IPL 2023: ವಿಲ್ ಜ್ಯಾಕ್ಸ್ ಬದಲಿಗೆ RCB ತಂಡಕ್ಕೆ ಹೊಸ ಕಿವೀಸ್ ಅಸ್ತ್ರ ಸೇರ್ಪಡೆ...!
ಬೆಂಗಳೂರು: ಬಹುನಿರೀಕ್ಷಿತ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಆರ್‌ಸಿಬಿ ಖರೀದಿಸಿದ್ದ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್, ಗಾಯದ ಸಮಸ್ಯೆಯಿಂದ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಇದೀಗ ವಿಲ್ ಜ್ಯಾಕ್ಸ್ ಬದಲಿಗೆ ಕಿವೀಸ್ ಸ್ಟಾರ್ ಆಲ್ರೌಂಡರ್ ಆರ್‌ಸಿಬಿ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಯಾರು ಆ ಆಟಗಾರ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

16ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಮಾರ್ಚ್ 31ರಿಂದ ಆರಂಭವಾಗಲಿದ್ದು, ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿದೆ.
ಹೀಗಾಗಿ ಕೆಲ ದಿನಗಳ ಹಿಂದಷ್ಟೇ ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಸಾಕಷ್ಟು ಅಳೆದು ತೂಗಿ ಬರೋಬ್ಬರಿ 3.2 ಕೋಟಿ ರುಪಾಯಿ ನೀಡಿ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ವಿಲ್ ಜ್ಯಾಕ್ಸ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
24 ವರ್ಷದ ಇಂಗ್ಲೆಂಡ್ ಸ್ಪೋಟಕ ಬ್ಯಾಟರ್ ಜ್ಯಾಕ್ಸ್, ಟಿ20 ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದರು. ಆದರೆ ಬಾಂಗ್ಲಾದೇಶ ಎದುರಿನ ಟಿ20 ಸರಣಿಯ ವೇಳೆ ಗಾಯಗೊಂಡು, ಇದೀಗ ಸಂಪೂರ್ಣ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಇದೀಗ ವಿಲ್ ಜ್ಯಾಕ್ಸ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ನ್ಯೂಜಿಲೆಂಡ್‌ನ ಸ್ಟಾರ್ ಆಲ್ರೌಂಡರ್ ಮಿಚೆಲ್ ಬ್ರಾಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಒಂದು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಮಿಚೆಲ್ ಬ್ರಾಸ್‌ವೆಲ್ ಅವರನ್ನು ಹರಾಜಿನಲ್ಲಿ ಖರೀದಿಸಲು ಯಾವ ಫ್ರಾಂಚೈಸಿಯು ಖರೀದಿಸಲು ಒಲವು ತೋರಿರಲಿಲ್ಲ. ಆದರೆ ಇದೀಗ ಮೂಲಬೆಲೆಗೆ ಬ್ರಾಸ್‌ವೆಲ್, ಆರ್‌ಸಿಬಿ ಪಾಳಯ ಕೂಡಿಕೊಂಡಿದ್ದಾರೆ.
ಮಿಚೆಲ್ ಬ್ರಾಸ್‌ವೆಲ್ 2022ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಐರ್ಲೆಂಡ್ ಎದುರು ತಾವಾಡಿದ ಎರಡನೇ ಟಿ20 ಪಂದ್ಯದಲ್ಲಿ ಬ್ರಾಸ್‌ವೆಲ್ ತಾವೆಸೆದ ಮೊದಲ ಓವರ್‌ನಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಮೂಲಕ ಅಪರೂಪದ ಸಾಧನೆ ಮಾಡಿದ್ದರು.
ಇದಷ್ಟೇ ಆಲ್ಲದೇ ಕಳೆದ ಜುಲೈನಲ್ಲಿ ಭಾರತ ವಿರುದ್ದ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಇದರ ಜತೆಗೆ ಮಹೇಂದ್ರ ಸಿಂಗ್ ಧೋನಿ ಬಳಿಕ 7 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಶತಕ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆಗೂ ಭಾಜನರಾಗಿದ್ದರು.
ಮಿಚೆಲ್ ಬ್ರಾಸ್‌ವೆಲ್ ಇದುವರೆಗೂ ನ್ಯೂಜಿಲೆಂಡ್ ಪರ 6 ಟೆಸ್ಟ್, 19 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 224, 510 ಹಾಗೂ 113 ರನ್ ಬಾರಿಸಿದ್ದಾರೆ. ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ಒಟ್ಟಾರೆ 54 ವಿಕೆಟ್ ಕಬಳಿಸಿದ್ದಾರೆ.
ಮಿಚೆಲ್ ಬ್ರಾಸ್‌ವೆಲ್ ಸೇರ್ಪಡೆ ಆರ್‌ಸಿಬಿ ತಂಡದ ಅದೃಷ್ಟವನ್ನು ಬದಲಿಸುತ್ತಾ?, ಆರ್‌ಸಿಬಿ ತಂಡವು ಈ ಬಾರಿಯಾದರೂ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.