂ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಕೊನೆ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದರೆ ಅಗ್ರ -2ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತ. ಸೋತರೆ 3 ಅಥವಾ 4ನೇ ಸ್ಥಾನಿಯಾಗಿ ಎಲಿಮಿನೇಟರ್ ಆಡಬೇಕಾಗುತ್ತದೆ.
ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ - ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಕ್ವಾಲಿಫೈಯರ್-1ರಲ್ಲಿ ಆಡಲಿದೆ. ಸದ್ಯ ಪಂಜಾಬ್ ಗೆದ್ದರೇ 19 ಅಂಕ ಆಗಲಿದೆ. ಮುಂಬೈ ಗೆದ್ದರೇ 18 ಅಂಕ ಆಗಲಿದೆ. ನೆಟ್ ರನ್‌ರೇಟ್ ಉತ್ತಮವಾಗಿರುವುದರಿಂದ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಲಿದೆ.
ಲಖನೌ ಎದುರು ಆರ್‌ಸಿಬಿ ಗೆದ್ದು, ಮುಂಬೈ -ಪಂಜಾಬ್ ಪಂದ್ಯದಲ್ಲೂ ಫಲಿ ತಾಂಶ ಬಂದರೆ ಆಗ ಗುಜರಾತ್ 3 ಅಥವಾ 4ನೇ ಸ್ಥಾನಕ್ಕೆ ಕುಸಿಯಲಿದೆ. ಆರ್‌ಸಿಬಿ ಸೋತು, ಮುಂಬೈ-ಪಂಜಾಬ್ ಪಂದ್ಯ ಮಳೆಗೆ ರದ್ದಾದರೆ ಮಾತ್ರ ಗುಜರಾತ್ ಅಗ್ರ-2 ಸ್ಥಾನ ಉಳಿಸಿಕೊಳ್ಳಲಿದೆ.