ಕೋಚ್-ಕ್ಯಾಪ್ಟನ್ ಮಧ್ಯೆ ಸ್ಪಷ್ಟತೆಯೇ ಇರಲಿಲ್ಲ - ಹೀನಾಯ ಸೋಲಿಗೆ ಈ ಐದು ಬ್ಲಂಡರ್‍ಗಳೇ ಕಾರಣ..!
ಟಿ-20 ಸರಣಿಯ ಹೀನಾಯ ಸೋಲಿಗೆ ಪ್ರಮುಖ ಕಾರಣ ಕೋಚ್ ಗಂಭೀರ್ ಮತ್ತು ಕ್ಯಾಪ್ಟನ್ ಅಯ್ಯರ್ ತೆಗೆದುಕೊಂಡ ಪ್ರಮುಖ ನಿರ್ಧಾರಗಳೇ ಕಾರಣ. ಈ ಮಧ್ಯೆ ಗಂಭೀರ್ ಮತ್ತು ಅಯ್ಯರ್ ನಡುವೆ ಸಮನ್ವಯತೆ ಇರಲಿಲ್ವಾ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಭಾರತ ತಂಡದ ಮಾಡಿದ ಬ್ಲಂಡರ್‍ಗಳು ಏನು ಅನ್ನೋ ವಿವರ ಇಲ್ಲಿದೆ..

ಅಯ್ಯರ್ ನಾಯಕತ್ವದಲ್ಲಿ ಸತತ 6 ಸೋಲುಗಳು
ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಟಿ20 ತಂಡ ಇಂಗ್ಲೆಂಡ್‌ನಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಶನಿವಾರ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಸೋಲೊಪ್ಪಿಕೊಂಡಿದ್ದು, ಸರಣಿಯನ್ನು 0-4 ಅಂತರದಿಂದ ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿದೆ. ಮೊದಲ ಪಂದ್ಯ ಮಳೆಯಿಂದ ರದ್ದಾದ ನಂತರ ಉಳಿದ ನಾಲ್ಕೂ ಪಂದ್ಯಗಳಲ್ಲಿ ಭಾರತ ಹೀನಾಯವಾಗಿ ಸೋತಿದೆ. ವಿಶೇಷವೆಂದರೆ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ 6 ಪಂದ್ಯಗಳನ್ನು ಸೋತಂತಾಗಿದೆ.
ಬ್ಯಾಟರ್‌ಗಳ ಆಯ್ಕೆ ವಿಚಾರದಲ್ಲಿ ಅಸ್ಪಷ್ಟತೆ
ಸರಣಿಯ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಆಡಿದ್ದರು. ನಂತರ ಅವರನ್ನು ಕೈಬಿಟ್ಟು ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಲಾಯಿತು. ವೈಭವ್ ತಂಡಕ್ಕೆ ಬಂದಿದ್ದು ಸೀನಿಯರ್ ಬ್ಯಾಟರ್‌ಗಳಲ್ಲಿ ಅಭದ್ರತೆ ಮೂಡಿಸಿತು. ವೇಗವಾಗಿ ಆಡದಿದ್ದರೆ ತಂಡದಿಂದ ಹೊರಬೀಳುತ್ತೇವೆ ಎಂಬ ಭಯದಿಂದ ಸಂಜು, ಇಶಾನ್ ಕಿಶನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಎಸೆತದಿಂದಲೇ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಇಂಗ್ಲೆಂಡ್ ಬ್ಯಾಟರ್‌ಗಳು ರನ್ ಮಳೆ ಹರಿಸಿದ ಪಿಚ್‌ನಲ್ಲಿ ಭಾರತದ ಬ್ಯಾಟರ್‌ಗಳು ಪಾರ್ಟ್‌ನರ್‌ಶಿಪ್ ನಿರ್ಮಿಸುವ ಬದಲು ಕೇವಲ ಸಿಕ್ಸರ್ ಗಳ ಬೆನ್ನತ್ತಿ ಕ್ಯಾಚ್ ನೀಡಿ ಔಟಾದರು.
ಬ್ಯಾಟಿಂಗ್ ಕ್ರಮಾಂಕ
ತಂಡದ ಮ್ಯಾನೇಜ್‌ಮೆಂಟ್ ಬ್ಯಾಟಿಂಗ್ ಕ್ರಮಾಂಕದೊಂದಿಗೆ ನಿರಂತರವಾಗಿ ಪ್ರಯೋಗ ಮಾಡಿತು. ತಿಲಕ್ ವರ್ಮಾ ಈ ಹಿಂದೆ ಮೂರನೇ ಕ್ರಮಾಂಕದಲ್ಲಿ ಆಡಿ ಸತತ ಎರಡು ಶತಕ ಸಿಡಿಸಿದ್ದರು. ಆದರೆ ಅವರನ್ನು 5 ಅಥವಾ 6ನೇ ಕ್ರಮಾಂಕಕ್ಕೆ ತಳ್ಳಲಾಯಿತು. ಶಿವಂ ದುಬೆ ಸ್ಥಾನವೂ ಸ್ಥಿರವಾಗಿರಲಿಲ್ಲ. ಒಮ್ಮೆ ಮೇಲೆ, ಒಮ್ಮೆ ಕೆಳಗೆ ಕಳುಹಿಸುವ ಮೂಲಕ ಬ್ಯಾಟರ್‌ಗಳ ಆತ್ಮವಿಶ್ವಾಸವನ್ನೇ ಕುಗ್ಗಿಸಲಾಯಿತು. ಆಲ್-ರೌಂಡರ್‌ಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಸಂಪೂರ್ಣ ಫ್ಲಾಪ್ ಆದರು.
ಬೌಲಿಂಗ್ ವಿಭಾಗದಲ್ಲಿ ಅಸ್ಥಿರತೆ
ಪ್ರತಿ ಪಂದ್ಯದ ನಂತರ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡಿದ್ದು ತಂಡದ ಮೇಲಿದ್ದ ಒತ್ತಡವನ್ನು ಎತ್ತಿ ತೋರಿಸುತ್ತಿತ್ತು. ಐರ್ಲೆಂಡ್ ವಿರುದ್ಧ 3 ವಿಕೆಟ್ ಪಡೆದಿದ್ದ ಪ್ರಿನ್ಸ್ ಯಾದವ್ ಅವರನ್ನು ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲೇ ಕೈಬಿಡಲಾಯಿತು. ವಾಷಿಂಗ್ಟನ್ ಸುಂದರ್ ಬರುವುದು ಮತ್ತು ಹೋಗುವುದು ನಿರಂತರವಾಗಿತ್ತು. ನಾಯಕ ಅಯ್ಯರ್ ಮತ್ತು ಕೋಚ್ ನಡುವೆ ಸ್ಪಷ್ಟತೆ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಯ್ತು. 5 ಸ್ಪೆಷಲಿಸ್ಟ್ ಬೌಲರ್‌ಗಳ ಬದಲು ಅರೆಕಾಲಿಕ ಬೌಲರ್‌ಗಳನ್ನು ನಂಬಿದ್ದು ಸೋಲಿಗೆ ದಾರಿ ಮಾಡಿಕೊಟ್ಟಿತು.
ಸ್ಪಿನ್ನರ್‌ಗಳ ಮೌನ, ಎದುರಾಳಿಗಳ ಅಬ್ಬರ
ಇಂಗ್ಲೆಂಡ್ ಸ್ಪಿನ್ನರ್‌ಗಳು ಈ ಸರಣಿಯಲ್ಲಿ ಒಟ್ಟು 10 ವಿಕೆಟ್ ಪಡೆದರೆ, ಭಾರತದ ಸ್ಪಿನ್ನರ್‌ಗಳು ಪಡೆದಿದ್ದು ಕೇವಲ 3 ವಿಕೆಟ್! ಐದನೇ ಟಿ20ಯಲ್ಲಿ ಅಕ್ಷರ್ ಪಟೇಲ್ 4 ಓವರ್‌ಗಳಲ್ಲಿ ಬರೋಬ್ಬರಿ 63 ರನ್ ನೀಡಿದರು. ವಾಷಿಂಗ್ಟನ್ ಸುಂದರ್ ಎಫೆಕ್ಟಿವ್ ಆಗಿ ಕಾಣಲಿಲ್ಲ. ಇಂಗ್ಲೆಂಡ್ ಬೌಲರ್‌ಗಳು ತಮ್ಮ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡರೆ, ಭಾರತದ ಸ್ಪಿನ್ ಪಡೆ ಅಟ್ಟರ್ ಫ್ಲಾಪ್ ಆಯಿತು.
ಫೀಲ್ಡಿಂಗ್‌ನಲ್ಲಿ ಹೀನಾಯ ಪ್ರದರ್ಶನ
ವಿಶ್ವದ ನಂಬರ್ 1 ತಂಡ ಎಂದು ಕರೆಸಿಕೊಳ್ಳುವ ಭಾರತಕ್ಕೆ ಈ ಸರಣಿಯ ಫೀಲ್ಡಿಂಗ್ ಶೋಭೆ ತರುವಂತಿರಲಿಲ್ಲ. ಸುಲಭದ ಕ್ಯಾಚ್‌ಗಳನ್ನು ಕೈಬಿಡುವುದು, ಮೈದಾನದಲ್ಲಿ ಚುರುಕಿಲ್ಲದ ಓಟ ಮತ್ತು ಕಳಪೆ ಬಾಡಿ ಲ್ಯಾಂಗ್ವೇಜ್ ಭಾರತ ಮೊದಲೇ ಸೋಲೊಪ್ಪಿಕೊಂಡಂತೆ ಕಾಣುತ್ತಿತ್ತು. ಇಂಗ್ಲೆಂಡ್‌ನಂತಹ ಬಲಿಷ್ಠ ತಂಡದ ಎದುರು ಈ ಮಟ್ಟದ ಕಳಪೆ ಫೀಲ್ಡಿಂಗ್ ಮಾಡುವುದು ಪಂದ್ಯವನ್ನು ಉಡುಗೊರೆಯಾಗಿ ನೀಡಿದಂತೆಯೇ ಸರಿ.
ಶ್ರೇಯಸ್ ಅಯ್ಯರ್ ಸೋಲಿಗೆ ಮೈದಾನದ ಗಾತ್ರದ ಕಾರಣ ನೀಡುತ್ತಿರಬಹುದು. ಆದರೆ ವಾಸ್ತವದಲ್ಲಿ ಮ್ಯಾನೇಜ್‌ಮೆಂಟ್‌ನ ಗೊಂದಲ, ಬ್ಯಾಟರ್‌ಗಳ ಅತಿಯಾದ ಆಕ್ರಮಣಕಾರಿ ಧೋರಣೆ ಮತ್ತು ಕಳಪೆ ಫೀಲ್ಡಿಂಗ್ ಭಾರತದ 0-4 ಸೋಲಿಗೆ ಅಸಲಿ ಕಾರಣಗಳಾಗಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

